ಪುತ್ತೂರು:ಪುತ್ತೂರು ಹಾಗೂ ಕಡಬ ತಾಲೂಕುಗಳ ವ್ಯಾಪ್ತಿ ಹೊಂದಿರುವ ನೇತ್ರಾವತಿ ಸ್ತ್ರೀಶಕ್ತಿ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘವು 2023-24ನೇ ಸಾಲಿನಲ್ಲಿ ರೂ.7,83,557.12 ನಿವ್ವಳ ಲಾಭಗಳಿಸಿದೆ ಎಂದು ಅಧ್ಯಕ್ಷೆ ಮೀನಾಕ್ಷಿ ಮಂಜುನಾಥ ವಾರ್ಷಿಕ ಮಹಾಸಭೆಯಲ್ಲಿ ಹೇಳಿದರು.
ಸಭೆಯು ಸೆ.17ರಂದು ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಸಭಾಭವನದಲ್ಲಿ ನಡೆಯಿತು. ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, 2014-15ರಲ್ಲಿ ಪ್ರಾರಂಭಗೊಂಡಿರುವ ನಮ್ಮ ಸಂಘವು ರೂ.36,58,500 ಪಾಲು ಬಂಡವಾಳ ಹಾಗೂ ರೂ.11,47,000 ಸರಕಾರ ಸಹಾಯ ನಿಧಿಯನ್ನು ಹೊಂದಿದೆ. ರೂ.97,02,954 ಠೇವಣಿಯನ್ನು ಹೊಂದಿದೆ. ಸದಸ್ಯರಿಗೆ ರೂ.1,13,27,000 ಸಾಲ ವಿತರಿಸಲಾಗಿದ್ದು ರೂ.1,38,44,947 ಸಲ ಹೊರಬಾಕಿಯಿರುತ್ತದೆ ಎಂದು ಹೇಳಿದರು.
ಸಂಘವು ಲಾಭಗಳಿಕೆಯಲ್ಲಿ ಹಂತ ಹಂತವಾಗಿ ಏರಿಕೆ ಕಂಡಿದ್ದು ಈ ವರ್ಷ ರೂ.7.83ಲಕ್ಷ ಲಾಭಗಳಿಸಿದೆ. ಮುಂದಿನ ವರ್ಷದ ರೂ.10ಲಕ್ಷ ಲಾಭಗಳಿಸುವ ನಿರೀಕ್ಷೆಯಿದೆ. ಮಹಿಳೆಯರ ಆರ್ಥಿಕಾಭಿವೃದ್ಧಿಗಾಗಿರುವ ಸಹಕಾರಿ ಸಂಘದ ಮುಖಾಂತರ ಸದಸ್ಯರೆಲ್ಲರೂ ವ್ಯವಹರಿಸಬೇಕು. ಸಂಘದಲ್ಲಿಯೇ ಠೇವಣಿಯಿಡಬೇಕು. ಸಾಲಗಾರರು ಕ್ಲಪ್ತ ಸಮಯದಲ್ಲಿ ಮರುಪಾವತಿಸಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು. ಸಂಘದ ಮುಖಾಂತರ ಮುಂದಿನ ದಿನಗಳಲ್ಲಿ ವಾಹನ ಸಾಲ ನೀಡುವ ಯೋಜನೆಯಿದೆ. ಕಡಬದಲ್ಲಿ ಶಾಖೆ ತೆರೆಯುವ ನಿಟ್ಟಿನಲ್ಲಿ ಆ ಭಾಗದ ಸದಸ್ಯರು, ಸ್ತ್ರೀಶಕ್ತಿ ಸಂಘದ ಸಭೆ ನಡೆಸಲಾಗುವುದು ಎಂದು ಅಧ್ಯಕ್ಷೆ ಮೀನಾಕ್ಷಿ ಮಂಜುನಾಥ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ವನಿತಾ ಮಾತನಾಡಿ, ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ನಿರ್ದೇಶಕರಾದ ಅಮಿತಾ ಹರೀಶ್, ಚಂದ್ರಮ್ಮ, ಜಯಂತಿ ಆರ್.ಗೌಡ, ಜಯಲಕ್ಷ್ಮೀ ಸುರೇಶ್, ಕೆ.ಟಿ ವಲ್ಸಮ್ಮ, ಸುಲೋಚನಾ, ಸುಶೀಲಾ, ಶಕುಂತಳಾ ಎ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಜಿಲ್ಲಾ ಸ್ತ್ರೀಶಕ್ತಿ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದ ಸಂಘದ ನಿರ್ದೇಶಕಿ ಶಕುಂತಳಾ ಎರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ನಿರ್ದೇಶಕಿ ಪ್ರೇಮಲತಾ ಎಸ್ ರೈ ಪ್ರಾರ್ಥಿಸಿದರು. ಅಧ್ಯಕ್ಷೆ ಮೀನಾಕ್ಷಿ ಮಂಜುನಾಥ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ ಎಂ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷೆ ಧನ್ಯಮೋಹನ್ ವಂದಿಸಿದರು. ಲೆಕ್ಕಿಗ ಅಶ್ವಿನಿ ಸಾಮಾನಿ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನಡೆಯಿತು.