ವಿದ್ಯಾರ್ಥಿಗಳು, ಶಿಕ್ಷಕರಲ್ಲಿ ಮೂಡಿರುವ ಆತಂಕದ ವಾತಾವರಣ ನಿವಾರಿಸಿ ಸುರಕ್ಷತಾ ಕ್ರಮ ಕೈಗೊಳ್ಳಿ – ದ.ಕ.ಜಿಲ್ಲಾ ಪ.ಪೂ.ಕಾಲೇಜು ಉಪನ್ಯಾಸಕರ ಸಂಘದಿಂದ ಪುತ್ತೂರು ನಗರ ಪೊಲೀಸ್ ಠಾಣೆಗೆ ಮನವಿ

0

ಪುತ್ತೂರು: ಚೂರಿ ಇರಿತ ಅರೋಪ ಪ್ರಕರಣದಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಮೂಡಿರುವ ಆತಂಕದ ವಾತಾವರಣ ತಿಳಿಗೊಳಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ದ.ಕ.ಜಿಲ್ಲಾ ಪ.ಪೂ.ಕಾಲೇಜು ಉಪನ್ಯಾಸಕರ ಸಂಘದ ವತಿಯಿಂದ ಪುತ್ತೂರು ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.
ಆ.20ರಂದು ಪುತ್ತೂರು ನಗರ ವ್ಯಾಪ್ತಿಯ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಗೆ ಅದೇ ಕಾಲೇಜಿನ ವಿದ್ಯಾರ್ಥಿ ಓರ್ವ ಗಾಯಗೊಳಿಸಿರುತ್ತಾನೆ ಎಂಬ ಆರೋಪದ ಮೇಲೆ ಪ್ರಕರಣವು ದಾಖಲಾಗಿರುತ್ತದೆ. ಸದರಿ ಪ್ರಕರಣದಿಂದ ಉದ್ಭವಿಸಿದ ಬೆಳವಣಿಗೆಗಳು ವಿದ್ಯಾರ್ಥಿ ಮತ್ತು ಶಿಕ್ಷಕರ ಸಮುದಾಯದಲ್ಲಿ ವ್ಯಾಪಕ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ರಾಷ್ಟ್ರ ನಿರ್ಮಾಣದ ಮೂಲ ಆಧಾರ ಸ್ತಂಭವಾದ ಶೈಕ್ಷಣಿಕ ಸಂಸ್ಥೆಗಳಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಸ್ವತಂತ್ರವಾದ ನಿರ್ಧಾರಗಳನ್ನು ಕೈಗೊಳ್ಳಲಾಗದ ಸ್ಥಿತಿ ನಿರ್ಮಾಣವಾಗಿದೆ ಹಾಗೂ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಶೈಕ್ಷಣಿಕ ಪ್ರಕ್ರಿಯೆಗಳನ್ನು ನಡೆಸಲು ತೊಡಕುಂಟಾಗುತ್ತಿದೆ.

ಆದ್ದರಿಂದ ಈ ಪ್ರಕರಣದ ತನಿಖೆಯನ್ನು ತ್ವರಿತಗೊಳಿಸಿ ಸತ್ಯಾಸತ್ಯತೆಯನ್ನು ಬಯಲಿಗೆಳೆದು ಸ್ಥಾಪಿತ ಕಾನೂನುಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವವರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಂಡು ಶೈಕ್ಷಣಿಕ ಸಂಸ್ಥೆಗಳಲ್ಲಿ ಭಯಮುಕ್ತ ಶೈಕ್ಷಣಿಕ ವಾತಾವರಣವನ್ನು ಕಲ್ಪಿಸಿಕೊಡುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ. ಸಂಘದ ಅಧ್ಯಕ್ಷ ಹರಿಪ್ರಕಾಶ್ ಬೈಲಾಡಿ ಹಾಗೂ ಪದಾಧಿಕಾರಿ ವಿದ್ಯಾಧರ ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here