ಉಪ್ಪಿನಂಗಡಿ: ಶವ ಸಂಸ್ಕಾರ ನೆರವೇರಿಸಿದ ಆರೆಸ್ಸೆಸ್ ಸ್ವಯಂ ಸೇವಕರು

0

ಉಪ್ಪಿನಂಗಡಿ: ಆರ್ಥಿಕವಾಗಿ ತೀರಾ ಸಂಕಷ್ಠದಲ್ಲಿದ್ದ ಕುಟುಂಬದ ಆಸರೆಯಾಗಿದ್ದ ಏಕೈಕ ಪುರುಷ ವ್ಯಕ್ತಿ ಸಾವಿಗೀಡಾಗಿ ಮುಂದೇನು ಎಂದು ಅತಂತ್ರವಾಗಿದ್ದ ಉಪೇಕ್ಷಿತ ಸಮಾಜದ ಕುಟುಂಬವೊಂದಕ್ಕೆ ಆರೆಸ್ಸೆಸ್ ಕಾರ್ಯಕರ್ತರು ಅಂತ್ಯ ಸಂಸ್ಕಾರಕ್ಕೆ ನೆರವಾಗಿ ಸೇವಾ ಕಾರ್ಯವನ್ನು ನೆರವೇರಿಸಿದ ಘಟನೆ ಹಿರೆಬಂಡಾಡಿಯಿಂದ ವರದಿಯಾಗಿದೆ.


ಹಿರೆಬಂಡಾಡಿ ಗ್ರಾಮದ ಶಾಖೆಪುರ ಎಂಬಲ್ಲಿನ ನಿವಾಸಿ 70 ರ ಹರೆಯದ ಅವಿವಾಹಿತ ಬಾಬು ಎಂಬವರು ಆದಿತ್ಯವಾರ ಮಧ್ಯಾಹ್ನ ನಿಧನರಾಗಿದ್ದರು. ಮನೆಯಲ್ಲಿ ಅವರ ಅವಿವಾಹಿತ ಸಹೋದರಿಯರನ್ನು ಬಿಟ್ಟರೆ ಬೇರಾರೂ ಇರಲಿಲ್ಲ. ದೂರದ ಸಂಬಂಧಿಕರು ಆಗಮಿಸುವ ನಿರೀಕ್ಷೆಯಲ್ಲಿ ಇದ್ದ ಸಹೋದರಿಯರಿಗೆ ಕಟ್ಟಿಗೆಯ ಕಾರಣಕ್ಕೆ ಸ್ಥಳೀಯ ಆರೆಸ್ಸೆಸ್ ಸ್ವಯಂಸೇವಕ ಹೊನ್ನಪ್ಪ ಗೌಡ ಎಂಬವರನ್ನು ಸಂಪರ್ಕಿಸಿದಾಗಲೇ ಅವರ ಮನೆಯಲ್ಲಿ ಮರಣ ಸಂಭವಿಸಿರುವುದು ಹೊರ ಜಗತ್ತಿಗೆ ತಿಳಿಯಿತು.


ಕೂಡಲೇ ಕಾರ್ಯಪ್ರವೃತ್ತರಾದ ಅವರು, ಶವ ಸಂಸ್ಕಾರವನ್ನು ಸ್ಮಶಾನದಲ್ಲಿ ನಡೆಸಲು ಸೂಚಿಸಿ ಸ್ಮಶಾನದಲ್ಲಿ ಕಟ್ಟಿಗೆಯ ವ್ಯವಸ್ಥೆಯನ್ನು ತನ್ನ ವತಿಯಿಂದ ಕಲ್ಪಿಸಿದರು. ಶವ ಸಾಗಾಟ ಕಾರ್ಯದಲ್ಲಿ ಸ್ವಯಂಸೇವಕರಾದ ಸೋಮೇಶ್, ನಿತಿನ್ ತಾರಿಪಡ್ಪು, ಕಿಶೋರ್ ನೀರಕಟ್ಟೆ ಸಹಕಾರ ನೀಡಿ ಉಪ್ಪಿನಂಗಡಿಯ ಹರಿಶ್ಚಂದ್ರ ಘಾಟ್ ಸ್ಮಶಾನದಲ್ಲಿ ವಿಧಿ ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರವನ್ನು ನಡೆಸಲಾಯಿತು. ಸಮಾಜದ ಬಂಧುಗಳ ಸಂಕಷ್ಠಕ್ಕೆ ಸದ್ದಿಲ್ಲದೆ ನೆರವಾಗುವ ಮೂಲಕ ಮಾನವೀಯ ನೆಲೆಗಟ್ಟಿನ ಆದರ್ಶನವನ್ನು ಮೆರೆಯಲಾಯಿತು.

LEAVE A REPLY

Please enter your comment!
Please enter your name here