ಪುತ್ತೂರು:2023ರಲ್ಲಿ ಉಪ್ಪಿನಂಗಡಿ ಕೂಟೇಲ್ ಬಳಿ ಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿದ್ದ ಅಕ್ರಮ ಗಾಂಜಾ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿದ ನಾಲ್ಕನೇ ಆರೋಪಿಗೆ ಜಿಲ್ಲಾ ಐದನೇ ಸತ್ರ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ದಿನಾಂಕ 11.08.2023ರಂದು ಉಪ್ಪಿನಂಗಡಿ ಪೊಲೀಸರು ಉಪ್ಪಿನಂಗಡಿ ಕೂಟೇಲ್ ರಾಯಲ್ ಮೆಕ್ಸಿಕೋ ಹೋಟೆಲ್ ಎದುರುಗಡೆ ತಪಾಸಣೆ ನಡೆಸುತ್ತಿದ್ದ ವೇಳೆ ಹಾಸನದಿಂದ ಮಂಗಳೂರು ಕಡೆಗೆ ಅರುಣಾಚಲ ಕಂಪನಿಗೆ ಸೇರಿದ ಲಾರಿಯನ್ನು ನಿಲ್ಲಿಸಲು ಸೂಚಿಸಿದಾಗ ಲಾರಿ ಚಾಲಕ ರಾಘವೇಂದ್ರ ಅಮೀನ್ ಎಂಬಾತ ಲಾರಿಯನ್ನು ಸ್ವಲ್ಪ ದೂರ ನಿಲ್ಲಿಸಿ ತನ್ನ ಕೈಯಲ್ಲಿದ್ದ ಪೊಟ್ಟಣ ವೊಂದನ್ನು ಎಸೆದು ಓಡಲು ಯತ್ನಿಸಿದಾಗ ಪೊಲೀಸರು ಆತನನ್ನು ಹಿಡಿದು ವಿಚಾರಣೆ ನಡೆಸಿದಾಗ ಮತ್ತು ಎಸೆದ ಪೊಟ್ಟಣವನ್ನು ತಪಾಸಣೆಗೆ ಒಳಪಡಿಸಿದಾಗ ಅಕ್ರಮವಾಗಿ ಗಾಂಜಾವನ್ನು ಮಂಗಳೂರು ಕಡೆಗೆ ಸಾಗಾಟ ಮಾಡುವುದಾಗಿ ಲಾರಿ ಚಾಲಕ ಒಪ್ಪಿಕೊಂಡಿದ್ದ.ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಪ್ರಕರಣದ ನಾಲ್ಕನೇ ಆರೋಪಿಯಾಗಿ ಇಮ್ರಾನ್ ಶೇಕ್ ಮಂಗಳೂರು ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ ಇದೀಗ ಜಾಮೀನು ಮಂಜೂರಾಗಿದೆ.ಆರೋಪಿಯ ಪರವಾಗಿ ನ್ಯಾಯವಾದಿಗಳಾದ ಜಗದೀಶ್ ಡಿ.ಪಿ.,ಪ್ರಿಯಾ ಮಹೇಶ್,ಲಿಖಿತರವರು ವಾದಿಸಿದ್ದರು.