ಪುತ್ತೂರು: ಪುತ್ತೂರು ಕೋರ್ಟ್ ರಸ್ತೆಯಲ್ಲಿ ಆ.23ರ ರಾತ್ರಿ ಕಾರಿನಲ್ಲಿದ್ದ ಹಿಂದು ಕಾರ್ಯಕರ್ತರಿಗೆ ಹಲ್ಲೆ ನಡೆಸಿದ ವಿಚಾರ ಪೊಲೀಸ್ ಠಾಣೆ ಮೆಟ್ಟಲೇರಿದ ಬೆನ್ನಲ್ಲೇ ತಡ ರಾತ್ರಿ ಆ.24ರ ನಸುಕಿನ ಜಾವ ಘಟನೆ ನಡೆದ ಸ್ಥಳದ ಪಕ್ಕದ ಫ್ಯಾನ್ಸಿ ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ಬೆಳಕಿಗೆ ಬಂದಿದೆ.
ಕೋರ್ಟ್ ರಸ್ತೆಯಲ್ಲಿನ ಇಲ್ಯಾಸ್ ಎಂಬವರ ಮಾಲಕತ್ವದ ಬ್ಲಾಕ್ ಡೈಮಂಡ್ ಫ್ಯಾನ್ಸಿ ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಬೈಕ್‌ನಲ್ಲಿ ಹೆಲ್ಮೆಟ್ ಧರಿಸಿ ಬಂದ ವ್ಯಕ್ತಿ ಕ್ಯಾನ್‌ನಿಂದ ಅಂಗಡಿಯ ರೋಲಿಂಗ್ ಶೆಟರ್‌ಗೆ ಪೆಟ್ರೋಲ್ ಸುರಿದು ಎರಡು ಮೂರು ಬಾರಿ ಕಟ್ಟಿ ಗೀರಿದ್ದಾನೆ. ಬಳಿಕ ಕೊನೆಯ ಪ್ರಯತ್ನದಲ್ಲಿ ಬೆಂಕಿ ಕೊಡುವಲ್ಲಿ ಯಶಸ್ವಿಯಾಗಿ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ. ಈ ಚಿತ್ರಣ ಅಂಗಡಿಯ ಸಿ ಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಘಟನೆ ಕುರಿತು ಬೆಳಿಗ್ಗೆ ಪುತ್ತೂರು ನಗರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ರಾತ್ರಿ ನಡೆದ ಹಲ್ಲೆ ಪ್ರಕರಣದ ಬೆನ್ನಲ್ಲೇ ಅಂಗಡಿಗೆ ಬೆಂಕಿ:
ಆ.23ರಂದು ರಾತ್ರಿ ಕೋರ್ಟ್ ರಸ್ತೆಯಲ್ಲಿ ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಆಟೋ ರಿಕ್ಷಾ ಬಂದ ಕುರಿತು ಕಾರು ಚಾಲಕರು ಆಟೋ ರಿಕ್ಷಾ ಚಾಲಕನನ್ನು ತರಾಟೆಗೆತ್ತಿಕೊಂಡಿದ್ದರು. ಈ ಘಟನೆ ಸಂದರ್ಭ ಬ್ಲಾಕ್ ಡೈಮಂಡ್ ಫ್ಯಾನ್ಸಿಯಿಂದ ಬಂದ ಮಹಿಳೆಯೊಬ್ಬರು ಕಾರು ಚಾಲಕನಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಕುರಿತು ಕಾರಿನಲ್ಲಿದ್ದವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅವರು ದೂರು ನೀಡಿದ ಬೆನ್ನಲ್ಲೇ ಇದೀಗ ಅಂಗಡಿಗೆ ಬೆಂಕಿ ಹಚ್ಚಿದ ಘಟನೆ ಬೆಳಕಿಗೆ ಬಂದಿದೆ.