ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ “ವಿವೇಕ ವಿಜಯ” ಶೀರ್ಷಿಕೆಯಡಿ ವಿಶೇಷ ಉಪನ್ಯಾಸ ಕಾರ್ಯಕ್ರಮಗಳ ಉದ್ಘಾಟನೆ

0

 ಪುತ್ತೂರು:  “ಸಿಂಹಸದೃಶವಾದ ಹಿಂದೂಧರ್ಮಕ್ಕೆ ಪುನರ್ಜನ್ಮವನ್ನು ನೀಡಿದವರು ಸ್ವಾಮಿ ವಿವೇಕಾನಂದರು. ಹಿಂದೂಧರ್ಮವೆಂದರೆ ಅತ್ಯಂತ ಪ್ರಾಚೀನವಾದ, ಶ್ರೇಷ್ಠತಮವಾದ ಧರ್ಮ ಎಂದು ಜಗತ್ತಿನ ಕಣ್ಣಿನಲ್ಲಿ ಸಾಕ್ಷೀಕರಿಸಿದವರು ಸ್ವಾಮಿ ವಿವೇಕಾನಂದರು. ವ್ಯಕ್ತಿತ್ವದ ಅಮೂಲಾಗ್ರ ಬದಲಾವಣೆಯಾಗಲು ವಿವೇಕಾನಂದರ ಜೀವನವನ್ನು ಓದಿ ಪ್ರೇರಣೆಗೊಳ್ಳಬೇಕು. ಈ ಮಹಾನ್‌ಸಂತನನ್ನು ಅಧ್ಯಯನ ಮಾಡಿದವರು, ಅವರನ್ನು ಹೃದಯದಲ್ಲಿ ಇರಿಸಿಕೊಂಡವರು ಎಂದಿಗೂ ಸಾಮಾನ್ಯ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯವಿಲ್ಲ. ಅವರ ಮಾತಿನ ಪ್ರೇರಣೆ ಪ್ರತೀ ವ್ಯಕ್ತಿತ್ವವನ್ನು ಬೆಳಗಿ, ಅಂತ:ಶಕ್ತಿಯನ್ನು ಜಾಗೃತಗೊಳಿಸಬಲ್ಲದು.” ಎಂದು ಚಿಂತಕರು ಹಾಗೂ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ನುಡಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸದ 131ನೇ ವರ್ಷಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾದ ʼವಿವೇಕ ವಿಜಯʼ  ವಿಶೇಷ ಉಪನ್ಯಾಸ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಕೆ.ಎಮ್. ಕೃಷ್ಣ ಭಟ್‌ ಇವರು  ದೀಪಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು.

  ವಿವೇಕವಿಜಯ ಉಪನ್ಯಾಸ ಕಾರ್ಯಕ್ರಮದ ಮೊದಲ ಹಂತವಾಗಿ ವಿದ್ಯಾರ್ಥಿಗಳಿಗಾಗಿ   “ವಿವೇಕ ಚಿಂತನಭಾರತ ವಂದನಾ” ಶೀರ್ಷಿಕೆಯಡಿ ಉಪನ್ಯಾಸ ಕಾರ್ಯಕ್ರಮವನ್ನು ಚಕ್ರವರ್ತಿ ಸೂಲಿಬೆಲೆ ಅವರು ನಡೆಸಿಕೊಟ್ಟರು. ವಿದ್ಯಾರ್ಥಿಗಳನ್ನುದ್ದೇಶಿಸಿ ದಿಕ್ಸೂಚಿ ಮಾತುಗಳನ್ನಾಡುತ್ತಾ, “ಇಂದಿನ ಪೀಳಿಗೆಯು ಆವಶ್ಯವಾಗಿ ಸ್ವಾಮಿ ವಿವೇಕಾನಂದರ ಕೇಂದ್ರೀಕೃತ ಜೀವನಶೈಲಿ ಹಾಗೂ ಇಚ್ಛಾಶಕ್ತಿಯನ್ನು ಅಳವಡಿಸಿಕೊಳ್ಳಬೇಕು. ವಿವೇಕಾನಂದರು ಚಿಕಾಗೋದಲ್ಲಿ ನಡೆಸಿದ ಉಪನ್ಯಾಸದ 131ನೇ ವರ್ಷಾಚರಣೆಯ ಈ ದಿನವು ಪ್ರತೀ ವಿದ್ಯಾರ್ಥಿಯಲ್ಲಿಯೂ ಸಂಕಲ್ಪದಿನವಾಗಲಿ. ವಿದ್ಯಾರ್ಥಿಗಳು ತಮ್ಮ ಹೃದಯಗಳನ್ನು ತೆರೆದು ಈ ದೇಶ ಸಾಗುತ್ತಿರುವ ಹಾದಿಯನ್ನು ಮನದಟ್ಟು ಮಾಡಿಕೊಂಡು, ತಮ್ಮ ಜೀವನ ಪಥವನ್ನು ಸ್ಪಷ್ಟಪಡಿಸಿಕೊಳ್ಳುವ ಆವಶ್ಯಕತೆ ಇದೆ.” ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ  ಉಪಾಧ್ಯಕ್ಷ ಸತೀಶ್‌ರಾವ್‌, ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ. ಪಿ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಜತೆ ಕಾರ್ಯದರ್ಶಿಗಳಾದ ರೂಪಲೇಖ, ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿ ಸದಸ್ಯರಾದ ಡಾ| ಕೆ.ಎನ್‌ಸುಬ್ರಹ್ಮಣ್ಯ, ವತ್ಸಲಾ ರಾಜ್ಞಿ, ಡಾ| ಕೃಷ್ಣ ಪ್ರಸನ್ನ, ಕೋಶಾಧಿಕಾರಿಗಳಾದ ಸಚಿನ್‌ ಶೆಣೈ, ಸಂಸ್ಥೆಯ ಪ್ರಾಂಶುಪಾಲರಾದ ಮಹೇಶ್‌ ನಿಟಿಲಾಪುರ, ಉಪಪ್ರಾಂಶುಪಾಲರಾದ ಎಮ್.‌ ದೇವಿಚರಣ್‌ ರೈ, ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡರು.

   ಕಾರ್ಯಕ್ರಮದ ಆರಂಭದಲ್ಲಿ  ವಿದ್ಯಾರ್ಥಿನಿಯರು  ಪ್ರೇರಣಾ ಗೀತೆಯಾಗಿ ಸನ್ಯಾಸಿ ಗೀತೆಯನ್ನು ಹಾಡಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ರವೀಂದ್ರ ಪಿ ಇವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಉಪನ್ಯಾಸಕಿ ದಿವ್ಯಾ ಕೆ ಇವರು ವಂದಿಸಿದರು. ಉಪನ್ಯಾಸಕಿ ಮಮತಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here