ಸತ್ಯಸಾಯಿ ಮಂದಿರದಲ್ಲಿ ಉಚಿತ ಹೋಮಿಯೋಪತಿ ಚಿಕಿತ್ಸಾ ಶಿಬಿರ – ಪ್ರತೀ ಹದಿನೈದು ದಿನಗಳಿಗೊಮ್ಮೆ ನಡೆಯಲಿದೆ ಈ ಶಿಬಿರ

0

ಪುತ್ತೂರು: ಸತ್ಯಸಾಯಿ ಸೇವಾ ಸಮಿತಿ ಪುತ್ತೂರು, ರೋಟರಿ ಕ್ಲಬ್ ಪುತ್ತೂರು ಹಾಗೂ ಪ್ರಗತಿ ಪ್ಯಾರಾ ಮೆಡಿಕಲ್ ರೊಟರ‍್ಯಾಕ್ಟ್ ಕ್ಲಬ್, ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಹೋಮಿಯೋಪತಿ ಚಿಕಿತ್ಸಾ ಶಿಬಿರ ಸೆ.08ರಂದು ಸತ್ಯಸಾಯಿ ಮಂದಿರದಲ್ಲಿ ನಡೆಯಿತು.

ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷರಾದ ಡಾ. ಶ್ರೀಪತಿ ರಾವ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ‘ಇಂದಿನ ಆಧುನಿಕ ವೈದ್ಯಕೀಯ ವ್ಯವಸ್ಥೆಯಲ್ಲಿ ಒಬ್ಬ ರೋಗಿಯ ದೇಹದ ನಿರ್ಧಿಷ್ಟ ಅಂಗ ಅಥವಾ ವಿಭಾಗಗಳಿಗೆ ಸರಿಯಾದ ಚಿಕಿತ್ಸೆಯನ್ನು ನೀಡಲಾಗುತ್ತದೆ, ಆದರೆ ಇದು ಕೆಲವೊಮ್ಮೆ ರೋಗಿಗೆ ಪರಿಣಾಮಕಾರಿಯಾಗದೇ ಇರುವ ಸಾಧ್ಯತೆಗಳಿವೆ, ಯಾಕೆಂದರೆ ಆ ರೋಗಿಗೆ ಒಂದು ಅಂಗದ ಸಮಸ್ಯೆಯ ಜೊತೆಗೆ ದೇಹಕ್ಕೆ ಅಥವಾ ಮನಸ್ಸಿಗೆ ಸಂಬಂಧಿಸಿದ ಬೇರೇ ಸಮಸ್ಯೆಗಳೂ ಇರುವ ಸಾಧ್ಯತೆಗಳಿರಬಹುದು, ಅಂತಹ ಸಂದರ್ಭದಲ್ಲಿ ಹೋಮಿಯೋಪತಿ ಚಿಕಿತ್ಸೆ ಮೂಲಕ ರೋಗಿಯ ಸರ್ವಾಂಗಿಣ ಚೇತರಿಕೆ ಸಾಧ್ಯವಾಗಬಹುದು. ಹಾಗೆಯೇ ಒಬ್ಬ ರೋಗಿಗೆ ನಿರ್ಧಿಷ್ಟ ಅಂಗದ ಸಮಸ್ಯೆ ಇದೆ ಎಂದು ತಿಳಿದು ಬಂದಾಗ ಹೋಮಿಯೋಪತಿ ವೈದ್ಯರು ಆ ರೋಗಿಯನ್ನು ಅದಕ್ಕೆ ಸಂಬಂಧಿಸಿದ ಸ್ಪೆಷಲಿಸ್ಟ್ ಗಳ ಬಳಿಗೆ ಕಳುಹಿಸುವುದು ಒಳಿತು’ ಎಂದು ಅವರು ಅಭಿಪ್ರಾಯಪಟ್ಟರು.

ಹೋಮಿಯೋಪತಿ ವೈದ್ಯರಾದ ಹಾಗೂ ರೋಟರಿ ಕ್ಲಬ್ ಸದಸ್ಯರಾದ ಡಾ. ಅವಿಲ್ ಲೆನ್ ಗೋನ್ಸಾಲಿಸ್ ಅವರು ಮಾತನಾಡಿ, ‘ಹೋಮಿಯೋಪತಿ ಚಿಕಿತ್ಸಾಪದ್ಧತಿಯಲ್ಲಿ ರೋಗಿಗೆ ತನ್ನ ಆರೋಗ್ಯ ಸಮಸ್ಯೆಗೆ ತಕ್ಷಣದ ಪರಿಹಾರ ಸಾಧ್ಯವಾಗದೇ ಇದ್ದರೂ ಇದು ದೀರ್ಘಕಾಲೀನ ಪರಿಣಾಮವನ್ನು ಜೊಂದಿದೆ ಮತ್ತು ಹೋಮಿಯೋಪತಿ ಚಿಕಿತ್ಸೆಯನ್ನು ಪಡೆದುಕೊಂಡಲ್ಲಿ ಯಾವುದೇ ಆರೋಗ್ಯ ಸಮಸ್ಯೆಯನ್ನು ಬುಡಸಮೇತ ನಿರ್ಮೂಲನಗೊಳಿಸಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ದಾಮೋದರ್, ಕ್ಲಬ್‌ನ ನಿರ್ದೇಶಕರಾದ ರಾಜ್‌ಗೋಪಾಲ್, ಪ್ರೀತಾ ಹೆಗ್ಡೆ ಉಪಸ್ಥಿತರಿದ್ದರು.

ಚಿತ್ರಾ ರೈ ಅವರ ಪ್ರಾರ್ಥನೆ ಮೂಲಕ ಕಾರ್ಯಕ್ರಮ ಪ್ರಾರಂಭಗೊಂಡಿತು. ಸತ್ಯಸಾಯಿ ಸೇವಾ ಸಮಿತಿಯ ಸಂಚಾಲಕರಾದ ದಯಾನಂದ ಕೆ. ಎಸ್. ಸ್ವಾಗತ ಹಾಗೂ ಕಾರ್ಯಕ್ರಮ ನಿರ್ವಹಣೆ ಮಾಡಿದರು. ರಘುನಾಥ ರೈ ಧನ್ಯವಾದ ಸಮರ್ಪಿಸಿದರು. ಹಿರಿಯರಾದ ಪದ್ಮನಾಭ ನಾಯಕ್ ಸಹಕರಿಸಿದರು. ಪ್ರಗತಿ ಪ್ಯಾರಾ ಮೆಡಿಕಲ್ ರೋಟರ‍್ಯಾಕ್ಟ್ ಕ್ಲಬ್ ನ ಸದಸ್ಯರು ಔಷಧಿ ವಿತರಣೆಗೆ ನೆರವಾದರು.

ಪ್ರತೀ ಹದಿನೈದು ದಿನಗಳಿಗೊಮ್ಮೆ ಸತ್ಯಸಾಯಿ ಮಂದಿರದಲ್ಲಿ ಉಚಿತ ಶಿಬಿರ ನಡೆಯಲಿದ್ದು ಈ ಶಿಬಿರದಲ್ಲಿ ರೋಗಿಗಳಿಗೆ ತಪಾಸಣೆ ಮತ್ತು ಔಷಧಿಯನ್ನು ಉಚಿತವಾಗಿ ನೀಡಲಾಗುವುದು ಮತ್ತು ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಸಂಘಟಕರು ವಿನಂತಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here