ರೂ.1,16ಲಕ್ಷ ಲಾಭ, ಶೇ.10 ಡಿವಿಡೆಂಡ್, 35 ಪೈಸೆ ಬೋನಸ್
ಪುತ್ತೂರು: ಪಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘವು 2023-24ನೇ ಸಾಲಿನಲ್ಲಿ ರೂ.1,16,101.39 ಲಾಭಗಳಿಸಿ ಸದಸ್ಯರಿಗೆ ಶೇ.10 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 35 ಪೈಸೆ ಬೋನಸ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ರಾಮಣ್ಣ ಗೌಡ ಪುಳು ಸಾಮಾನ್ಯ ಸಭೆಯಲ್ಲಿ ಘೋಷಣೆ ಮಾಡಿದರು.
ಸಭೆಯು ಸೆ.25ರಂದು ಸಂಘದ ಕ್ಷೀರಾಲಯದ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದಲ್ಲಿ ವರ್ಷಾಂತ್ಯಕ್ಕೆ 185 ಸದಸ್ಯರಿಂದ ರೂ.27,210 ಪಾಲು ಬಂಡವಾಳವಿದೆ. ವರದಿ ಸಾಲಿನಲ್ಲಿ ಸಂಘವು 1,59,595.15 ಲೀಟರ್ ಹಾಲು ಖರೀದಿಸಿ 8,167 ಲೀಟರ್ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ. ವ್ಯಾಪಾರ ಲಾಭದಿಂದ ರೂ.5,68,908.10, ಇತರ ಆದಾಯಗಳಿಂದ ರೂ.89,189.06 ಸೇರಿದಂತೆ ಒಟ್ಟು 6,58,097.16 ಆದಾಯ ಬಂದಿರುತ್ತದೆ. ಲಾಭಾಂಶವನ್ನು ಸಂಘದ ಉಪನಿಬಂಧನೆಯಂತೆ ವಿಂಗಡಿಸಲಾಗಿದೆ ಎಂದರು.
ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಪಿ. ಮಾತನಾಡಿ, ಹೈನುಗಾರಿಕೆಗೆ ಒಕ್ಕೂಟದಿಂದ ದೊರೆಯುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಸದುಪಯೋಗ ಪಡಿಸಿಕೊಳ್ಳವಂತೆ ತಿಳಿಸಿದರು.
ಸನ್ಮಾನ:
ವರದಿ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಪ್ರೇಮ ಕೊಡಂಗೆ(ಪ್ರ), ಗಿರಿಜ ಪಡ್ನೂರು(ದ್ವಿ), ಸುಶೀಲ ಕೂಟೇಲು(ತೃ) ಬಹುಮಾನ ಹಾಗೂ ಎಲ್ಲಾ ಹಾಲು ಉತ್ಪಾದಕರಿಗೆ ಪ್ರೋತ್ಸಾಹಕ ಬಹುಮಾನಗಳನ್ನು ವಿತರಿಸಲಾಯಿತು.
ಉಪಾಧ್ಯಕ್ಷೆ ಹೇಮಲತಾ ಎಸ್, ನಿರ್ದೇಶಕರಾದ ಜಾನಕಿ ಕುಂಬಾಡಿ, ಗಂಗಾಧರ ಗೌಡ, ಗೋಪಾಲಕೃಷ್ಣ ಕೆ., ಸುಶೀಲ ಕೂಟೇಲು, ಪ್ರೇಮ ಕೆ., ಬಟ್ಯಪ್ಪ, ನೀಲಪ್ಪ ನಾಯ್ಕ ಹಾಗೂ ರಮೇಶ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಾಲು ಪರೀಕ್ಷಕಿ ಲತಾ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಾವತಿ ವರದಿ ಹಾಗೂ ಲೆಕ್ಕಪತ್ರ ಮಂಡಿಸಿ, ವಂದಿಸಿದರು.