ನಿಡ್ಪಳ್ಳಿ : ಕಡಬ ತಾಲೂಕಿನ ಕುಂತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಕುಸಿದ ಕಹಿ ಘಟನೆ ಮಾಸುವ ಮೊದಲೇ ಬೆಟ್ಟಂಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆ ರಸ್ತೆ ಬದಿಗೆ ವಾಲಿ ನಿಂತು ಬೀಳುವ ಸ್ಥಿತಿಯಲ್ಲಿದೆ. ಇದು ಯಾವುದೇ ಕ್ಷಣದಲ್ಲಿ ಕುಸಿಯುವ ಸಾಧ್ಯತೆಯಿದೆ ಎಂದು ಈ ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳು ತಿಳಿಸಿದ್ದಾರೆ.
ಬೆಟ್ಟಂಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಹಳ ಹಳೆಯ ಶಾಲೆಯಾಗಿದೆ. ಅಪಾಯಕಾರಿಯಾಗಿ ವಾಲಿಕೊಂಡು ನಿಂತಿರುವ ಗೋಡೆಯು ಸುಮಾರು 20 ಮೀಟರ್ ಉದ್ದ, ಸುಮಾರು 10 ಮೀಟರ್ ಎತ್ತರದ ಗೋಡೆಯನ್ನು ಕೆಂಪು ಕಲ್ಲು ಮತ್ತು ಅವೆ ಮಣ್ಣು ಉಪಯೋಗಿಸಿ ನಿರ್ಮಿಸಲಾಗಿದೆ. ಅಡಿಪಾಯವೂ ಅಷ್ಟೊಂದು ಗಟ್ಟಿ ಇಲ್ಲ. ಕೆಲವು ವರ್ಷಗಳ ಹಿಂದೆ ಒಂದು ಬದಿಯ ಅಡಿಪಾಯವನ್ನು ದುರಸ್ತಿಗೊಳಿಸಲಾಗಿದೆ.ಆದರೆ ಇದೀಗ ಗೋಡೆಯ ಮೇಲ್ಭಾಗ ರಸ್ತೆಯ ಬದಿಗೆ ಮತ್ತು ಹತ್ತಿರದ ಅಂಗನವಾಡಿ ಕೇಂದ್ರದ ಮೇಲ್ಛಾವಣಿ ಬದಿಗೆ ವಾಲಿ ನಿಂತಿದೆ. ವಾಲಿ ನಿಂತಿರುವ ಗೋಡೆಯ ಮೇಲ್ಛಾವಣಿ ಚುನಾವಣಾ ಬೂತ್ ಆಗಿರುವುದರಿಂದ ಚುನಾವಣೆ ಸಮಯದಲ್ಲಿ ದುರಸ್ತಿಗೊಳಿಸಲಾಗಿತ್ತು. ಇನ್ನೊಂದು ಬದಿಗೆ ಸರಕಾರದ ಅನುದಾನದಲ್ಲಿ ಕಬ್ಬಿಣದ ಪಕ್ಕಾಸು ಮತ್ತು ಸರಳನ್ನು ಉಪಯೋಗಿಸಿ ದುರಸ್ತಿಗೊಳಿಸಲಾಗಿತ್ತು. ಇದೀಗ ಸುಮಾರು 12ಮೀ ಉದ್ದಕ್ಕೆ ಗೋಡೆ ವಾಲಿದೆ.ಎರಡು ಗೋಡೆ ಸಂಧಿಸುವ ಜಾಗ ಬಿರುಕು ಬಿಟ್ಟಿದ್ದು ಪ್ರತಿ ನಿತ್ಯ ಅಂತರ ಹೆಚ್ಚುತ್ತಿದೆ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ.
ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಮೇಲ್ಛಾವಣಿ ಹಂಚಿನಲ್ಲಿರುವ ನೀರಿನ ಅಂಶ ಕಡಿಮೆಯಾಗಿ ಕುಗ್ಗಿ ಕುಸಿಯುವ ಸಾಧ್ಯತೆ ಇದೆ ಎಂದು ಹಿರಿಯರೊಬ್ಬರು ಹೇಳಿದ್ದಾರೆ.
ಪಾದಚಾರಿಗಳಿಗೂ ಆತಂಕ ; ಅಪಾಯಕಾರಿಯಾಗಿ ಬಾಗಿಕೊಂಡಿರುವ ಗೋಡೆ ರಸ್ತೆಯ ಪಕ್ಕದಲ್ಲಿದೆ. ಪ್ರತಿನಿತ್ಯ ಹಲವು ಮಕ್ಕಳು, ಮಹಿಳೆಯರು, ಸಾರ್ವಜನಿಕರು, ವಾಹನಗಳು, ಈ ರಸ್ತೆಯಲ್ಲಿ ಸಂಚರಿಸುತ್ತವೆ. ರಸ್ತೆಯಲ್ಲಿ ನಡೆದುಕೊಂಡು ಹೋಗುವವರು ಭಯದಿಂದ ಸಂಚರಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಮಳೆ ಬಂದರೆ ಮತ್ತಷ್ಟೂ ಆತಂಕ ಹೆಚ್ಚಾಗಲಿದೆ. ಆದುದರಿಂದ ಕೂಡಲೇ ಸಂಬಂಧಪಟ್ಟ ಇಲಾಖೆಗಳ ಅಽಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಜನರು ಆಗ್ರಹಿಸಿದ್ದಾರೆ.
ಶಾಲಾ ಮಕ್ಕಳು, ಅಂಗನವಾಡಿ ಪುಟಾಣಿಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ;
ಶಾಲೆಯಲ್ಲಿರುವ ವಿದ್ಯಾರ್ಥಿಗಳನ್ನು ಶಾಲೆಯ ನೂತನ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ. ಅಂಗನವಾಡಿ ಪುಟಾಣಿಗಳನ್ನು ಶಾಲಾ ನೂತನ ಕಟ್ಟಡಕ್ಕೆ ಶಿಫ್ಟ್ ಮಾಡೋ ಪ್ರಕ್ರಿಯೆಗಳು ನಡೆಯುತ್ತಿದೆ. ಅಂಗನವಾಡಿ ಕೇಂದ್ರದಲ್ಲಿ ಪುಟಾಣಿಗಳಿಗೆ ಆಹಾರವನ್ನು ತಯಾರಿಸಿ ಶಾಲಾ ಕೊಠಡಿಗಳಲ್ಲಿ ವಿತರಿಸಲಾಗುತ್ತಿದೆ ಎಂದು ಪೋಷಕರು ತಿಳಿಸಿದ್ದಾರೆ.
ಗ್ರಾಮ ಆಡಳಿತಾಧಿಕಾರಿ ಭೇಟಿ:
ಅಪಾಯಕಾರಿ ಸ್ಥಿತಿಯಲ್ಲಿರುವ ಗೋಡೆಯ ಬಗ್ಗೆ ಮಾಹಿತಿ ತಿಳಿದ ಬೆಟ್ಟಂಪಾಡಿ ಗ್ರಾಮ ಆಡಳಿತ ಅಧಿಕಾರಿ ಮಂಜುನಾಥ್, ಸಹಾಯಕ ವಿಜಯ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ
ಶಾಶ್ವತ ಪರಿಹಾರಕ್ಕೆ ಮೇಲಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಲಿ
ಸಮಸ್ಯೆಯ ಕುರಿತು ಪುತ್ತೂರು ಸಹಾಯಕ ಆಯುಕ್ತರಿಗೆ ಫೋನ್ ಮೂಲಕ ಮಾಹಿತಿ ನೀಡಲಾಗಿದೆ. ಸಂಬಂಧ ಪಟ್ಟ ಚಿತ್ರಗಳನ್ನು ಕಳಿಸಿದ್ದು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.ಪಿಡಿಒ ಜೊತೆ ಅಂಗನವಾಡಿ ಕೇಂದ್ರ ಮತ್ತು ಶಾಲೆಗೆ ಭೇಟಿ ನೀಡಿ ಸುರಕ್ಷಿತ ಕ್ರಮಗಳು,ಸೂಕ್ತ ಕ್ರಮಗಳ ಬಗ್ಗೆ ವಿವರಿಸಲಾಗಿದೆ. ಶಾಶ್ವತ ಪರಿಹಾರಕ್ಕೆ ಮೇಲಾಽಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು
ವಿದ್ಯಾಶ್ರೀ, ಅಧ್ಯಕ್ಷರು ಬೆಟ್ಟಂಪಾಡಿ ಗ್ರಾಮ ಪಂಚಾಯತ್