ಬಲ್ನಾಡು ಹಾಲು ಉತ್ಪಾದಕರ ಸಹಕಾರ ಸಂಘದ ಸಾಮಾನ್ಯ ಸಭೆ – ರೂ.7,32,68 ಲಾಭ, ಶೇ.10 ಡಿವಿಡೆಂಡ್, 35 ಪೈಸೆ ಬೋನಸ್

0

ಪುತ್ತೂರು: ಬಲ್ನಾಡು ಹಾಲು ಉತ್ಪಾದಕರ ಸಹಕಾರ ಸಂಘುವು 2023-24ನೇ ಸಾಲಿನಲ್ಲಿ ರೂ.73,268.40 ಲಾಭ ಗಳಿಸಿದೆ. ಸದಸ್ಯರಿಗೆ ಶೇ.10 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಪ್ರತಿ ಲೀ. ಹಾಲಿಗೆ 35 ಪೈಸೆ ಬೋನಸ್ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಎ.ಎಂ ಪ್ರವೀಣ ಚಂದ್ರ ಆಳ್ವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಣೆ ಮಾಡಿದರು.
ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಆ.20ರಂದು ಸಂಘದ ಸಭಾಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವರದಿ ವರ್ಷದಲ್ಲಿ ಸಂಘವು 84 ಸದಸ್ಯರಿಂದ ರೂ.16,800 ಪಾಲು ಬಂಡವಾಳ ಹೊಂದಿದೆ. ರೈತರಿಂದ 1,00,972.6 ಲೀಟರ್ ಹಾಲು ಖರೀದಿಸಿ 96,945 ಲೀ ಹಾಲನ್ನು ಒಕ್ಕೂಟಕ್ಕೆ ಮಾರಾಟ ಮಾಡಲಾಗಿದೆ. 7,878.5 ಲೀ. ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ. 595.2ಲೀ. ಮಾದರಿ ಹಾಲು ಮಾರಾಟ ಮಾಡಲಾಗಿದೆ. ಹಾಲು ಮಾರಾಟದಿಂದ ಸಂಘಕ್ಕೆ ರೂ.3,79,106.51 ಆದಾಯ ಬಂದಿದೆ. ಪಶು ಆಹಾರ, ಲವಣ ಮಿಶ್ರಣ ಮಾರಾಟ ಹಾಗೂ ಇತರ ಮೂಲಗಳಿಂದ ರೂ.87,865.95 ಆದಾಯ ಬಂದಿದೆ ಎಂದರು.


ದರ ಪರಿಷ್ಕರಣೆಯಾದರೆ ಮಾತ್ರ ಹೈನುಗಾರಿಕೆ ಉಳಿಯಬಹುದು:
ಲೀಟರ್ ಹಾಲಿಗೆ ಉತ್ಪಾದಕರಿಗೆ ದೊರೆಯುವ ದರ ತೀರಾ ಕಡಿಮೆಯಾಗಿದೆ. ಈ ದರದಲ್ಲಿ ಹೈನುಗಾರಿಕೆ ನಡೆಸಲು ಸಾಧ್ಯವಿಲ್ಲ. ಹಾಲಿಗೆ ಕನಿಷ್ಠ ರೂ.40 ದೊರೆತರೆ ಮಾತ್ರ ನಿರ್ವಹಣೆ ಮಾಡಬಹುದು. ಈಗಿನ ದರದಲ್ಲಿ ಕೂಲಿ ನೀಡಿ ಹೈನುಗಾರಿಕೆ ನಡೆಸಲು ಸಾಧ್ಯವಿಲ್ಲ. ರೈತರ ಅಭಿವೃದ್ಧಿ ಬಗ್ಗೆ ಯಾರು ಮಾತನಾಡುವುದಿಲ್ಲ. ಸಂಘದ ಬಗ್ಗೆ ಮಾತ್ರ ಮಾತನಾಡುವುದು. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ಪಾದನಾ ವೆಚ್ಚವೇ ಅಧಿಕವಾಗಿದೆ. ಬಯಲು ಸೀಮೆ ಹಾಗೂ ದ.ಕ., ಉಡುಪಿ ಜಿಲ್ಲೆಗಳಿಗೂ ಒಂದೇ ಮಾನದಂಡ ಇರಬಾರದು. ರೈತರು ಉಳಿದರೆ ಮಾತ್ರ ಸಂಘವೂ ಉಳಿಯಬಹುದು. ಹೀಗಾಗಿ ದ.ಕ ಹಾಗೂ ಉಡುಪಿ ಜಿಲ್ಲೆಗೆ ವಿಶೇಷ ರಿಯಾಯಿತಿ ನೀಡಬೇಕು. ಹೈನುಗಾರಿಕೆಯಿಂದ ಯುವ ಜನತೆ ಹಿಂದುಳಿಯಲು ಉತ್ಪಾದನಾ ವೆಚ್ಚವೂ ಒಂದು ಕಾರಣವಾಗಿದೆ. ದರ ಏರಿಕೆ ಮಾಡದಿದ್ದರೆ ಹೈನುಗಾರಿಕೆ ಮುನ್ನಡೆಸಲು ಸಾಧ್ಯವಿಲ್ಲ. ಹೀಗಾಗಿ ಉತ್ಪಾದಕರಿಗೆ ನೀಡುವ ದರ ಪರಿಷ್ಕರಣೆಯಾಗಬೇಕು. ಸರಕಾರ ಸಣ್ಣ ಪುಟ್ಟ ಸಬ್ಸಿಡಿ ನಿಲ್ಲಿಸಿ ದರ ಏರಿಕೆ ಮಾಡಲಿ. ಉತ್ಪಾದಕರಿಗೆ ಸೂಕ್ತ ದರ ದೊರೆತರೆ ಮಾತ್ರ ಯುವಕ ಹೈನುಗಾರಿಕೆಯಲ್ಲಿ ಆಸಕ್ತಿ ತೋರಿಸಲಿದ್ದಾರೆ. ದರ ಪರಿಷ್ಕರಣೆ ಆಗದಿದ್ದರೆ ಹೈನುಗಾರಿಕೆಯು ನಿಲ್ಲುವ ಆತಂಕವಿದೆ. ಇದರ ಬಗ್ಗೆ ಒಕ್ಕೂಟ ಗಂಬೀರ ಚಿಂತನೆ ನಡೆಸಬೇಕು ಎಂದು ಸದಸ್ಯರಾದ ವಿಶ್ವೇಶ್ವರ ಭಟ್, ಸತ್ಯಪ್ರಸಾದ್ ಹಾಗೂ ಜತ್ತಪ್ಪ ಪೂಜಾರಿ ಆಗ್ರಹಿಸಿದರು.
ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಪಿ. ಮಾತನಾಡಿ, ಸರಕಾರದಿಂದ ದೊರೆಯುವ ಸಬ್ಸಡಿಯಾಧರಿತ ಸಾಲ ಸೌಲಭ್ಯಗಳು, ಒಕ್ಕೂಟದಿಂದ ದೊರೆಯುವ ಸೌಲಭ್ಯಗಳು, ವಿಮೆಯ ಬಗ್ಗೆ ಮಾಹಿತಿ ನೀಡಿದರು.

ಅಭಿನಂದನೆ, ಪ್ರತಿಭಾ ಪುರಸ್ಕಾರ:
ವರದಿ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಜತ್ತಪ್ಪ ಪೂಜಾರಿ ಹಾಗೂ ಅಂಬ್ರೋಸ್ ಡಿ’ಸೋಜರವರನ್ನು ಅಭಿನಂದಿಸಲಾಯಿತು. ಸಂಘದ ಸದಸ್ಯರ ಮಕ್ಕಳಿಗೆ ನೀಡುವ ಪ್ರತಿಭಾ ಪುರಸ್ಕಾರವನ್ನು ಪಿಯುಸಿಯಲ್ಲಿ ಸಾನಿಕಾ ಜಿ.ರೈ, ಎಸ್‌ಎಸ್‌ಎಲ್‌ಸಿಯಲ್ಲಿ ಶ್ರೀಶಾ ರೈ ಹಾಗೂ ಗ್ರೀಷ್ಮಾ ರೈಯವರಿಗೆ ನೀಡಿ ಗೌರವಿಸಲಾಯಿತು. ಹಾಲು ಉತ್ಪಾದಕರಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು.
ಉಪಾಧ್ಯಕ್ಷ ಎನ್.ಅಂಬ್ರೋಸ್ ಡಿ’ಸೋಜಾ, ನಿರ್ದೇಶಕರಾದ ಶಿವರಾಮ ಭಟ್ ಕೆ., ವಿಜಯ ಕುಮಾರ್ ರೈ ಜಿ., ಎ ರಾಜೇಶ್ ನಾಯ್ಕ, ದೇವದಾಸ ರೈ ಎನ್.ಜಿ., ಟಿ.ಸತೀಶ್ ಶೆಟ್ಟಿ, ವಾರಿಜ ರೈ ಎ., ಕೆ. ಅಮಿತ್ ರೈ ಹಾಗೂ ಲಕ್ಷ್ಮೀ ರೈ ಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷ ಎ.ಎಂ ಪ್ರವೀಣಚಂದ್ರ ಆಳ್ವ ಸ್ವಾಗತಿಸಿದರು. ಕಾರ್ಯದರ್ಶಿ ಜನಾರ್ದನ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕರಾದ ಕೆ.ಚಂದಪ್ಪ ಪೂಜಾರಿ ಕಾಡ್ಲ ಕಾರ್ಯಕ್ರಮ ನಿರೂಪಿಸಿ, ಅಂಬ್ರೋಸ್ ಡಿ’ಸೋಜ ಎ ವಂದಿಸಿದರು. ಹಾಲು ಪರೀಕ್ಷಕ ಮನೋಜ್ ಕುಮಾರ್ ಸಹಕರಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಉಚಿತ ವೈದ್ಯಕೀಯ ತಪಾಸಣೆಯನ್ನು ನಡೆಲಾಗಿದ್ದು ಸದಸ್ಯರು ಶಿಬಿರದ ಪ್ರಯೋಜನ ಪಡೆದುಕೊಂಡರು.

LEAVE A REPLY

Please enter your comment!
Please enter your name here