ಪುತ್ತೂರು: ರಾಜಕೀಯ ವ್ಯಕ್ತಿಗಳು, ರಾಜಕೀಯ ಪಕ್ಷಗಳು ಅವರ ಲಾಭಕ್ಕೋಸ್ಕರ ಯುವಕರನ್ನು ಬಳಸಿಕೊಳ್ಳುತ್ತಾರೆ, ಅವರಿಂದ ಲಾಭ ಪಡೆದುಕೊಂಡ ಬಳಿಕ ಅವರನ್ನು ಬಿಟ್ಟು ಬಿಡ್ತಾರೆ. ಬಳಿಕ ನಿಮ್ಮ ಮಕ್ಕಳು ಜೀವನಪರ್ಯಂತ ಕೇಸು, ಕೋರ್ಟು ಅಲೆದಾಡುವಂತಾಗುತ್ತದೆ. ಈ ರೀತಿ ಆಗದಂತೆ ನಿಮ್ಮ ಮಕ್ಕಳಿಗೆ ಜಾಗೃತೆವಹಿಸಿಕೊಳ್ಳಿ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ಈಶ್ವರಮಂಗಲ ಕುಕ್ಕಾಜೆ ಮದ್ರಸದಲ್ಲಿ ನಡೆದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕರು ನಮ್ಮ ಮಕ್ಕಳನ್ನು ನಮಗೆ ಗೊತ್ತಿಲ್ಲದಂತೆ ಅವರನ್ನು ರಾಜಕೀಯದವರು ಕೆಟ್ಟ ಕಾರ್ಯಗಳಿಗೆ ಬಳಸುತ್ತಾರೆ, ಯುವ ಪ್ರಾಯದಲ್ಲಿ ತಾವು ಮಾಡುತ್ತಿರುವುದು ತಪ್ಪು ಕೆಲಸ ಎಂಬ ಅರಿವು ಅವರಿಗೆ ಗೊತ್ತಿರುವುದಿಲ್ಲ. ಒಂದು ಹಂತದ ಪ್ರಾಯಕ್ಕೆ ಬಂದಾಗ ಅವರಿಗೆ ನಾವು ಆವತ್ತು ಮಾಡಿದ್ದು ತಪ್ಪು, ಮಾಡಬಾರದಿತ್ತು ಎಂಬ ಅರಿವಾಗುತ್ತದೆ. ಆಗ ಕಾಲ ಮಿಂಚಿ ಹೋಗಿರುತ್ತದೆ. ಮಕ್ಕಳಿಗೆ ಪೋಷಕರು ಕೆಟ್ಟವರ ಸಂಘ ಮತ್ತು ದುಷ್ಟರ ಸಹವಾಸ ಮಾಡದಂತೆ ತಿಳಿಹೇಳಬೇಕು ಎಂದರು.
ಹಿಂದಿನ ಕಾಲದಲ್ಲಿ ಕೋಮು ಸೌಹಾರ್ಧತೆ ಎಲ್ಲಾ ಕಡೆ ಇತ್ತು. ಆದರೆ ಈಗ ಸಣ್ಣ ವಿಚಾರಕ್ಕೂ ಕೋಮುಗಳ ನಡುವೆ ಸಂಘರ್ಷ ಉಂಟಾಗುತ್ತದೆ ಇದಕ್ಕೆ ಕಾರಣ ರಾಜಕೀಯವಾಗಿದೆ. ಅವರ ಲಾಭಕ್ಕೋಸ್ಕರ ನಿಮ್ಮ ಮಕ್ಕಳನ್ನು ಬಳಸಿಕೊಳ್ಳುತ್ತಾರೆ, ನಿಮ್ಮ ಮಕ್ಕಳು ಕೇಸು ಮಾಡಿಕೊಂಡು ಜೈಲಿಗೆ ಹೋಗುತ್ತಾರೆ ಮತ್ತೆ ಜೀವನ ಪರ್ಯಂತ ಒಂದಷ್ಟು ಜನರ ವಿರೋಧ ಕಟ್ಟಿಕೊಂಡು ಬದುಕಬೇಕಾಗುತ್ತದೆ. ಇದು ಅತ್ಯಂತ ಅಪಾಯಕಾರಿಯಾಗಿದೆ. ಪರಸ್ಪರ ಸೌಹಾರ್ಧತೆಯಿಂದ ಬಾಳುವ ಬಗ್ಗೆ ಮಕ್ಕಳಿಗೆ ತಿಳಿಹೇಳಬೇಕು ಎಂದು ಹೇಳಿದರು.
ಯುವಕರಿಗೆ ಉದ್ಯೋಗ ಕೊಡಿಸಿ
ನಿಮ್ಮ ಮಕ್ಕಳು ವಿದ್ಯಾವಂತರಾಗಿ ಒಂದು ಒಳ್ಳೆಯ ಉದ್ಯೋಗ ಸಿಗುವ ಹಾಗೆ ಮಾಡಿ, ಉದ್ಯೋಗ ಇಲ್ಲದೇ ಇದ್ದರೆ ಮುಂದಿನ ದಿನಗಳಲ್ಲಿ ಬದುಕಲು ಕಷ್ಟ. ಯಾರ ತಂಟೆಗೂ ನಿಮ್ಮ ಮಕ್ಕಳು ಹೋಗದಂತೆ, ಗಲಾಟೆ ಪ್ರಕರಣದಲ್ಲಿ ಭಾಗಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತೀ ಧರ್ಮದವರ ಪೋಷಕರ ಜವಾಬ್ದಾರಿಯಾಗಿದೆ. ನಾವು ಸಾಕಿ ಬೆಳೆಸಿದ ಮಕ್ಕಳು ನಮ್ಮನ್ನು ಸಲಹುವ ಕಾಲದಲ್ಲಿ ಜೈಲಲ್ಲಿ ಇರುವಂತೆ ಮಾಡಿಕೊಳ್ಳಬೇಡಿ. ಮಕ್ಕಳಿಗೆ ಸಂಸ್ಕಾರ, ಶಿಕ್ಷಣ ಮತ್ತು ಉದ್ಯೋಗವನ್ನು ಕೊಡಿಸಿ ಎಂದು ಶಾಸಕ ಅಶೋಕ್ ರೈ ಮನವಿ ಮಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಅಕ್ರಮ-ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ನೆಟ್ಟಣಿಗೆ ಮುಡ್ನೂರು ಗ್ರಾಪಂ ಮಾಜಿ ಅಧ್ಯಕ್ಷ ರಮೇಶ್ ರೈ ಸಾಂತ್ಯ, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.