ಕೇವಲ 7 ಗಂಟೆಯಲ್ಲಿ ಒಂದೇ ವಾಟ್ಸಾಪ್ ಗ್ರೂಪ್ ನಿಂದ ಸಂಗ್ರಹ
ಪುತ್ತೂರು: ತನ್ನ ಜೀವದ ಹಂಗುತೊರೆದು ನೂರಾರು ಜೀವಗಳನ್ನು ರಕ್ಷಿಸಿದ, ಜಲ ಅವಘಡದಲ್ಲಿ ಮೃತಪಟ್ಟ ಮೃತದೇಹಗಳನ್ನು ನೀರಿನಿಂದ ಮೇಲೆತ್ತಿದ ಅಪಧ್ಬಾಂದವ, ಮುಳುಗುತಜ್ಞ ಈಶ್ವರ್ ಮಲ್ಪೆಯವರಿಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ರೂ.1 ಲಕ್ಷದ ಚೆಕ್ ನ್ನು ಅರುಣ್ ಕುಮಾರ್ ಪುತ್ತಿಲ ಅವರು ಈಶ್ವರ್ ಮಲ್ಪೆ ಮತ್ತು ಗೀತಾ ದಂಪತಿ ಅವರ ಮಲ್ಪೆಯ ಮನೆಯಲ್ಲಿ ವಿತರಿಸಿದರು.
ತನ್ನ ಮಕ್ಕಳು ವಿಶೇಷ ಚೇತನರಾಗಿ ತೀವ್ರ ಅನಾರೋಗ್ಯದಿಂದಿದ್ದರೂ ಮನೆಯ ಪರಿಸ್ಥಿತಿಯನ್ನು ಲೆಕ್ಕಿಸದೆ ಪ್ರಾಕೃತಿಕ ವಿಕೋಪದ ಕಠಿಣ ಸಂದರ್ಭದಲ್ಲಿ ಜೀವದ ಹಂಗು ತೊರೆದು ಉಚಿತವಾಗಿ ರಕ್ಷಣೆಗೆ ಧಾವಿಸುವ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರ ಸೇವೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಎಂದ ಅರುಣ್ ಕುಮಾರ್ ಪುತ್ತಿಲ ಭಾವುಕರಾಗಿ ಮುಂದೆಯೂ ನಾವು ನಿಮ್ಮೊಂದಿಗಿದ್ದೇವೆ ಎಂದು ಧೈರ್ಯ ತುಂಬಿದರು.
ಪ್ರತಿಯೊಬ್ವರು ಈಶ್ವರ್ ಮಲ್ಪೆಯವರ ಬೆಂಬಲಕ್ಕೆ ನಿಲ್ಲಬೇಕು:
ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತದ ರಕ್ಷಣಾ ಕಾರ್ಯದಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತದ ಮನವಿಯ ಮೇರೆಗೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ನಾಪತ್ತೆಯಾಗಿದ್ದ ಚಾಲಕ ಅರ್ಜುನ್ ಲಾರಿಯನ್ನು ಗುರುತಿಸುವಲ್ಲಿಯೂ ಈಶ್ವರ್ ಮಲ್ಪೆ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಕೊನೆಗೆ ಅವರನ್ನು ಅಧಿಕಾರಿಗಳು ಮತ್ತು ಸರ್ಕಾರ ಕಡೆಗಣನೆ ಮಾಡಿರುವುದು ಸಮಾಜದಲ್ಲಿ ತೀವ್ರ ಬೇಸರವನ್ನು ಉಂಟು ಮಾಡಿದೆ. ಮನೆಯಲ್ಲಿ ಬಡತನವಿದ್ದರೂ ಮಾನವೀಯತೆಯಲ್ಲಿ ಅಗರ್ಭ ಶ್ರೀಮಂತರಾಗಿರುವ ಈಶ್ವರ್ ಮಲ್ಪೆಯವರ ಸೇವೆ ಇನ್ನಷ್ಟು ಬೇಕೆಂಬ ಹಂಬಲದಿಂದ ಪ್ರತಿಯೊಬ್ಬನೂ ಈಶ್ವರ್ ಮಲ್ಪೆಯವರಿಗೆ ಬೆಂಬಲವಾಗಿ ನಿಲ್ಲಬೇಕೆಂದು ಈ ಸಂದರ್ಭದಲ್ಲಿ ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಈಶ್ವರ್ ಮಲ್ಪೆ ತುರ್ತು ಸೇವಾ ಘಟಕ’ ಸ್ಥಾಪಿಸಲು ಆಗ್ರಹ:
ಈಶ್ವರ್ ಮಲ್ಪೆಯವರಿಗೆ ಕೇವಲ ಶ್ಲಾಘನೆ ಸಾಕಾಗುವುದಿಲ್ಲ. ಸುಮಾರು 200 ರಷ್ಟು ಜೀವಗಳನ್ನು ನೀರಿನಿಂದ ಮೇಲೆತ್ತಿದ ಈ ಸಾಧಕನ ಹೆಸರಲ್ಲಿ ಸರ್ಕಾರ ‘ಅಪಧ್ಬಾಂದವ ಈಶ್ವರ್ ಮಲ್ಪೆ ತುರ್ತು ಸೇವಾ ಘಟಕ’ ಸ್ಥಾಪಿಸಿ ಅದರ ಮೂಲಕ ರಾಜ್ಯದೆಲ್ಲೆಡೆ ತರಬೇತಿ ಪಡೆದ ಒಂದು ತುರ್ತು ಸೇವಾ ತಂಡ ರಚನೆಯಾಗುವಂತೆ ಸರ್ಕಾರ ಇವರಿಗೆ ಸವಲತ್ತು ನೀಡಬೇಕು ಮತ್ತು ಈಶ್ವರ್ ಮಲ್ಪೆಯ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾಡುವಂತೆ ಅರುಣ್ ಕುಮಾರ್ ಪುತ್ತಿಲ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಉಡುಪಿ ಮೀನುಗಾರರ ಪ್ರಕೋಷ್ಠದ ಸಂಚಾಲಕರಾದ ಮಂಜು ಕೊಳ ಮಲ್ಪೆ,ಉಡುಪಿ ಹಿಂದೂ ಯುವಸೇನೆ ನಗರ ಅಧ್ಯಕ್ಷರಾದ ಸುನೀಲ್ ನೇಜಾರು, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಂದಾರು, ಯುವ ಮೋರ್ಚಾ ಉಪಾಧ್ಯಕ್ಷ ಧನುಶ್ ಮೊದಲಾದವರು ಉಪಸ್ಥಿತರಿದ್ದರು.
ಕೇವಲ 7 ಗಂಟೆಯಲ್ಲಿ ಒಂದೇ ವಾಟ್ಸಾಪ್ ಗ್ರೂಪ್ ನಿಂದ ಸಂಗ್ರಹ :
ಮಾಧ್ಯಮಗಳ ವರದಿಗಳನ್ನು ವೀಕ್ಷಿಸಿ ಈಶ್ವರ್ ಮಲ್ಪೆಯವರಿಗೆ ಕೈಲಾದ ಕೊಡುಗೆ ನೀಡಬೇಕೆಂದು ನಿರ್ಧರಿಸಿದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಪ್ರಮುಖರು ‘ಪುತ್ತಿಲ ಬ್ರಿಗೇಡ್’ ಎಂಬ ವಾಟ್ಸಾಪ್ ಗ್ರೂಪ್ ನಲ್ಲಿ ಹಾಕಿದ ಒಂದು ಸಂದೇಶಕ್ಕೆ ಕೇವಲ 7 ಗಂಟೆಯಲ್ಲಿ ಒಂದು ಲಕ್ಷ ರೂಪಾಯಿ ಸಂಗ್ರಹವಾಗಿದೆ. ಇದು ಈಶ್ವರ್ ಮಲ್ಪೆಯ ಮೇಲೆ ಜನರಿಗಿರುವ ಅಭಿಮಾನವನ್ನು ತೋರಿಸುತ್ತದೆ ಎಂದು ಸೇವಾ ಟ್ರಸ್ಟ್ ನ ಪ್ರಮುಖರು ತಿಳಿಸಿದ್ದಾರೆ.