ಪುತ್ತೂರು:ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ದಾಖಲಾಗಿರುವ ಮೂರು ಪ್ರಕರಣಗಳ ತನಿಖೆಗೆ ರಾಜ್ಯ ಸರಕಾರ ವಿಶೇಷ ತನಿಖಾ ತಂಡ(ಎಸ್‌ಐಟಿ)ರಚಿಸಿ ಆದೇಶ ಹೊರಡಿಸಿದ್ದು ಈ ತಂಡದಲ್ಲಿ ಕಡಬ ಮೂಲದ ಪೊಲೀಸ್ ಅಧೀಕ್ಷಕ ಸಿಎ ಸೈಮನ್‌ರವರನ್ನು ನೇಮಿಸಲಾಗಿದೆ. ಸಿಐಡಿ ಆರ್ಥಿಕ ಅಪರಾಧಗಳ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಬಿ.ಕೆ.ಸಿಂಗ್ ನೇತೃತ್ವದಲ್ಲಿ ರಚನೆಯಾಗಿರುವ ಎಸ್‌ಐಟಿ ತಂಡದಲ್ಲಿ ಕೇಂದ್ರ ವಲಯ ಪೊಲೀಸ್ ಮಹಾನಿರೀಕ್ಷಕ ಲಾಬೂ ರಾಮ್, ಬೆಂಗಳೂರು ರೈಲ್ವೇ ವಿಭಾಗದ ಪೊಲೀಸ್ ಅಧೀಕ್ಷಕಿ ಸೌಮ್ಯಲತಾ ಹಾಗೂ ಪೊಲೀಸ್ ಅಧೀಕ್ಷಕ ಸಿ.ಎ.ಸೈಮನ್ ಸದಸ್ಯರಾಗಿದ್ದಾರೆ.
ಮೂಲತ: ಕಡಬ ಹಳೆಸ್ಟೇಷನ್ ನಿವಾಸಿಯಾಗಿರುವ ಸೈಮನ್‌ರವರು ಪ್ರಸ್ತುತ ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿ ನಿವಾಸಿಯಾಗಿದ್ದಾರೆ. ಉಪ್ಪಿನಂಗಡಿಯಲ್ಲಿ ತನ್ನ ವ್ಯಾಸಂಗವನ್ನು ಆರಂಭಿಸಿದ್ದ ಸೈಮನ್‌ರವರು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಪದವಿ ಪೂರೈಸಿ ಮಂಗಳೂರು ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ವಕೀಲ ವೃತ್ತಿ ಆರಂಭಿಸಿದ್ದರು.
2002ರಲ್ಲಿ ರಾಜ್ಯ ಸಿಐಡಿ ವಿಭಾಗದ ಸಬ್‌ಇನ್‌ಸ್ಪೆಕ್ಟರ್ ಆಗಿ ಪೊಲೀಸ್ ಸೇವೆ ಆರಂಭಿಸಿ ಬಳಿಕ ಪದೋನ್ನತಿಗೊಂಡು ಸರ್ಕಲ್ ಇನ್‌ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. ಬಳಿಕ ಡಿವೈಎಸ್ಪಿಯಾಗಿ ಭಡ್ತಿಹೊಂದಿ 2011ರಲ್ಲಿ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿದ್ದರು. 2020ರಲ್ಲಿ ಎಸ್ಪಿಯಾಗಿ ಪದೋನ್ನತಿಗೊಂಡಿದ್ದರು.ಎಸಿಬಿಯಲ್ಲಿ ಪಶ್ಚಿಮ ವಲಯದ ಎಸ್ಪಿಯಾಗಿ 2021 ಆಗಸ್ಟ್ 2ರಂದು ಅಧಿಕಾರ ವಹಿಸಿಕೊಂಡಿದ್ದರು. ಹೈಕೋರ್ಟ್ ಆದೇಶದಂತೆ ಸರಕಾರ ಎಸಿಬಿಯನ್ನು ರದ್ದುಪಡಿಸಿ ಲೋಕಾಯುಕ್ತಕ್ಕೆ ಮರು ಅಧಿಕಾರ ಸ್ಥಾಪಿಸಿತ್ತು. ಬಳಿಕ ಸೈಮನ್‌ರವರು ಲೋಕಾಯುಕ್ತ ಬೆಂಗಳೂರು ಪ್ರಧಾನ ಕಚೇರಿಯಲ್ಲಿ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿ ದ.ಕ.ಮತ್ತು ಉಡುಪಿ ಜಿಲ್ಲೆಯನ್ನೊಳಗೊಂಡ ಮಂಗಳೂರು ಲೋಕಾಯುಕ್ತ ಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಅವರ ತಂದೆ ಸಿ.ಪಿ.ಅಬ್ರಹಾಂ ಅವರು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದರು.
ಮುನಿರತ್ನ ಪ್ರಕರಣ: ಮುನಿರತ್ನ ವಿರುದ್ಧ ವೈಯಾಲಿಕಾವಲ್ ಠಾಣೆಯಲ್ಲಿ ದಾಖಲಾದ ಎರಡು ಅಪರಾಧ ಪ್ರಕರಣಗಳು ಮತ್ತು ರಾಮನಗರ ಜಿಲ್ಲೆಯ ಕಗ್ಗಲೀಪುರ ಠಾಣೆಯಲ್ಲಿ ದಾಖಲಾದ ಅತ್ಯಾಚಾರ ಆರೋಪದ ಮೊಕದ್ದಮೆ ಸೇರಿದಂತೆ ರಾಜ್ಯದ ಇತರ ಎಲ್ಲ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳ ತನಿಖೆ ನಡೆಸಬೇಕು.ಪೊಲೀಸ್ ಮಹಾ ನಿರ್ದೇಶಕರ ಮೂಲಕ ತನಿಖಾ ವರದಿಯನ್ನು ಶೀಘ್ರದಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದೂ ಎಸ್‌ಐಟಿಗೆ ಸರ್ಕಾರ ಸೂಚಿಸಿದೆ.
‘ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿ, ಲಂಚಕ್ಕೆ ಬೇಡಿಕೆ ಇಟ್ಟಿರುವ ಕುರಿತು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ(ದೌರ್ಜನ್ಯ ತಡೆ)ಕಾಯ್ದೆಯಡಿ ಸೆ.13ರಂದು ವೈಯಾಲಿಕಾವಲ್ ಠಾಣೆಯಲ್ಲಿ ಮುನಿರತ್ನ ಮತ್ತು ಇತರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಮಹಿಳೆಯೊಬ್ಬರು ನೀಡಿದ ದೂರಿನ ಮೇಲೆ ಕಗ್ಗಲೀಪುರ ಠಾಣೆಯಲ್ಲಿ ಅತ್ಯಾಚಾರ ಆರೋಪದ ಪ್ರಕರಣ ಸೆ.18ರಂದು ದಾಖಲಾಗಿದೆ. ಈ ಪ್ರಕರಣಗಳ ಗಂಭೀರತೆಯನ್ನು ಪರಿಗಣಿಸಿ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ಗೃಹ ಇಲಾಖೆ ಆದೇಶದಲ್ಲಿ ತಿಳಿಸಿದೆ.