ಅಂಬಿಕಾ ಮಹಾವಿದ್ಯಾಯದಲ್ಲಿ ಜಾಗೃತಿ ಉಪನ್ಯಾಸ ಕಾರ್ಯಕ್ರಮ

0

ತಿರುಪತಿ ಪ್ರಸಾದ ಅಪವಿತ್ರ ಘೋರ ಅನ್ಯಾಯ : ಸುಬ್ರಹ್ಮಣ್ಯ ನಟ್ಟೋಜ


ಪುತ್ತೂರು: ಹಿಂದಿನ ದಿನಗಳಲ್ಲಿ ಸಂಘಟನೆಗಳಿರಲಿಲ್ಲ. ಆದರೆ ಹಿಂದುತ್ವದ ಭಾವ ಪ್ರತಿಯೊಬ್ಬರಲ್ಲೂ ಇತ್ತು. ಆದರೆ ಇಂದು ಸಂಘಟನೆಗಳಿವೆ, ಆದರೆ ಹಿಂದುತ್ವದ ಭಾವವೇ ಮರೆಯಾಗಿದೆ. ಹಾಗಾಗಿಯೇ ತಿರುಪತಿಯಂತಹ ಮಹಾನ್ ಶ್ರದ್ಧಾ ಕೇಂದ್ರದ ಪವಿತ್ರ ಪ್ರಸಾದವನ್ನು ಅಪವಿತ್ರಗೊಳಿಸಿದ್ದರೂ ಯಾರಿಗೂ ಏನೂ ಅನಿಸುತ್ತಿಲ್ಲ. ಕನಿಷ್ಟ ಆಕ್ರೋಶವನ್ನೂ ಹೊರಹಾಕುತ್ತಿಲ್ಲದಿರುವುದು ದುರಂತ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ತಿರುಪತಿ ದೇವರ ಪ್ರಸಾದದ ಬಗೆಗಿನ ಅಪವಿತ್ರತೆಯ ಬಗೆಗೆ ಮಾತನಾಡಿದರು.


ದನದ ತುಪ್ಪದಿಂದ ತಯಾರಿಸಬೇಕಾದ ದೇವರ ಲಡ್ಡು ಪ್ರಸಾದಕ್ಕೆ ದನದ ಕೊಬ್ಬನ್ನು ಹಾಕಿ ಭಕ್ತಾದಿಗಳಿಗೆ ಹಂಚಲಾಗಿದೆ. ಭಕ್ತರ ನಂಬಿಕೆಯ ಬುಡವನ್ನೇ ಅಲ್ಲಾಡಿಸಲಾಗುತ್ತಿದೆ. ಹಿಂದೂಗಳ ಮೇಲೆ ಈ ರೀತಿಯಾಗಿ ತಲೆತಲಾಂತರಗಳಿಂದ ದೌರ್ಜನ್ಯ ನಡೆಯುತ್ತಲೇ ಬಂದಿದೆ. ಆದಾಗ್ಯೂ ಹಿಂದೂ ಸಮಾಜ ನಿರ್ಭಾವುಕತೆಯಿಂದಿರುವುದು ಮತ್ತೆ ಮತ್ತೆ ಶೋಷಣೆಗೊಳಗಾಗುವುದಕ್ಕೆ ಕಾರಣೀಭೂತವೆನಿಸಿದೆ. ಕನಿಷ್ಟ ಆ ನೆಲೆಯಲ್ಲಿ ಯೋಚಿಸುವ ಮನೋಭಾವವನ್ನಾದರೂ ಹಿಂದೂ ಸಮಾಜ ಬೆಳೆಸಿಕೊಳ್ಳಬೇಕು ಎಂದು ನುಡಿದರು.


ಹಿಂದೆ ಬ್ರಿಟೀಷರ ಕಾಲದಲ್ಲಿ ದನದ ಹಾಗೂ ಹಂದಿಯ ಕೊಬ್ಬನ್ನು ಸವರಿದ ಮದ್ದುಗುಂಡುಗಳನ್ನು ಭಾರತೀಯ ಸೈನಿಕರಿಗೆ ನೀಡಿದ್ದರಿಂದಲೇ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯಿತು. ಇಂದು ಪುನಃ ಅಂತಹದೇ ಕೊಬ್ಬನ್ನು ಪ್ರಸಾದ ರೂಪದಲ್ಲಿ ಕೊಡುವ ದುಷ್ಕಾರ್ಯವನ್ನು ಹಿಂದಿನ ಆಂಧ್ರದ ಮುಖ್ಯಮಂತ್ರಿ ನಡೆಸಿದ್ದಾರೆ. ಹಿಂದೂಗಳ ಭಾವನೆಗಳಿಗೆ ಬೆಲೆಯಿಲ್ಲ ಎಂಬುದು ಮತ್ತೆ ಮತ್ತೆ ಕಂಡುಬರುತ್ತಿದೆ ಎಂದರು.


ಕಾರ್ಯಕ್ರಮದಲ್ಲಿ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಇಂಗ್ಲಿಷ್ ವಿಭಾಗ ಮುಖ್ಯಸ್ಥ ಗಣೇಶ ಪ್ರಸಾದ್ ಎ, ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಕಾಂತ ಗೋರೆ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಅನನ್ಯಾ ವಿ, ಉಪನ್ಯಾಸಕರಾದ ಗಿರೀಶ ಭಟ್, ಸಂಧ್ಯಾ ಎಂ, ಶ್ರೀಕೀರ್ತನಾ, ಹರ್ಷಿತ್ ಪಿಂಡಿವನ, ಕಛೇರಿ ಮುಖ್ಯಸ್ಥೆ ಗಾಯತ್ರೀದೇವಿ, ಕಚೇರಿ ಉದ್ಯೋಗಿ ಮೋಹನ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಗುರುಪ್ರಸಾದ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here