ಆಭ್ಯುದಯ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ವಾರ್ಷಿಕ ಮಹಾಸಭೆ

0

ಪುತ್ತೂರು: ಉತ್ತಮ ಸೇವೆಯೊಂದಿಗೆ ನಮ್ಮ ಜೊತೆ ಬೆಳೆಯಿರಿ ಎಂಬ ಧ್ಯೇಯ ವಾಕ್ಯದೊಂದಿಗೆ ಎಪಿಎಂಸಿ ರಸ್ತೆಯ ಆದರ್ಶ ಆಸ್ಪತ್ರೆ ಬಳಿಯ ಜೆಎಂಜೆ ಕಾಂಪ್ಲೆಕ್ಸ್ನಲ್ಲಿ ಕಾರ್ಯಾಚರಿಸುತ್ತಿರುವ ಆಭ್ಯುದಯ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಗೆ ವರ್ಷದ ಸಂಭ್ರಮವಾಗಿದ್ದು, ಈ ಸೊಸೈಟಿಯ ವಾರ್ಷಿಕ ಮಹಾಸಭೆಯು ಜೆಎಂಜೆ ಕಾಂಪ್ಲೆಕ್ಸ್ನಲ್ಲಿ ಸೆ.17 ರಂದು ಸಂಘದ ಅಧ್ಯಕ್ಷ ಲಿಯೋ ಡಿ’ಸೋಜರವರು ದೀಪ ಬೆಳಗಿಸುವುದರೊಂದಿಗೆ ಆರಂಭಗೊಂಡಿತು.


ಸದಸ್ಯತನ, ಪಾಲು ಬಂಡವಾಳ:
ವರದಿ ವರ್ಷದಲ್ಲಿ 560 ಸದಸ್ಯರಿದ್ದು, ರೂ.12,27,500 ಪಾಲು ಬಂಡವಾಳವಿರುತ್ತದೆ. ಸಂಘದಲ್ಲಿ ಆಭ್ಯುದಯ ಸಮೃದ್ಧಿ ಯೋಜನೆ, ರಿಕರಿಂಗ್ ಠೇವಣಿ ಯೋಜನೆ, ಪಿಗ್ಮಿ ಠೇವಣಿ, ನಿರಖು ಠೇವಣಿ, ಉಳಿತಾಯ ಖಾತೆ ಹೀಗೆ ಒಟ್ಟು 1,38,52,675 ಠೇವಣಿ ಸಂಗ್ರಹವಿರುತ್ತದೆ. ಸದಸ್ಯರಿಗೆ ಆರ್ಥಿಕ ಸವಲತ್ತು ನೀಡುವ ಸಲುವಾಗಿ ಠೇವಣಿ ಸಾಲ, ವಾಹನ ಸಾಲ, ಮನೆ ಸಾಲ, ವೈಯಕ್ತಿಕ ಸಾಲ, ವ್ಯಾಪಾರ ಸಾಲ, ಪಿಗ್ಮಿ ಸಾಲ, ಜಾಮೀನು ಸಾಲ, ಚಿನ್ನಾಭರಣ ಸಾಲವನ್ನು ನೀಡುತ್ತಿದ್ದು, ಈ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಮೇಲೆ ವಿಶ್ವಾಸವಿರಿಸಿ ಠೇವಣಿ ಹೂಡಿದ ಎಲ್ಲಾ ಠೇವಣಿದಾರರಿಗೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕ್ಟರ್ ಶರೋನ್ ಡಿ’ಸೋಜರವರು ಅಭಿನಂದನೆಯನ್ನು ಸಲ್ಲಿಸುತ್ತಾ ಮುಂದಿನ ಆರ್ಥಿಕ ವರ್ಷದಲ್ಲಿ ಇನ್ನೂ ಹೆಚ್ಚಿನ ಠೇವಣಿಯನ್ನು ಸಂಸ್ಥೆಯಲ್ಲಿ ತೊಡಗಿಸುವಂತೆ ಮನವಿ ಮಾಡಿದರು.


ಆಡಳಿತ ಮಂಡಳಿ ಸಭೆಗಳು:
ವರದಿ ಸಾಲಿನಲ್ಲಿ ಆರು ಆಡಳಿತ ಮಂಡಳಿ ಸಭೆಗಳು ಹಾಗೂ 19 ಉಪ ಸಮಿತಿ ಸಭೆಗಳು ಜರಗಿರುತ್ತದೆ. ಆಡಳಿತ ಮಂಡಳಿಯ ಸಭೆಗಳಲ್ಲಿ ಆಯವ್ಯಯ ಮಂಜೂರಾತಿ, ಸದಸ್ಯರ ಸೇರ್ಪಡೆ, ಸಾಲ ಸೌಲಭ್ಯಗಳ ವಿತರಣೆ, ಮರುಪಾವತಿ ವಿವರ ಪರಿಶೀಲನೆ ಮತ್ತು ಇತರ ಆಡಳಿತಾತ್ಮಕ ವಿಷಯಗಳನ್ನು ಚರ್ಚಿಸಿ ನಿರ್ಣಯ ಕೈಗೊಳ್ಳಲಾಗಿದೆ. ಸಂಸ್ಥೆಯ ಮೇಲೆ ಅಭಿಮಾನವಿಟ್ಟುಕೊಂಡು ಸಾಲವನ್ನು ಪಡೆದ ಸಾಲಗಾರರು ಸಕಾಲದಲ್ಲಿ ಮರು ಪಾವತಿಸಿ ಸಂಸ್ಥೆಗೆ ಸಹಕಾರ ನೀಡಿರುತ್ತಾರೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕ್ಟರ್ ಶರೋನ್ ಡಿ’ಸೋಜರವರು ಹೇಳಿದರು.


ಸಾಮಾಜಿಕ ಸೇವಾ ಕಾರ್ಯಗಳು:
ಸಂಸ್ಥೆಯು ಲಾಭವನ್ನು ಗಳಿಸದೇ ಇದ್ದರೂ ಕೂಡ ಸಾರ್ವಜನಿಕ ಹಿತದೃಷ್ಟಿಯಿಂದ ಸಂಸ್ಥೆಯು ಕೇವಲ ವ್ಯಾಪಾರ ದೃಷ್ಟಿಯನ್ನು ಇಟ್ಟುಕೊಳ್ಳದೆ ಸದಸ್ಯರೊಂದಿಗೆ ನಿರಂತರ ಸಂಪರ್ಕದೊಂದಿಗೆ ಇರಲು ವಿವಿಧ ಯೋಜನೆಗಳನ್ನು ಹಮ್ಮಿಕೊಂಡು ಸಾಮಾಜಿಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಂಸ್ಥೆಯು ಸದಸ್ಯರ ಸಹಕಾರ ಹಾಗೂ ಪ್ರೋತ್ಸಾಹದಿಂದ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಂಸ್ಥೆಯಿಂದ ಅತೀ ಅಗತ್ಯವುಳ್ಳ ಬಡವರಿಗೆ ಹಾಗೂ ಕ್ಯಾನ್ಸರ್ ರೋಗಿಗಳಿಗೆ ಅವರ ದೈನಂದಿನ ಜೀವನೋಪಾಯಕ್ಕೆ ಬೇಕಾಗುವ ಗುಣಮಟ್ಟದ ಆಹಾರ ಧಾನ್ಯಗಳನ್ನು ಹಾಗೂ ಧನಸಹಾಯ ನೀಡುವ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದೇವೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕ್ಟರ್ ಶರೋನ್ ಡಿ’ಸೋಜರವರು ಹೇಳಿದರು.


ಸಿಬ್ಬಂದಿ-ಗ್ರಾಹಕರ ನಡುವೆ ಪ್ರೀತಿ-ವಿಶ್ವಾಸವಿದ್ದಾಗ ಸಂಸ್ಥೆಯು ಬೆಳೆಯುತ್ತದೆ-ಆಂಟನಿ ಒಲಿವೆರಾ:
ಜೆಎಂಜೆ ಕಾಂಪ್ಲೆಕ್ಸ್ ಮಾಲಕ ಆಂಟನಿ ಒಲಿವೆರಾ ಮಾತನಾಡಿ, ಸಂಸ್ಥೆಯ ಸಿಬ್ಬಂದಿ ಹಾಗೂ ಗ್ರಾಹಕರ ನಡುವೆ ಎಲ್ಲಿ ಪ್ರೀತಿ-ವಿಶ್ವಾಸವಿರುತ್ತದೆಯೋ ಅಲ್ಲಿ ಸಂಸ್ಥೆಯು ಬೆಳೆಯುತ್ತದೆ ಎಂಬುದಕ್ಕೆ ಈ ಆಭ್ಯುದಯ ಸೌಹಾರ್ದ ಸೊಸೈಟಿ ಉದಾಹರಣೆಯಾಗಿದೆ. ಈ ಸೊಸೈಟಿಯಲ್ಲಿನ ಸಿಬ್ಬಂದಿಗಳು ಬಿಸಿಲು-ಮಳೆಯೆನ್ನದೆ ಸಂಘದ ಅಭಿವೃದ್ಧಿ ನಿಟ್ಟಿನಲ್ಲಿ ದುಡಿಯುತ್ತಿರುತ್ತಾರೆ. ಸೊಸೈಟಿಗಳು ಸಾಧನೆ ಮಾಡಬೇಕಾದರೆ ಅವರಲ್ಲಿ ಸಾಧಿಸುವ ಪ್ರಮುಖ ಗುರಿಯಿರಬೇಕು ಜೊತೆಗೆ ಸಾಲ ತೆಗೊಂಡವರು ಕ್ಲಪ್ತ ಸಮಯದಲ್ಲಿ ಸಾಲವನ್ನು ಮರುಪಾವತಿ ಮಾಡಿದಾಗ ಸೊಸೈಟಿಯು ಬೆಳೆಯುತ್ತದೆ ಎಂದರು.


ವಾರ್ಷಿಕೋತ್ಸವ ಪ್ರಯುಕ್ತ ಸ್ಪರ್ಧೆ:
ಸಂಸ್ಥೆಯು ವಾರ್ಷಿಕೋತ್ಸವವನ್ನು ಆಚರಿಸುವ ನಿಟ್ಟಿನಲ್ಲಿ ಸಂಸ್ಥೆಯು ಸಿಬ್ಬಂದಿಗಳಿಗೆ ಒಂದು ತಿಂಗಳಿನಲ್ಲಿ ರೂ.10 ಲಕ್ಷ, ರೂ.20 ಲಕ್ಷ, ರೂ.30 ಲಕ್ಷ ಠೇವಣಿಯನ್ನು ಜೊತೆಗೆ 25 ರಿಂದ 75ರ ತನಕ ಸದಸ್ಯತನದ ಪಿಗ್ಮಿ ಸಂಗ್ರಾಹ ಮಾಡುತ್ತಾರೋ ಅವರಿಗೆ ಪ್ರೋತ್ಸಾಹಕ ಬಹುಮಾನವನ್ನು ನೀಡುವುದೆಂದು ತೀರ್ಮಾನಿಸಲಾಗಿದ್ದು, ಈ ಸ್ಪರ್ಧೆಯಲ್ಲಿ ರೂ.10 ಲಕ್ಷ ಠೇವಣಿ ಸಂಗ್ರಹಿಸಿದ ಶಾಖೆಯ ವ್ಯವಸ್ಥಾಪಕ ನಿರ್ದೇಶಕಿ ವಿಲ್ಮಾ ಪ್ರಿಯಾಂಕ ಡಿ’ಸೋಜರವರು ನಗದು ಬಹುಮಾನವನ್ನು ಪಡೆದುಕೊಂಡರು.


ಈ ಸಂದರ್ಭದಲ್ಲಿ ಸೊಸೈಟಿಯ ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾವೇಣಿ, ನಿರ್ದೇಶಕರಾದ ಕ್ರಿಸ್ತಿನ್ ಡೀನಾ ಡಿ’ಸೋಜ, ಸಿಸಿಲಿಯಾ ಡಿ’ಸೋಜ, ಪ್ರವೀಣ್ ಮೊಂತೇರೊ, ಪ್ರಶಾಂತ್ ಡಿ’ಸೋಜ, ಅವಿನಾಶ್ ಡಿ’ಸೋಜ, ಜೋನ್ ಡೇವಿಡ್ ಸೆರಾವೊ, ಗಣೇಶ್, ಧರ್ಮಪಾಲ, ಸುಕೇಶ್, ಹರಿಪ್ರಸಾದ್ ರೈ, ಗಿರೀಶ್, ಶರಲ್ ನಿಶಾ ಪಾಶನ್, ಜಯಂತ್ ಡಿ’ಸೋಜ ಉಪಸ್ಥಿತರಿದ್ದರು. ಶಾಖಾ ಅಭಿವೃದ್ಧಿ ವ್ಯವಸ್ಥಾಪಕ ವಾಲ್ಟರ್ ಅರೋನ್ ಡಿ’ಸೋಜ ಪ್ರಾರ್ಥಿಸಿದರು. ಶಾಖಾ ವ್ಯವಸ್ಥಾಪಕ ಪ್ರೇಮ್ ರೋಶಲ್ ಡಿ’ಸೋಜ ಸ್ವಾಗತಿಸಿ, ಆಡಳಿತ ವ್ಯವಸ್ಥಾಪಕ ಪವನ್ ಕುಮಾರ್ ವಂದಿಸಿದರು. ಸಂಘದ ಸದಸ್ಯರಾದ ಲೀನಾ ಮಚಾದೋ, ಲ್ಯಾನ್ಸಿ ಮಸ್ಕರೇನ್ಹಸ್ ಸೇಡಿಯಾಪುರವರು ಅತಿಥಿಗಳಿಗೆ ಶಾಲು ಹೊದಿಸಿ ಸ್ವಾಗತಿಸಿದರು. ಶಾಖಾ ಹಿರಿಯ ಸಹಾಯಕಿ ಡಿಂಪಲ್ ಸಹಕರಿಸಿದರು. ಶಾಖಾ ಸಹಾಯಕ ವ್ಯವಸ್ಥಾಪಕಿ ವಿಲ್ಮಾ ಪ್ರಿಯಾಂಕ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು.

ಸದಸ್ಯರುಗಳ ಸಹಕಾರವೇ ಸಂಘದ ಅಭಿವೃದ್ಧಿ..
ಸಂಸ್ಥೆಯು ಆರಂಭವಾಗಿ ಕೇವಲ ಒಂಭತ್ತು ತಿಂಗಳಿನಲ್ಲಿಯೇ 560 ಸದಸ್ಯರನ್ನು ಹೊಂದಿದ್ದು ಒಂದು ಕೋಟಿಗೂ ಮಿಕ್ಕಿ ವ್ಯವಹಾರ ಮಾಡಿದ ಸಾಧನೆ ಹೊಂದಿರುತ್ತದೆ. ಸದಸ್ಯರ ಅಭಿವೃದ್ಧಿಯೊಂದಿಗೆ ಸಂಸ್ಥೆಯ ಅಭಿವೃದ್ಧಿ ಎಂಬ ಮುಖ್ಯ ಉದ್ಧೇಶವನ್ನು ಸಂಸ್ಥೆಯು ಹೊಂದಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯು ಮತ್ತಷ್ಟೂ ಅಭಿವೃದ್ಧಿ ಹೊಂದಬೇಕಾದರೆ ಸದಸ್ಯರ ಸಹಕಾರ ಅತ್ಯಗತ್ಯದ ಜೊತೆಗೆ ಸಂಸ್ಥೆಯು ಮತ್ತಷ್ಟು ಶಾಖೆಗಳನ್ನು ಆರಂಭಿಸಿ ಜನತೆಗೆ ಸೇವೆ ನೀಡುವುದು ಮುಖ್ಯವಾಗಿದೆ.
-ಲಿಯೋ ಡಿ’ಸೋಜ, ಅಧ್ಯಕ್ಷರು, ಆಭ್ಯುದಯ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ

LEAVE A REPLY

Please enter your comment!
Please enter your name here