ಪುತ್ತೂರು: ಬೆಟ್ಟಂಪಾಡಿ ಶ್ರೀಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ವತಿಯಿಂದ 39ನೇ ವರ್ಷದ ಶ್ರೀಗಣೇಶೋತ್ಸವ ಕಾರ್ಯಕ್ರಮ ಸೆ.7 ಮತ್ತು 8ರಂದು ಶ್ರೀಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಧಾರ್ಮಿಕ ಕಾರ್ಯಕ್ರಮ:
ರಾಜೇಶ್ ಭಟ್ ಪುತ್ತೂರು ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಸೆ.7ರಂದು ಬೆಳಿಗ್ಗೆ 9ರಿಂದ ಗಣೇಶ ವಿಗ್ರಹ ಪ್ರತಿಷ್ಠಾಪನೆ ನಡೆದು ಪ್ರಗತಿಪರ ಕೃಷಿಕ ಶ್ರೀಮಂಜುನಾಥ ಪೈ ಕೊಂದಲ್ಕಾನರವರು ಕಾರ್ಯಕ್ರಮ ಉದ್ಘಾಟಿಸಿ ಚಾಲನೆ ನೀಡಲಿದ್ದಾರೆ. 9.30ರಿಂದ ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ಭಜನಾ ಸಂಘದಿಂದ ಭಜನಾ ಕಾರ್ಯಕ್ರಮ, 10ರಿಂದ ಗಣಪತಿ ಹೋಮ, ಮಧ್ಯಾಹ್ನ 12.3೦ರಿಂದ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಗಣೇಶ ಪ್ರಸಾದ-ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8ರಿಂದ ಶ್ರೀಮಹಾಗಣಪತಿ ದೇವರಿಗೆ ರಂಗಪೂಜೆ, ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸೆ.8ರಂದು ಪೂರ್ವಾಹ್ನ 9ರಿಂದ ವಿವಿಧ ಭಜನಾ ಮಂಡಳಿಗಳಿಂದ ಭಜನೋತ್ಸವ, 11ರಿಂದ ಗಣಪತಿ ಹೋಮ, ಮಧ್ಯಾಹ್ನ 12ರಿಂದ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ: ಸೆ.7ರಂದು ಅಪರಾಹ್ನ 2ರಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಶಾಂಭವಿ ವಿಜಯ ಯಕ್ಷಗಾನ ತಾಳಮದ್ದಲೆ ನಡೆಯಲಿದೆ. ಸಂಜೆ ೬ರಿಂದ ವಿದುಷಿ ಗೌತಮಿ ಅನುದೀಪ್ ಮತ್ತು ಶಿಷ್ಯವೃಂದದವರಿಂದ ಭರತನಾಟ್ಯ, ರಾತ್ರಿ ೭ರಿಂದ ಬೆಟ್ಟಂಪಾಡಿ ಪ್ರಯದರ್ಶಿನಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ “ಕಲಾದರ್ಶಿನಿ” ಸಾಂಸ್ಕೃತಿಕ ವೈಭವ, ೯ರಿಂದ ನಿತಿನ್ ಹೊಸಂಗಡಿ ನಿರ್ದೇಶನದಲ್ಲಿ ಪುಗರ್ತೆ ಕಲಾವಿದೆರ್ ವಿಟ್ಲ ಕೇಪು ಮೈರ ಅಭಿನಯಿಸುವ, ಸತೀಶ್ ಶೆಟ್ಟಿ ಪಟ್ಲ ಹಿನ್ನಲೆ ಗಾಯನದ, ಶ್ರೀದುರ್ಗಾ ಕಲಾತಂಡದಿಂದ ಭಕ್ತಿಪ್ರಧಾನ ಕಲ್ಜಿಗದ ಕಾಳಿ ಮಂತ್ರದೇವತೆ ತುಳುನಾಟಕ ನಡೆಯಲಿದೆ.
ಸಭಾ ಕಾರ್ಯಕ್ರಮ: ಸೆ.7ರಂದು ಬೆಳಿಗ್ಗೆ 10.30ರಿಂದ ಧಾರ್ಮಿಕ ಸಭಾಕಾರ್ಯಕ್ರಮ ಜರಗಲಿದೆ. ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ|ನವೀನ್ ಕುಮಾರ್ ಮರಿಕೆ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಟುಕುಕ್ಕೆ ಶ್ರೀಸುಬ್ರಾಯ ದೇವಸ್ಥಾನದ ಮೊಕ್ತೇಸರ ತಾರಾನಾಥ ಎನ್. ರೈ ಪಡ್ಯಂಬೈಲುಗುತ್ತು, ಬೆಂಗಳೂರು ಟಿಇ ಕನೆಕ್ಟಿವಿಟಿಯ ಗ್ಲೋಬಲ್ ಪ್ರೊಡಕ್ಟ್ ಮ್ಯಾನೇಜರ್ ದೇವಿಕಿಶೋರ್, ಉಪ್ಪಳಿಗೆ ಸರಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ನಾರಾಯಣ ಕೆ., ಪ್ರಗತಿಪರ ಕೃಷಿಕ ದೇರಣ್ಣ ರೈ ತಲೆಪ್ಪಾಡಿ, ಶ್ರೀಮಹಾಲಿಂಗೇಶ್ವರ ಟ್ರಾವೆಲ್ಸ್ ಮಾಲಕ ಸತೀಶ್ ಭಟ್ ನಡುಸಾರು, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾಶ್ರೀ ಸರಳಿಕಾನ, ಇರ್ದೆ-ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸುವರ್ಣ ಆರ್.ಬಿ., ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಅನಿಲೇಶ್ ಕೃಷ್ಣ ಕಾಜಿಮೂಲೆ, ಕ್ಯಾಂಪ್ಕೋ ವಿಜಯಪುರ ಶಾಖೆಯ ಪ್ರವೀಣ್‌ರಾಜ್ ಬಲ್ಲಾಳ್ ಬೆಟ್ಟಂಪಾಡಿ ಬೀಡು, ಪುತ್ತೂರು ಆಶಾ ಜ್ಯುವೆಲ್ಲರ‍್ಸ್ ಮಾಲಕ ಸಂತೋಷ್ ಕುಮಾರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.
ಮನರಂಜಿಸಲಿರುವ “ಕಲ್ಜಿಗದ ಕಾಳಿ ಮಂತ್ರದೇವತೆ” ಭಕ್ತಿಪ್ರಧಾನ ತುಳುನಾಟಕ
ಕಾರ್ಯಕ್ರಮದಲ್ಲಿ ವಿಶೇಷವಾಗಿ ಭಕ್ತಿಪ್ರಧಾನ ತುಳುನಾಟಕ ನಡೆಯಲಿದೆ. ಸೆ.9ರಿಂದ ರಾತ್ರಿ 9ರಿಂದ ನಿತಿನ್ ಹೊಸಂಗಡಿ ನಿರ್ದೇಶನದಲ್ಲಿ ಪುಗರ್ತೆ ಕಲಾವಿದೆರ್ ವಿಟ್ಲ ಕೇಪು ಮೈರ ಅಭಿನಯಿಸುವ, ಸತೀಶ್ ಶೆಟ್ಟಿ ಪಟ್ಲ ಹಿನ್ನಲೆ ಗಾಯನದ, ಶ್ರೀದುರ್ಗಾ ಕಲಾತಂಡದಿಂದ ಭಕ್ತಿಪ್ರಧಾನ ಕಲ್ಜಿಗದ ಕಾಳಿ ಮಂತ್ರದೇವತೆ ಎಂಬ ತುಳುನಾಟಕ ನಡೆಯಲಿದೆ.
ನಾಳೆ ವೈಭವದ ಶೋಭಾಯಾತ್ರೆ:
ಸೆ.8ರಂದು ಸಂಜೆ 4ರಿಂದ ಶ್ರೀಗಣೇಶ ಸ್ವಾಮಿಯ ವೈಭವದ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯಲ್ಲಿ ನಿಡ್ಪಳ್ಳಿ ಶಾಂತದುರ್ಗಾ ಕುಣಿತ ಭಜನಾ ತಂಡ, ಇರ್ದೆ ವಿಷ್ಣು ಚಿಣ್ಣರ ಭಜನಾ ತಂಡ, ಕುಂಞಿಮೂಲೆ-ದರ್ಭೆ ಸಿದ್ಧಿವಿನಾಯಕ ಭಜನಾ ಸೇವಾ ಟ್ರಸ್ಟ್, ಪಾಣಾಜೆ ದೇವಸ್ಯ ರಣಮಂಗಲ ಶ್ರೀಸುಬ್ರಹ್ಮಣ್ಯ ಕುಣಿತ ಭಜನಾ ತಂಡ ಹಾಗೂ ಬೆಟ್ಟಂಪಾಡಿ ವಿನಾಯಕನಗರ ಸಿದ್ಧಿವಿನಾಯಕ ಕುಣಿತ ಭಜನಾ ತಂಡದಿಂದ ಮಕ್ಕಳ ಕುಣಿತ ಭಜನೆ ನಡೆಯಲಿದೆ. ರಾತ್ರಿ 10.೦೦ರಿಂದ ಚೆಲ್ಯಡ್ಕದ ಪುಣ್ಯನದಿಯಲ್ಲಿ ಶ್ರೀಗಣೇಶ ಸ್ವಾಮಿಯ ವಿಗ್ರಹದ ಜಲಸ್ತಂಭನ ಮಹೋತ್ಸವ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.