ನಿಡ್ಪಳ್ಳಿ: ಐತಿಹಾಸಿಕ ಸ್ಥಳವಾಗಿರುವ ಕೆಂಪು ಕೇಪುಲಾಜೆ ನಾಗಬಿರ್ಮರ, ಬ್ರಹ್ಮರಗುಂಡ ಎಂಬಲ್ಲಿ ಮೊಗೇರ್ಕಳ ದೈವಗಳ ಮಂಜ ಸೇವೆಯ ಕಾರ್ಯಕ್ರಮವು ಸೆ.29ರಂದು ನಡೆಯಿತು.
ಬೋರ್ಕರ್ ವಂಶಸ್ಥರಿಗೆ ಸೇರಿದ ಜಾಗದಲ್ಲಿ ನಿಂತು ಹೋಗಿದ್ದ ಮಂಜಸೇವೆಯು ಇತ್ತೀಚೆಗೆ ನಡೆದ ಪ್ರಶ್ನಾ ಚಿಂತನೆಯಲ್ಲಿ ಮುಂದುವರಿಸಬೇಕೆಂದು ಕಂಡುಬಂದಿತ್ತು. ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಸಾಂಸ್ಕೃತಿಕ ಅಧ್ಯಯನ ಟ್ರಸ್ಟ್ ಆಲಂಕಾರು ( ಆರು ಜಿಲ್ಲೆಗಳ ಸಂಯುಕ್ತ ವೇದಿಕೆ) ಇದರ ನೇತೃತ್ವದಲ್ಲಿ ಸರ್ವ ಮೊಗೇರ ಬಾಂಧವರ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆದು ಬಂತು. ಮೊದಲಾಗಿ ಮೊಗೇರ ದೈವಗಳ ಆರಾಧ್ಯ ದೇವರಾದ ನಾಗಬಿರ್ಮರಿಗೆ ತಂಬಿಲ ಸೇವೆ ನಂತರ ಮೊಗೇರ ದೈವಗಳಿಗೆ ಮಂಜಸೇವೆಯನ್ನು ನಿಡ್ಪಳ್ಳಿಯ ಗುರಿಕಾರರ ನೇತೃತ್ವದಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮೊಗೇರ ಸಂಘದ ಪುನರ್ ರಚನೆಯ ಕಾರ್ಯಕ್ರಮ ಅ.6 ರಂದು ಪುತ್ತೂರಿನಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ದಕ್ಷಿಣ ಕನ್ನಡ, ಕೊಡಗು, ಕಾಸರಗೋಡು, ಹಾಸನ,ಚಿಕ್ಕಮಗಳೂರು, ಸೇರಿದಂತೆ ಕರ್ನಾಟಕ ಹಾಗೂ ಕೇರಳದ ಎರಡು ಸಾವಿರಕ್ಕೂ ಹೆಚ್ಚಿನ ಭಕ್ತಾದಿಗಳು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅನ್ನದಾನದ ವ್ಯವಸ್ಥೆಯನ್ನು ನಿಡ್ಪಳ್ಳಿ ಗ್ರಾಮದ ಮೊಗೇರ ಬಾಂಧವರು ಹಾಗೂ ಪಾನಕದ ವ್ಯವಸ್ಥೆಯನ್ನು ಶ್ರೀ ಮಹಾಲಿಂಗೇಶ್ವರ ಬ್ರಹ್ಮ ಮೊಗೇರ ಆರಾಧನಾ ಟ್ರಸ್ಟ್, ವತಿಯಿಂದ , ಹಾಗೂ ಬೆಳಗಿನ ಉಪಾಹಾರವನ್ನು ರಾಧಕೃಷ್ಣ ಬೋರ್ಕರ್ ಹಾಗೂ ಕರುಣಾಕರ ಅಜ್ಜಾವರ ಮಾಡಿದರು. ಬೆಮ್ಮರಗುಂಡ ಬೋರ್ಕರ್ ಮನೆತನದ ದಿವಾಕರ್ ಬೋರ್ಕರ್, ರಾಧಾಕೃಷ್ಣ ಬೋರ್ಕರ್, ವೆಂಕಟರಮಣ ಬೋರ್ಕರ್ ಹಾಗೂ ವಿಜಯ್ ವಿಕ್ರಂ ಗಾಂಧಿಪೇಟೆ, ಕರುಣಾಕರ ಅಜ್ಜಾವರ, ಶೇಖರ್ ಮಾಡಾವು, ಇವರ ಉಸ್ತುವಾರಿಯಲ್ಲಿ ವಿವಿಧ ರಾಜ್ಯ, ಜಿಲ್ಲಾ, ತಾಲೂಕು ಮೊಗೇರ ಸಂಘಟನೆಗಳ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಿತು.