ಬೆಳ್ಳಿಹಬ್ಬದ ಸಂಭ್ರಮದಲ್ಲಿ ಕಬಕ ಮಹಾದೇವಿ ಯುವಕ ಮಂಡಲ – ಸೆ.29: ರಜತ ಸ್ಮರಣೆಯ ಕಟ್ಟಡ ಉದ್ಘಾಟನೆ

0

ಕಬಕ: ಯುವಶಕ್ತಿಯ ಯಶಸ್ವೀ ಸಂಘಟನೆಗೆ ಕ್ರೀಡೆ, ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳು ಪ್ರೇರಣಾದಾಯಿಯಾಗಿರುತ್ತವೆ ಎಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟ ಯುವಕ ಯುವತಿ ಮಂಡಲಗಳ ಪೈಕಿ ಕಬಕ ಶ್ರೀ ಮಹಾದೇವಿ ಯುವಕಮಂಡಲ ಬಹಳ ವಿಶೇಷ ಸ್ಥಾನದಲ್ಲಿ ನಿಲ್ಲುತ್ತದೆ‌.

ಇಪ್ಪತ್ತೈದು ವರುಷಗಳ ಹಿಂದೆ ಶ್ರೀ ಮಹಾದೇವಿ ದೇವಸ್ಥಾನದಲ್ಲಿ ಶ್ರೀ ಮಹಾದೇವಿಯ ಆಶೀರ್ವಾದದಿಂದ ಕಬಕ ಹಾಗೂ ಕುಳ ಗ್ರಾಮದ ಉತ್ಸಾಹಿ ಯುವಕರ ತಂಡದಿಂದ ಸಂಘಟನೆ, ಕ್ರೀಡೆ ಮತ್ತು ಸಾಮಾಜಿಕ ಕಾರ್ಯಗಳ ಧ್ಯೇಯದೊಂದಿಗೆ ಹುಟ್ಟಿಕೊಂಡ ಸಂಸ್ಥೆಯೇ ಶ್ರೀ ಮಹಾದೇವಿ ಯುವಕ ಮಂಡಲ.


ದೇಗುಲದ ವಠಾರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಯ ಮೂಲಕ ಸಂಸ್ಕಾರ ಪಡೆಯುತ್ತಾ ಬೆಳೆದ ಸಚ್ಚಾರಿತ್ರ್ಯದ ಯುವ ಪಡೆ ಸಮಾಜದ ವಿವಿಧ ಸೇವಾಕಾರ್ಯಗಳಲ್ಲಿ ಕೈ ಜೋಡಿಸುತ್ತಾ ಸಮಾಜದ ವಿಶ್ವಾಸಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ ಸಮಾಜದಿಂದಲೇ ಗುರುತಿಸಲ್ಪಡುವಷ್ಟರ ಮಟ್ಟಿಗೆ ಬೆಳೆಯುತ್ತಿದೆ. 1999ನೇ ಇಸವಿಯಲ್ಲಿ ನೆಹರು ಯುವ ಕೇಂದ್ರ ಮಂಗಳೂರು ಇದರ ಅಡಿಯಲ್ಲಿ ಸಂಸ್ಥೆಯನ್ನು ನೋಂದಣಿ ಮಾಡಿಸಿ ‘ಶ್ರೀ ಮಹಾದೇವಿ ಯುವಕ ಮಂಡಲ (ರಿ) ಕಬಕ’ ಎಂದು ನಾಮಾಂಕಿತಗೊಳಿಸಲಾಯಿತು. ಪ್ರತಿವರ್ಷ ಹೊಸ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನುಅವಿರೋಧವಾಗಿ ಆಯ್ಕೆ ಮಾಡುತ್ತಾ ಶಿಸ್ತುಬದ್ಧ ಸಂಘಟನೆಯಾಗಿ ಶ್ರೀ ಮಹಾದೇವಿ ಯುವಕ ಮಂಡಲವು ಬೆಳೆಯುತ್ತಿದೆ.


ಸಮಾಜಮುಖಿ ಸೇವಾ ಚಟುವಟಿಕೆಗಳು
ಕಳೆದ 25 ವರ್ಷಗಳಲ್ಲಿ ಅನೇಕ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಾ ಬಂದಿದೆ. ನಾಯಕತ್ವ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಅಶಕ್ತರಿಗೆ ಸಹಾಯಧನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ, ಸಾಧಕರನ್ನು ಗೌರವಿಸುತ್ತಾ ಬಂದಿದೆ. ರಾಜ್ಯ ಮಟ್ಟದ ಯುವಜನ ಮೇಳಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದೆ. ರಾಜ್ಯ ಯುವಜನ ಒಕ್ಕೂಟ ಕೊಡಮಾಡುವ ‘ರಾಜ್ಯ ಯುವ ಪ್ರಶಸ್ತಿ’ ಹಾಗೂ ತಾಲೂಕು ಯುವಜನ ಮೇಳದಲ್ಲಿ ‘ಸ್ವರ್ಣ ದೀಪ’ ಪ್ರಶಸ್ತಿ ಪಡೆದಿರುವುದು ಯುವಕ ಮಂಡಲ ಸಾಧನೆಯ ಹೆಗ್ಗುರುತಾಗಿದೆ.


ಶ್ರೀ ಮಹಾದೇವಿ ದೇವಸ್ಥಾನ ಹಾಗೂ ಸ್ಥಳೀಯ ಶ್ರದ್ಧಾ ಕೇಂದ್ರಗಳ ಧಾರ್ಮಿಕ ಕಾರ್ಯಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಶ್ರಮ ಸೇವೆಯಲ್ಲಿ ಭಾಗವಹಿಸುತ್ತಾ ಬರುತ್ತಿದೆ. ಅಲ್ಲದೆ ಸಾಮೂಹಿಕ ಶನೀಶ್ವರ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿ ಸಮಾಜದ ಸಂಘಟನೆಗೆ ತನ್ನದೇ ಆದ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತಿದೆ. ನವರಾತ್ರಿ ಉತ್ಸವ, ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದೆ. ಪುತ್ತೂರು ಸಾರ್ವಜನಿಕ ಗಣೇಶೋತ್ಸವದ ಶೋಭಾಯಾತ್ರೆಯ ಸಂದರ್ಭದಲ್ಲಿ ವಿಭಿನ್ನ ರೀತಿಯ ಸ್ಥಬ್ಧಚಿತ್ರಗಳನ್ನು ಪ್ರದರ್ಶಿಸಿ ಅಪಾರ ಜನಪ್ರಶಂಸೆ ಪಡೆಯುತ್ತಿದೆ. ಇವೆಲ್ಲದರ ಜೊತೆಗೆ ರಾಷ್ಟ್ರೀಯ ಹಬ್ಬಗಳಂದು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಬೇರೆ ಬೇರೆ ಸಂದರ್ಭದಲ್ಲಿ ಜಿಲ್ಲೆ, ರಾಜ್ಯ, ಮಟ್ಟದ ಕ್ರೀಡೆಗಳನ್ನು ಸಂಘಟಿಸಿ ಯಶಸ್ವಿ ಕ್ರೀಡಾ ಸಂಘಟನೆಯಾಗಿಯು ಗುರುತಿಸಿಕೊಂಡಿದೆ. ಸಂಘದ ಸದಸ್ಯರ ಕಬಡ್ಡಿ ತಂಡವು ದ.ಕ. ಜಿಲ್ಲೆಯ ಅತ್ಯುತ್ತಮ ಕಬಡ್ಡಿ ತಂಡವಾಗಿ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ.


25 ವರುಷಗಳನ್ನು ಪೂರೈಸಿರುವ ಶ್ರೀ ಮಹಾದೇವಿ ಯುವಕ ಮಂಡಲ ಬೆಳ್ಳಿಹಬ್ಬದ ಸಂದರ್ಭದಲ್ಲಿ ಸಂಘದ ಕಾರ್ಯಚಟುವಟಿಕೆಗಳು ವಿಸ್ತಾರಗೊಂಡಿದ್ದು ಸಂಘಕ್ಕೆ ಸ್ವಂತ ಕಟ್ಟಡದ ಅವಶ್ಯಕತೆಯನ್ನು ಮನಗಂಡು ಸುಮಾರು 20 ಲಕ್ಷ ರೂ. ಗಳ ಅಂದಾಜು ವೆಚ್ಚದ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಸಂಘಟನೆ ಮುಂದಾಗಿ ಕಾರ್ಯಾನುಷ್ಠಾನ ರೂಪಿಸಿ ಇದೀಗ ಕಟ್ಟಡದ ಉದ್ಘಾಟನಾ ಶುಭ ಸಂದರ್ಭದಲ್ಲಿದೆ. ಸೆ.29ರಂದು ಅದ್ಧೂರಿ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here