ನೆಲ್ಯಾಡಿ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ನೆಲ್ಯಾಡಿ-ಕೌಕ್ರಾಡಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೆಲ್ಯಾಡಿ-ಕೌಕ್ರಾಡಿ ಇವುಗಳ ಸಹಕಾರದಲ್ಲಿ 42ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.7ರಂದು ನೆಲ್ಯಾಡಿ-ಕೌಕ್ರಾಡಿ ಶ್ರೀ ಶಬರೀಶ ಕಲಾ ಮಂದಿರದಲ್ಲಿ ನಡೆಯಿತು.
ಬೆಳಿಗ್ಗೆ ನೆಲ್ಯಾಡಿ-ಹಾರ್ಪಳ ಶ್ರೀ ಶಾಸ್ತಾರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀಧರ ನೂಜಿನ್ನಾಯ ಪೌರೋಹಿತ್ಯದಲ್ಲಿ ಶ್ರೀ ಗಣಪತಿ ದೇವರ ಪ್ರತಿಷ್ಠೆ ನಡೆಯಿತು. ಬಳಿಕ ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ, ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಶ್ರೀ ಅಯ್ಯಪ್ಪ ಸ್ವಾಮಿ ದೇವರಿಗೆ ಸೀಯಾಳಾಭಿಷೇಕ, ಗಣಹೋಮ ನಡೆಯಿತು. ನಂತರ ಶಬರೀಶ ಕಲಾಮಂದಿರದಲ್ಲಿ ಛದ್ಮವೇಷ ಸ್ಪರ್ಧೆ ನಡೆಯಿತು. ಮಧ್ಯಾಹ್ನ ಶ್ರೀ ಗಣಪತಿ ದೇವರಿಗೆ ಮಹಾರಂಗಪೂಜೆ, ಮಹಾಪೂಜೆ, ಬಳಿಕ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಧರ್ಮಜಾಗೃತಿ ಸಭೆ:
ಬೆಳಿಗ್ಗೆ ನಡೆದ ಧರ್ಮಜಾಗೃತಿ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ರಾಮಕುಂಜ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆದ್ದೊಟೆ ಅವರು, ದೇವರ ಕಾರ್ಯದೊಂದಿಗೆ ರಾಷ್ಟ್ರ ನಿರ್ಮಾಣದ ಜಾಗೃತಿಗಾಗಿ ಆರಂಭಗೊಂಡ ಗಣೇಶೋತ್ಸವ ನಿರಂತರವಾಗಿ ನಡೆಯುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಗಣೇಶೋತ್ಸವವೇ ವಿಘಟನೆಗೂ ಕಾರಣವಾಗುತ್ತಿರುವುದು ವಿಪರ‍್ಯಾಸ ಎಂದರು.
ಗೋಳಿತ್ತೊಟ್ಟು ದುರ್ಗಾಬೀಡಿ ಮಾಲಕ ಕೇಶವ ಪೂಜಾರಿ ಉದ್ಘಾಟಿಸಿದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ರವಿಚಂದ್ರ ಗೌಡ ಅತ್ರಿಜಾಲು ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾದ ಸವಣೂರು ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಇಂಡಿಯನ್ ಸಮೂಹ ಸಂಸ್ಥೆಗಳ ನಿರ್ದೇಶಕರೂ, ಮಂಗಳೂರು ನಾಯರ್ ಸರ್ವಿಸ್ ಸೊಸೈಟಿ ಅಧ್ಯಕ್ಷ ಮುರಳಿ ನಾಯರ್ ಹೊಸಮಜಲು ಶುಭಹಾರೈಸಿದರು. ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಂಬಂಧಿಸಿದ ಕರಪತ್ರ ಈ ವೇಳೆ ಬಿಡುಗಡೆ ಮಾಡಲಾಯಿತು.
ಶ್ರೀ ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ರಮೇಶ್ ಶೆಟ್ಟಿ ಬೀದಿಮನೆ, ಪ್ರಧಾನ ಕಾರ್ಯದರ್ಶಿ ರಕ್ಷಿತ್ ಎಂ.ಟಿ., ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಕೋಶಾಧಿಕಾರಿ ವಿನೋದ್‌ಕುಮಾರ್ ಬಾಕಿಜಾಲು, ಜೊತೆ ಕಾರ್ಯದರ್ಶಿ ಮೋಹನ್ ಗೌಡ ಕಟ್ಟೆಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಶಾಧಿಕಾರಿ ರವಿಚಂದ್ರ ಹೊಸವಕ್ಲು ಸ್ವಾಗತಿಸಿದರು. ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಕೆ.ಎಸ್.ವಂದಿಸಿದರು. ಗುಡ್ಡಪ್ಪ ಗೌಡ ಬಲ್ಯ ನಿರೂಪಿಸಿದರು. ಬಳಿಕ ಸುರೇಖಾ ಮತ್ತು ಶಿಷ್ಯವೃಂದದದವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ಭವ್ಯ ಶೋಭಾಯಾತ್ರೆ:
ಸಂಜೆ ಶ್ರೀ ಗಣಪತಿ ದೇವರ ಭವ್ಯ ಶೋಭಾಯಾತ್ರೆ ನಡೆಯಿತು. ಶೋಭಾಯಾತ್ರೆಯಲ್ಲಿ ವಿವಿಧ ಭಜನಾ ತಂಡಗಳಿಂದ ಭಜನೆ, ಚೆಂಡೆ, ವಿಶೇಷ ಆಕರ್ಷಣೆಯಾಗಿ ವಿವಿಧ ಸ್ಥಬ್ದ ಚಿತ್ರಗಳು ಮೆರವಣಿಗೆಯ ಮೆರುಗು ಹಚ್ಚಿಸಿತು. ಮೆರವಣಿಗೆಯೂ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಹೊರಟು ನೆಲ್ಯಾಡಿ ಪೇಟೆಯ ಮೂಲಕ ಹೊಸಮಜಲು ತನಕ ತೆರಳಿ ಅಲ್ಲಿಂದ ಹಿಂತಿರುಗಿ ಬಂದು ಕರ್ಬಸಂಕ ಸೇತುವೆ ಬಳಿ ಗಣಪತಿ ವಿಗ್ರಹದ ಜಲಸ್ಥಂಭನ ನಡೆಯಿತು.