ಬಡಗನ್ನೂರು: ಪಡುಮಲೆ ಎರುಕೊಟ್ಯ ನಾಗ ಸಾನಿಧ್ಯದಲ್ಲಿ ಸೆ.16ರಂದು ಶ್ರಾವಣ ಸಂಕ್ರಮಣದಂದು ಮಡಂತ್ಯಾರು ನವುಂಡ ಗರಡಿಯಲ್ಲಿ ದರ್ಶನ ಪಾತ್ರಿಗಳಾಗಿ ಸೇವೆ ಸಲ್ಲಿಸುತ್ತಿರುವ ಅವಳಿಗಳಾದ ರವೀಂದ್ರ ಹಾಗೂ ರಾಜೇಂದ್ರ ಇವರು ಮುಂದೆ ಇತಿಹಾಸ ಪ್ರಸಿದ್ಧ ಶ್ರೀ ನಾಗ ಬ್ರಹ್ಮ ಕೋಟಿ-ಚೆನ್ನಯ ಅದಿಗರಡಿ ಎಣ್ಮೂರಿನಲ್ಲಿ ದರ್ಶನ ಪಾತ್ರಿಗಳಾಗಿ ಸೇವೆ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾರಂಭದಲ್ಲಿ ಪಡುಮಲೆ ಕೋಟಿ ಚೆನ್ನಯರ ಜನ್ಮಸ್ಥಾನದಲ್ಲಿರುವ ನಾಗ ದೇವರು, ನಾಗ ಬೆರ್ಮೆರ್ ಹಾಗೂ ದೇಯಿ ಬೈದೇತಿ ಸಾನಿಧ್ಯದಲ್ಲಿ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿ,ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅರ್ಚಕ ಮಹಾಲಿಂಗ ಭಟ್ ಅವರಿಗೆ ಮಲ್ಲಿಗೆ ಹೂವಿನ ಹಾರ ಹಾಕಿ ಪ್ರಸಾದ ನೀಡಿ ಆಶೀರ್ವದಿಸಿದರು.
ಬಾಲ್ಯದಿಂದ ಶ್ರೀ ಕ್ಷೇತ್ರ ನವುಂಡ ಗರಡಿಯಲ್ಲಿ ಸೇವೆಯನ್ನು ಮಾಡಿಕೊಂಡು ಬರುತ್ತಿರುವ ರವೀಂದ್ರ ಹಾಗೂ ರಾಜೇಂದ್ರ ಪೂಜಾರಿರವರು ಪುಂಜಾಲಕಟ್ಟೆ ಮಾಲಾಡಿ ಗ್ರಾಮದ ಕೆಳಗಿನ ಪುರಿಯ ತಾವು ಮನೆ ವಿಶ್ವನಾಥ ಪೂಜಾರಿ ಮತ್ತು ಲೋಲಾವತಿ ದಂಪತಿಗಳ ಅವಳಿ ಪುತ್ರರು. ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ನೇತೃತ್ವದಲ್ಲಿ ಶ್ರೀ ನಾಗದೇವರಿಗೆ ಹಾಲು ಹಾಗೂ ಸೀಯಾಳ ಅಭಿಷೇಕ ಮಾಡಲಾಯಿತು ಮತ್ತು ನಾಗದೇವರಿಗೆ ಹಾಗೂ ನಾಗಬೆರ್ಮೆರಿಗೆ ತಂಬಿಲ ಸೇವೆ ನಡೆಯಿತು.
ಮೂಡಬಿದಿರೆ ಸಾವಿರ ಕಂಬ ಬಸದಿಗೆ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರದಿಂದ ಪ್ರಸಾದ :-
ಮೂಡಬಿದಿರೆ ಸಾವಿರ ಕಂಬ ಬಸದಿಯ ಜೀರ್ಣೋದ್ಧಾರ ಕಾರ್ಯ ಪ್ರಾರಂಭಗೊಂಡಿರುವ ಹಿನ್ನೆಲೆಯಲ್ಲಿ ಪಡುಮಲೆ ಕೋಟಿ ಚೆನ್ನಯರ ಜನ್ಮಸ್ಥಳ ಪ್ರಸಾದ ಹೋಗಬೇಕು ಅನ್ನುವ ಬಸದಿ ಪೂಜ್ಜರ ಸಂಕಲ್ಪದ ಅನುಸಾರವಾಗಿ ಶ್ರೀ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ತಲುಪಿಸುವ ವ್ಯವಸ್ಥೆ ಮಾಡಲಾಯಿತು. ಈ ಸಂದರ್ಭದಲ್ಲಿ ಕೋಟಿ ಚೆನ್ನಯ ಜನ್ಮಸ್ಥಳ ಸಂಚಲನ ಸಮಿತಿ ಪದಾಧಿಕಾರಿಗಳು ಮತ್ತು ಊರಿನವರು ಭಾಗವಹಿಸಿದ್ದರು.