ಕೆ.ಆರ್.ಎಂ ರಬ್ಬರ್ ಮಾರ್ಕೆಟಿಂಗ್ ಶುಭಾರಂಭ

0

ಪುತ್ತೂರು: ಈಶ್ವರಮಂಗಲ, ಸುಳ್ಯದ ಪೈಚಾರ್ ಹಾಗೂ ಎಲಿಮಲೆಯಲ್ಲಿ ರಬ್ಬರ್ ಖರೀದಿ ಕೇಂದ್ರಗಳನ್ನು ಹೊಂದಿರುವ ಕೆ.ಆರ್.ಎಂ ರಬ್ಬರ್ ಮಾರ್ಕೆಟಿಂಗ್ ಸೆ.23ರಂದು ಎಪಿಎಂಸಿ ರಸ್ತೆಯ ಬಾಪ್ ಬೆನ್ಸ್ ಕಟ್ಟಡದಲ್ಲಿ ಶುಭಾರಂಭಗೊಂಡಿತು.

ಮಳಿಗೆಯನ್ನು ಉದ್ಘಾಟಿಸಿದ ಈಶ್ವರಮಂಗಲ ಹನುಮಗಿರಿಯ ಮಹಾಬಲೇಶ್ವರ ಭಟ್ ಕೊನೆತ್ತೋಟ ಮಾತನಾಡಿ, ನೂತನ ಮಳಿಗೆಯು ಪುತ್ತೂರಿನ ರಬ್ಬರ್ ಬೆಳೆಗಾರರಿಗೆ ಅನುಕೂಲವಾಗಲಿ, ಮಳಿಗೆಯ ಮೂಲಕ ರಬ್ಬರ್ ಬೆಳೆಗಾರರು ವ್ಯಾಪಾರ ನಡೆಸುವ ಮುಖಾಂತರ ಎಲ್ಲರ ಸಹಕಾರ ದೊರೆಯಲಿ ಎಂದರು.


ಮುಖ್ಯ ಅತಿಥಿ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ರಬ್ಬರ್ ಮಾರಾಟ ವಿಭಾಗದಲ್ಲಿ ಸಾಕಷ್ಟು ಅನುಭವ, ಪರಿಣತಿ ಹೊಂದಿರುವ ಮಳಿಗೆ ಮೂಲಕ ರೈತರ ಉತ್ಪನ್ನಗಳಿಗೆ ಉತ್ತಮ ಧಾರಣೆ ಹಾಗೂ ನ್ಯಾಯ ದೊರೆಯಲು ಸಹಕಾರಿಯಾಗಲಿದೆ. ಆಧುನಿಕಯೊಂದಿಗೆ ಕೃಷಿ ಮಾಡುವ ರೈತರು ಉತ್ಪನ್ನಗಳಿಗೆ ಉತ್ತಮ ಬೆಲೆ ನಿರೀಕ್ಷೆ ಮಾಡುತ್ತಿದ್ದು ಸಂಸ್ಥೆಯ ಮುಖಾಂತರ ಉತ್ತಮ ಧಾರಣೆ ದೊರೆಯಲಿ ಎಂದರು.


ರಬ್ಬರ್ ಖರೀದಿಗೆ ಚಾಲನೆ ನೀಡಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಯಾವುದೇ ಅನುಮತಿಯಿಲ್ಲದೆ ಅಡಿಕೆ ಆಮದು ಮಾಡಿಕೊಳ್ಳಲು ಕೇಂದ್ರ ಸರಕಾರ ಅನುಮತಿ ನೀಡಿರುವುದು ಅಡಿಕೆ ಕೃಷಿಗೆ ಮಾರಕ. ಇದರ ಬಗ್ಗೆ ಅವರಿಗೆ ಅರಿವಿದೆಯಾ ಎಂದು ಗೊತ್ತಿಲ್ಲ. ಆದರೆ ಈ ನಿಯಮದಿಂದಾಗಿ ರೈತರಿಗಾಗುವ ಸಂಕಷ್ಟದ ಬಗ್ಗೆ ಕೇಂದ್ರ ಕೃಷಿ ಸಚಿವರ ಗಮಕ್ಕೆ ಆವಶ್ಯಕತೆಯಿದ್ದು, ರಾಜ್ಯದ ಕೃಷಿ ಸಚಿವರು, ಮುಖ್ಯಮಂತ್ರಿಗಳ ಮೂಲಕ ಕೇಂದ್ರ ಕೃಷಿ ಸಚಿವರನ್ನು ಭೇಟಿಯಾಗಿ ಅವರ ಗಮನಕ್ಕೆ ತರಲಾಗುವುದು. ಈ ಕುರಿತು ನಾನು ರಾಜ್ಯ ಕೃಷಿ ಸಚಿವರು, ಮುಖ್ಯಮಂತ್ರಿಗಳನ್ನು ಭೇಟಿಯಾಗಲಿದ್ದೇನೆ. ಅಡಿಕೆ ಆಮದ ಮಾಡಿಕೊಳ್ಳುವ ಬಗ್ಗೆ ಪಕ್ಷಾತೀತವಾಗಿ ಎದುರಿಸಬೇಕು ಎಂದರು. ರಬ್ಬರ್‌ಗೆ ಈ ಬೇಡಿಕೆ ಹೆಚ್ಚಿದ್ದು ಧಾರಣೆಯು ಏರಿಕೆಯಾಗಿದೆ. ನೂತನ ಮಳಿಗೆಯ ಮೂಲಕ ರೈತರಿಗೆ ಲಾಭದಾಯಕದ ಜೊತೆಗೆ ಜನರಿಗೆ ಉದ್ಯೋಗವೂ ದೊರೆಯಲಿ ಎಂದರು.


ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ರಬ್ಬರ್‌ಗೆ ಈಗ ಬಹಳ ಬೇಡಿಕೆಯಿದ್ದು, ದರ ಅಧಿಕ ಆಗುತ್ತಿದೆ. ನೂತನ ಖರೀದಿ ಕೇಂದ್ರದ ಮೂಲಕ ಈ ಭಾಗದ ರೈತರಿಗೆ ಉತ್ತಮ ಧಾರಣೆ ದೊರೆಯಲಿ ಎಂದರು. ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಮಾಜಿ ಅಧ್ಯಕ್ಷ ರಮೇಶ್ ರೈ ಸಾಂತ್ಯ ಮಾತನಾಡಿ, ರಬ್ಬರ್ ಮಾರುಕಟ್ಟೆಯಲ್ಲಿ ಈಶ್ವರಮಂಗಲ ಮತ್ತು ಇತರ ಕಡೆಗಳಲ್ಲಿ ವ್ಯವಹಾರ ನಡೆಸುತ್ತಿರುವ ಸಂಸ್ಥೆಯ ಮೂಲಕ ಜನರಿಗೆ ಉತ್ತಮ ಸೇವೆ ದೊರೆಯಲಿ ಎಂದರು.


ಸುಳ್ಯ ಪೀಸ್ ಸ್ಕೂಲ್‌ನ ಅಧ್ಯಕ್ಷ ಅಬೂಬಕ್ಕರ್, ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಮಾಜಿ ಸದಸ್ಯ ಖಾದರ್ ಕರ್ನೂರು, ಉದ್ಯಮಿ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ವೇಣುಗೋಪಾಲ ಶೆಟ್ಟಿ, ಕೆ.ಸಿ ಈಶ್ವರಪ್ರಸಾದ್, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ದಂಬೆಕಾನ ಸದಾಶಿವ ರೈ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ, ಶುಭಕೋರಿದರು. ಮ್ಹಾಲಕ ಸಂಶುದ್ದೀನ್ ಸುಳ್ಯ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here