ಕೆಯ್ಯೂರು: ರಾಮಕುಂಜೇಶ್ವರ ಪ್ರೌಢಶಾಲೆ, ರಾಮಕುಂಜ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಯುವಸಂಸತ್ ಸ್ಪರ್ಧೆಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರಿನ ಐದು ಜನರ ತಂಡ ಭಾಗವಹಿಸಿ, ಅವರ ಪೈಕಿ ಹತ್ತನೇ ತರಗತಿ ವಿದ್ಯಾರ್ಥಿನಿ ಅಸ್ಮಿತಾ ಎಸ್ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಳು. ಜಿಲ್ಲಾ ಮಟ್ಟದ ಸ್ಪರ್ಧೆ ಮಂಗಳೂರಿನ ಜೆಪ್ಪುವಿನಲ್ಲಿರುವ ಕಾಸಿಯಾ ಪ್ರೌಢಶಾಲೆಯಲ್ಲಿ ನಡೆದ, ಏಳು ಶೈಕ್ಷಣಿಕ ತಾಲೂಕುಗಳಿಂದ ಭಾಗವಹಿಸಿದ 35 ಸ್ಪರ್ಧಿಗಳ ಪೈಕಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಇಬ್ಬರಲ್ಲಿ ದ್ವಿತೀಯ ಸ್ಥಾನಿಯಾಗಿ ಅಸ್ಮಿತಾ ಎಸ್ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾಳೆ.
ಬಹುಮುಖ ಪ್ರತಿಭೆಯಾಗಿರುವ ಅಸ್ಮಿತಾ ಎಸ್ ಕಳೆದ ವರ್ಷ RBI ಯವರು ನಡೆಸಿದ ರಸಪ್ರಶ್ನೆಯಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟಗಳಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಪೂರ್ವಭಾವಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಳು. ತಾಲೂಕು ಮಟ್ಟದ ಪ್ರಾಚ್ಯಪ್ರಜ್ಞೆ ಸ್ಪರ್ಧೆಯ ರಸಪ್ರಶ್ನೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಳು. ಕಳೆದ ಬಾರಿ ಸವಣೂರು ವಲಯ ಮಟ್ಟದ ಪ್ರತಿಭಾ ಕಾರಂಜಿಯ ಕನ್ನಡ ಭಾಷಣ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, ಈ ವರ್ಷ ನಾಡಪ್ರಭು ಕೆಂಪೇಗೌಡ ಜಯಂತಿ ಪ್ರಯುಕ್ತ ಶಿಕ್ಷಣ ಇಲಾಖೆ ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ, ಈ ಬಾರಿ ಪುತ್ತೂರಿನ ಪೊಲೀಸ್ ಅಧಿಕಾರಿ ಆಂಜನೇಯ ರೆಡ್ಡಿಯವರು ಸರಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಹಾಗೂ ಇತ್ತೀಚೆಗೆ ನಡೆದ ತಾರಾಲಯ ಕ್ವಿಝ್ ನಲ್ಲಿ ತಾಲೂಕಿನಲ್ಲಿ ದ್ವಿತೀಯ ಸ್ಥಾನ ಪಡೆದು, ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಫಲಿತಾಂಶದ ನಿರೀಕ್ಷೆಯಲ್ಲಿದ್ದಾಳೆ.
ಕೆಪಿಎಸ್ ಕೆಯ್ಯೂರು ಪ್ರಾಂಶುಪಾಲ ಇಸ್ಮಾಯಿಲ್ ಪಿ, ಎಸ್ ಡಿಎಂಸಿ ಕಾರ್ಯಾಧ್ಯಕ್ಷ ಎ.ಕೆ ಜಯರಾಮ ರೈ ಕೆಯ್ಯೂರು, ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆ ಎಸ್, ಪ್ರಾಥಮಿಕ ಶಾಲಾ ಮುಖ್ಯಗುರು ಬಾಬು ಎಂ, ಉಪನ್ಯಾಸಕರು, ಶಿಕ್ಷಕರು ಹಾಗೂ ಎಸ್ ಡಿ ಎಂ ಸಿ ಸದಸ್ಯರು ಅಭಿನಂದನೆ ಸಲ್ಲಿಸಿದರು. ಈಕೆಗೆ ನಿವೃತ್ತ ಪ್ರೌಢಶಾಲಾ ಶಿಕ್ಷಕ, ಯುವ ಸಂಸತ್ ತರಬೇತುದಾರ ಗುಡ್ಡಪ್ಪ ಬಲ್ಯ ತರಬೇತಿ ನೀಡಿದ್ದರು. ಸಮಾಜ ವಿಜ್ಞಾನ ಶಿಕ್ಷಕರಾದ ಮೋಲಿ ವಿಲ್ಮಾ ಪಿಂಟೊ ಮಾರ್ಗದರ್ಶನ ಮಾಡಿದರು. ಉಳಿದ ಶಿಕ್ಷಕರು ಸಹಕರಿಸಿದರು.
ಕಲಿಕೆಯಲ್ಲೂ ಅಗ್ರಸ್ಥಾನದಲ್ಲಿರುವ ಅಸ್ಮಿತಾ ಎಸ್ ತಿಂಗಳಾಡಿ ಸಮೀಪದ ಪಾಪೆಜಾಲು ನಿವಾಸಿ ಅವಿನಾಶ್ ಹಾಗೂ ಸುಜಾತ ದಂಪತಿಯ ಪುತ್ರಿ.