ಪುತ್ತೂರಿನಲ್ಲಿ ಮೈಸೂರು ಕೊಡಗು ಮಾಜಿ ಸಂಸದ ಪ್ರತಾಪ್‌ಸಿಂಹ ಹೇಳಿಕೆ
ಪುತ್ತೂರು: ಮುಖ್ಯಮಂತ್ರಿಯವರು ಇವತ್ತು ತಕ್ಷಣಕ್ಕೆ ತನ್ನ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಒಳ್ಳೆಯ ಮೇಲ್ಪಂಕ್ತಿಯನ್ನು ಹಾಕಿಕೊಡಬೇಕೆಂದು ನಾನು ಕೇಳಿಕೊಳ್ಳುತ್ತೇನೆ. ನೀವು ನಿಮ್ಮ ಪತ್ನಿಯ ಹೆಸರಿನಲ್ಲಿ ಅಕ್ರಮವಾಗಿ ಪಡೆದಿರುವ 14 ಸೈಟ್‌ಗಳನ್ನು ಸೆರೆಂಡರ್ ಮಾಡಿ. ತನಿಖೆಗೆ ಆದೇಶ ಮಾಡಿ ಎಂದು ಕಿವಿಮಾತು ಹೇಳಿದ್ದೆ. ಸಿದ್ದರಾಮಯ್ಯ ಅವರು ಕೇಳಿಸಿಕೊಳ್ಳಲಿಲ್ಲ. ಅವರ ಸುತ್ತಮುತ್ತಲಿನ ಕಿಡಿಗೇಡಿಗಳು ಕೊಟ್ಟಂತಹ ಸಲಹೆಯನ್ನು ನಂಬಿ ಕೂತರು. ಹಾಗಾಗಿ ಅವರಿಗೆ ಈ ಪರಿಸ್ಥಿತಿ ಬಂದಿದೆ ಎಂದು ಮೈಸೂರು ಕೊಡಗು ಮಾಜಿ ಸಂಸದ ಪ್ರತಾಪ್‌ಸಿಂಹ ಅವರು ಹೇಳಿದ್ದಾರೆ.
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಕ್ರಿಮಿನಲ್ ಪ್ರಕರಣದ ತನಿಖೆಗೆ ರಾಜ್ಯಪಾಲರು ನೀಡಿರುವ ಆದೇಶವನ್ನು ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿರುವ ವಿಚಾರವಾಗಿ ಪ್ರತಾಪ್ ಸಿಂಹ ಅವರು ಪತ್ರಿಕಾ ಮಾಧ್ಯಮದೊಂದಿಗೆ ಪುತ್ತೂರು ವಿವೇಕಾನಂದ ಕಾಲೇಜು ಕ್ಯಾಂಪಸ್‌ನಲ್ಲಿ ಮಾತನಾಡಿದರು.
ಸಿದ್ದರಾಮಯ್ಯ ಅವರು ನನ್ನ ಕಿವಿಮಾತು ಕೇಳಿ ಅವತ್ತೆ ಅವರು 14 ಸೈಟ್‌ಗಳನ್ನು ಸೆರೆಂಡರ್ ಮಾಡುತ್ತಿದ್ದರೆ ಎಲ್ಲಾ ಪಕ್ಷಗಳಲ್ಲಿರುವ ಎಲ್ಲಾ ಕಳ್ಳರು ಸಿಕ್ಕಿ ಹಾಕಿಕೊಳ್ಳುತ್ತಿದ್ದರು. ಸಿದ್ಧರಾಮಯ್ಯ ಅವರೊಬ್ಬರಿಗೆ ಮಾತ್ರ ಕಳಂಕ ತಟ್ಟುತ್ತಿರಲಿಲ್ಲ. ಆಗ ಅವರು ಕಳಂಕದಿಂದ ತಪ್ಪಿಸಿಕೊಳ್ಳುತ್ತಿದ್ದರು. ಆಗ ಸಿದ್ಧರಾಮಯ್ಯ ಅವರಿಗೆ ನಾನು ಹೇಳಿದ ಕಿವಿ ಮಾತು ಅವರಿಗೆ ಕೇಳಿಲ್ಲ. ಆ 14 ಸೈಟ್‌ಗಳಿಗಾಗಿ ಇವತ್ತು ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಳ್ಳುವ ಪರಿಸ್ಥಿತಿಯನ್ನು ಅವರ ಸ್ವಯಂಕೃತ ಅಪರಾಧದಿಂದ ನಿರ್ಮಾಣ ಮಾಡಿಕೊಂಡರು. ಹಾಗಾಗಿ ತಕ್ಷಣಕ್ಕೆ ರಾಜೀನಾಮೆ ನೀಡಬೇಕು ಎಂದ ಅವರು ಅವರು ಬಡವರ ಜೊತೆ ಕಾಳಜಿಯುಳ್ಳ ಮೌಲ್ಯಯುತ ರಾಜಕಾರಣಿ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಹಾಗಾಗಿ ಚಯರ್‌ಗೆ ಅಂಟಿಕೊಳ್ಳುವ ಜಾರ್‌ಖಂಡ್‌ನ ಹೇಮಂತ್ ಅಥವಾ ದೆಹಲಿಯ ಅರವಿಂದ ಕ್ರೇಜಿವಾಲ್‌ರಂತಹ ರಾಜಕಾರಣ ಅನುಸರಿಸಬೇಡಿ. ಹಾಗಾಗಿ ತಕ್ಷಣಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟು ವಿಚಾರಣೆ ಎದುರಿಸಿ. ಸರಕಾರದ ಯಾವುದೇ ಒಂದು ಏಜನ್ಸಿ ಮೂಲಕ ವಿಚಾರಣೆ ನಡೆಸುತ್ತದೆ. ಆದಷ್ಟು ತನಿಖೆ ಮುಗಿಸಿ ಒಂದು ವೇಳೆ ನೀವು ಕಳಂಕಿತರಲ್ಲ ಎಂದಾದರೆ ಪುನಃ ಚಯರ್‌ಗೆ ಬರಬಹುದು. ಆದರೆ ಇವತ್ತು ನೀವು ಚಯರ್‌ಗೆ ಅಂಟಿಕೊಂಡರೆ ನಿಮ್ಮ 45 ವರ್ಷಗಳ ರಾಜಕೀಯ ಜೀವನ ಕಳಂಕದಲ್ಲಿ ಅಂತ್ಯವಾಗುತ್ತದೆ ಎಂದರು.
ಶತ್ರುಗಳು ಅಕ್ಕಪಕ್ಕದಲ್ಲಿರುವುದು ನನಗೂ ಅನುಭವ:
ರಾಜಕಾರಣದಲ್ಲಿ ಶತ್ರುಗಳು ಅಕ್ಕಪಕ್ಕದಲ್ಲೇ ಇರುತ್ತಾರೆ. ನಾನೊಬ್ಬ ಸಂಸದನಾಗಿದ್ದು ನನಗೂ ಅನುಭವಕ್ಕೆ ಬಂದಿದೆ. ಶತ್ರುಗಳು ಯಾವತ್ತೂ ಕೂಡಾ ಬಿಜೆಪಿ, ಜೆಡಿಎಸ್‌ನಲ್ಲಿ ಇರುವುದಿಲ್ಲ.
ಸಿದ್ಧರಾಮಯ್ಯ ಅವರ ಶತ್ರುಗಳು ಕಾಂಗ್ರೆಸ್‌ನಲ್ಲೇ ಇದ್ದಾರೆ. ಶತ್ರುಗಳ ಮಾತುಗಳನ್ನು ಕೇಳದೆ ನಿಮ್ಮ ಜೊತೆ ಇದ್ದಿವಿ ಎಂದು ಯಾರ‍್ಯಾರೂ ಹೇಳುತ್ತಾರೋ ಅವರನ್ನು ಯಾರನ್ನೂ ನಂಬಬೇಡಿ.
ಪ್ರತಾಪ್‌ಸಿಂಹ,ಮಾಜಿ ಸಂಸದರು