ಸುದಾನ ಪ.ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ-ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿ ಹುಟ್ಟಲಿ-ಡಾ.ಹರಿಪ್ರಸಾದ್ ಎಸ್

0

ಪುತ್ತೂರು: ಸ್ಪರ್ಧಾತ್ಮಕ ಜಗತ್ತಿನಲ್ಲಿ ಬಹಳಷ್ಟು ಶ್ರಮ ವಹಿಸಬೇಕಾದ, ಅವಕಾಶದ ಬಾಗಿಲನ್ನು ನಾವೇ ತೆರೆಯಬೇಕಾದ ಅವಶ್ಯಕತೆಯಿದೆ. ಮುಂದಿನ ಎರಡು ವರ್ಷಗಳಲ್ಲಿ ಹೆಚ್ಚು ಪರಿಶ್ರಮಪಟ್ಟು ಅದನ್ನು ಬಹಳ ಚೆನ್ನಾಗಿ ಬಳಸುವ ಸಾಮರ್ಥ್ಯ ನಿಮ್ಮಲ್ಲಿರಬೇಕು. ಬೇರೆ ಬೇರೆ ಕೌಶಲ್ಯಗಳನ್ನು ವೃದ್ಧಿಸುವ ಮೂಲಕ ಸಂಶೋಧನಾ ಕ್ರಿಯೆಗಳನ್ನು ಮೂಡಿಸಬಲ್ಲ ಧೈರ್ಯ ನಿಮ್ಮಲ್ಲಿ ಹುಟ್ಟಬೇಕು ಎಂದು ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ಹರಿಪ್ರಸಾದ್ ಎಸ್ ರವರು ಹೇಳಿದರು.


ಆ.23ರಂದು ಸುದಾನ ಕ್ಯಾಂಪಸ್ಸಿನಲ್ಲಿನ ಎಡ್ವರ್ಡ್ ಸಭಾಂಗಣದಲ್ಲಿ ನಡೆದ ಸುದಾನ ಪದವಿ ಪೂರ್ವ ಕಾಲೇಜಿನ 2024-25ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ದೆಸೆಯಿಂದಲೇ ಶಿಸ್ತನ್ನು ಮೈಗೂಡಿಸಿಕೊಂಡರೆ ವೃತ್ತಿ ಬದುಕಿನಲ್ಲಿ ಅತ್ಯುನ್ನತ ಸ್ಥಾನಮಾನಗಳನ್ನು ಗಳಿಸುವುದಕ್ಕೆ ಸಾಧ್ಯ. ಜಯಗಳಿಸುವ ಬೇರೆ ಬೇರೆ ಮಾರ್ಗಗಳನ್ನು ಕಂಡು ಹುಡುಕುವ ಪ್ರಯತ್ನ ನಮ್ಮದಾಗಬೇಕು. ವಿಚಾರಗಳನ್ನು ಅರ್ಥ ಮಾಡಿಕೊಂಡಲ್ಲಿ, ಅದು ನಿಮ್ಮ ಮುಂದಿನ ಸಾಧನೆಗೆ ದಾರಿದೀಪವಾಗಬಲ್ಲದು ಎಂದರು.
ಅಧ್ಯಕ್ಷತೆ ವಹಿಸಿದ ಸುದಾನ ಸೆಂಟರ್ ಫಾರ್ ರೂರಲ್ ಡೆವಲಪ್ಮೆಂಟ್ ಆಂಡ್ ಎಜ್ಯುಕೇಶನ್ ಇದರ ಅಧ್ಯಕ್ಷ ರೆ|ವಿಜಯ ಹಾರ್ವಿನ್ ಮಾತನಾಡಿ, ಅವಕಾಶ ಮತ್ತು ಸದ್ಭಳಕೆ ವಿದ್ಯಾರ್ಥಿ ಬದುಕಿನಲ್ಲಿ ಇರಬೇಕಾದ ಎರಡು ವಿಚಾರಗಳು. ಸಾಧಿಸುವ ಛಲ ವಿದ್ಯಾರ್ಥಿಗಳಲ್ಲಿರಬೇಕು. ಅದಕ್ಕೆ ಪರಿಶ್ರಮ ಅತೀ ಅಗತ್ಯ ಎಂದರು.

ಸುದಾನ ಪದವಿ ಪೂರ್ವ ಕಾಲೇಜಿನ ಸಂಚಾಲಕ ಹಾಗೂ ಸುದಾನ ಸೆಂಟರ್ ಫಾರ್ ರೂರಲ್ ಡೆವಲಪ್ಮೆಂಟ್ ಆಂಡ್ ಎಜ್ಯುಕೇಶನ್ ಇದರ ಕಾರ್ಯದರ್ಶಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಶಿಕ್ಷಣ ಎಂಬುದು ಪದವಿಯ ಹೆಸರಲ್ಲ. ಪ್ರತಿಯೊಬ್ಬರ ಜೀವನದ ನಡವಳಿಕೆಯನ್ನು ತಿಳಿಸಿಕೊಡುವ ವಿಧಾನ. ಇದನ್ನು ಪಡೆಯಲು ಆತ್ಮವಿಶ್ವಾಸ ಬೇಕು. ಲಭಿಸಿದ ಅವಕಾಶಗಳನ್ನು ಕಷ್ಟದ ಸಮಯದಲ್ಲಿಯೂ ಗಳಿಸುವ ಪ್ರಯತ್ನ ಮಾಡಬೇಕು. ಬದುಕಿನಲ್ಲಿ ನಮ್ಮ ವ್ಯಕ್ತಿತ್ವ ಉಪ್ಪಿನಂತೆ ಅನಿವಾರ್ಯವಾಗಿಬೇಕು. ನಾವು ಬೆಳೆದು ಬಂದಿರುವ ದಾರಿಯನ್ನು ಮರೆಯಬಾರದು ಎಂದರು.
ಕಾಲೇಜಿನ ಪ್ರಾಂಶುಪಾಲ ಸುಪ್ರೀತ್ ಕೆ.ಸಿರವರು ನೂತನವಾಗಿ ವಿದ್ಯಾರ್ಥಿ ಸಂಘಕ್ಕೆ ಆಯ್ಕೆಯಾದವರಿಗೆ ಪ್ರಮಾಣವಚನವನ್ನು ಬೋಧಿಸಿದರು. ಸುದಾನ ಸೆಂಟರ್ ಫಾರ್ ರೂರಲ್ ಡೆವಲಪ್ಮೆಂಟ್ ಆಂಡ್ ಎಜ್ಯುಕೇಶನ್ ಕೋಶಾಧಿಕಾರಿ ಆಸ್ಕರ್ ಆನಂದ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಮುಕುಂದಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ವೇದವೃತ್ ಭಂಡಾರಿ ಸ್ವಾಗತಿಸಿ, ಕಾರ್ಯದರ್ಶಿ ಮೊಹಮ್ಮದ್ ನಿಹಾಲ್ ವಂದಿಸಿದರು. ಜೊತೆ ಕಾರ್ಯದರ್ಶಿ ಜಿಯಾ ಸ್ವೀಡಲ್ ಲಸ್ರಾದೋ ಅತಿಥಿಗಳ ಪರಿಚಯ ಮಾಡಿದರು. ಉಪನ್ಯಾಸಕಿ ಕ್ಯಾರಲ್ ಫೆರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here