ವಿಟ್ಲ: ದ.ಕ. ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನೂತನ ಸದಸ್ಯನ ಆಯ್ಕೆಗಾಗಿ ಅ.21ರಂದು ನಡೆಯಲಿರುವ ಉಪಚುನಾವಣೆಗೆ ಈಗಾಗಲೇ ಬಿಜೆಪಿ ಅಭ್ಯರ್ಥಿಯ ಘೋಷಣೆಯಾಗಿದೆ. ಈ ಮಧ್ಯೆ ಕಾಂಗ್ರೆಸ್ ಪಕ್ಷದಿಂದ ಹಲವರ ಹೆಸರು ಕೇಳಿಬರುತ್ತಿದೆಯಾದರೂ ಮಾಜಿ ಸಚಿವ ರಮಾನಾಥ ರೈರವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ದ.ಕ.ಜಿಲ್ಲೆಯ ಯುವ ನಾಯಕನಾಗಿರುವ ಜಿ.ಪಂ. ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆರವರ ಹೆಸರು ಮುಂಚೂಣಿಯಲ್ಲಿರುವುದಾಗಿ ಕಾಂಗ್ರೆಸ್‌ನ ಅಂತರಿಕ ವಲಯದಿಂದ ಮಾಹಿತಿ ಲಭ್ಯವಾಗಿದೆ. ಉದ್ಯಮಿ, ಸಿನಿಮಾ ನಿರ್ಮಾಪಕ ಕೋಡಿಂಬಾಡಿಯ ಹರಿಪ್ರಸಾದ್ ರೈ ಅವರ ಹೆಸರೂ ಕೇಳಿ ಬರುತ್ತಿದೆ.
ಕಾಂಗ್ರೆಸ್‌ನಿಂದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ಬಿ.ರಾಜು ಕಾರ್ಕಳ, ರಾಜು ಪೂಜಾರಿ, ಉದಯ ಕುಮಾರ್ ಶೆಟ್ಟಿ ಮುನಿಯಾಲು, ಭುಜಂಗ ಶೆಟ್ಟಿ, ಹರಿಪ್ರಸಾದ್ ರೈ ಕೋಡಿಂಬಾಡಿ ಮಠಂತಬೆಟ್ಟುರವರ ಹೆಸರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿದೆಯಾದರೂ, ದ.ಕ.ಜಿಲ್ಲೆಯಿಂದ ತುಂಬೆ ಚಂದ್ರ ಪ್ರಕಾಶ್ ಶೆಟ್ಟಿ ಅವರ ಹೆಸರನ್ನು ಅಂತಿಮಗೊಳಿಸಿ ಪಕ್ಷದ ನಾಯಕರು ಹೈಕಮಾಂಡ್ ಮುಂದಿಟ್ಟಿರುವುದರಿಂದ ಅವರ ಹೆಸರನ್ನು ಅಂತಿಮಗೊಳಿಸಿ ಹೈಕಮಾಂಡ್ ಅದೇಶ ಹೊರಡಿಸುವ ಸಾಧ್ಯತೆ ಇದೆ ಎಂಬ ಅಭಿಪ್ರಾಯಗಳು ಪಕ್ಷದ ಮೂಲಗಳಿಂದ ವ್ಯಕ್ತವಾಗಿದೆ. ಎರಡು ಬಾರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿರುವ ಚಂದ್ರಪ್ರಕಾಶ್ ಶೆಟ್ಟಿ ತುಂಬೆಯವರು 1994 ರಿಂದಲೇ ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿರುವ ನಾಯಕರಾಗಿದ್ದಾರೆ.
ಹರಿಪ್ರಸಾದ್ ರೈ ಹೆಸರೂ ಚಾಲ್ತಿಯಲ್ಲಿ: ಮೂಲತಃ ಕೋಡಿಂಬಾಡಿಯ ಮಠಂತಬೆಟ್ಟು ನಿವಾಸಿಯಾಗಿದ್ದು, ಪ್ರಸ್ತುತ ಉಡುಪಿಯಲ್ಲಿ ವಾಸವಾಗಿರುವ ಉದ್ಯಮಿ ಹರಿಪ್ರಸಾದ್ ರೈ ಅವರ ಹೆಸರೂ ವಿಧಾನ ಪರಿಷತ್ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿತನಕ್ಕೆ ಕೇಳಿ ಬರುತ್ತಿದೆ.
ಹೆಚ್.ಪಿ.ಆರ್.ಫೌಂಡೇಶನ್ ಮುಖ್ಯಸ್ಥರಾಗಿರುವ ಹರಿಪ್ರಸಾದ್ ರೈ ಅವರು ಪುತ್ತೂರು, ಮಂಗಳೂರು, ಸೊರಬ ಮತ್ತು ಉಡುಪಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ.ರಾಜಕೀಯ ಮತ್ತು ಶೈಕ್ಷಣಿಕ ಕ್ಷೇತ್ರದ ಜತೆಗೆ ಸಾಮಾಜಿಕವಾಗಿಯೂ ತೊಡಗಿಸಿಕೊಂಡಿರುವ ಹರಿಪ್ರಸಾದ್ ರೈ ಅವರು ಲಯನ್ಸ್ ಜಿಲ್ಲೆ 317ಸಿಯಲ್ಲಿ ಪ್ರಾಂತೀಯ ಅಧ್ಯಕ್ಷರಾಗಿ, ಉಡುಪಿ ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷರಾಗಿ, ಕಾಂಗ್ರೆಸ್ ಪಕ್ಷದ ಬೂತ್ ಅಧ್ಯಕ್ಷ ಸ್ಥಾನದಿಂದ ಜಿಲ್ಲಾ ಉಪಾಧ್ಯಕ್ಷ ಸ್ಥಾನದವರೆಗೆ ಜವಾಬ್ದಾರಿ ನಿರ್ವಹಿಸಿದ್ದಾರೆ.
ಹರಿಪ್ರಸಾದ್ ರೈ ಅವರು ಕಾಲೇಜು ವಿದ್ಯಾಭ್ಯಾಸದ ಸಮಯದಲ್ಲಿ ಪುತ್ತೂರು ಎನ್.ಎಸ್.ಯು.ಐ. ಘಟಕದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.ರಾಜ್ಯಪಾಲರು ಅಧ್ಯಕ್ಷರಾಗಿರುವ ರೆಡ್ ಕ್ರಾಸ್ ಉಡುಪಿ ಘಟಕದ ಪ್ರತಿನಿಧಿಯಾಗಿರುವ ಹರಿಪ್ರಸಾದ್ ರೈಯವರು ಉಡುಪಿ ಪ್ರಗತಿ ಸಹಕಾರಿ ಕೋ-ಅಪರೇಟಿವ್ ಸೊಸೈಟಿಯ ನಿರ್ದೇಶಕರಾಗಿ, ಭಾರತ ಸರಕಾರದ ಜನಸಂಖ್ಯಾ ಸ್ಥಿರತಾ ಕೋಶದ ಸದಸ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಬ್ರಹ್ಮಾವರದ ಫಾರ್ಚುನ್ ಆರೋಗ್ಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿಯೂ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ.