ಸವಣೂರು: ಸವಣೂರಿನ ವಿದ್ಯಾರಶ್ಮಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 155ನೆ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದ ಸಂಚಾಲಕ ಸಹಕಾರಿ ರತ್ನ ಸವಣೂರು ಸೀತಾರಾಮ ರೈ ಅವರು ಮಾತನಾಡಿ ಇತಿಹಾಸವನ್ನು ನಾವು ನೆನಪಿಡಬೇಕಿದೆ ಎಂದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೀವನವನ್ನೇ ತ್ಯಾಗಮಾಡಿದ ಗಾಂಧೀಜಿಯವರನ್ನು ಇಂದು ದೂಷಿಸುವ ಕೆಲಸವೂ ಕೆಲವರಿಂದ ಆಗುತ್ತಿದೆ. ಇದು ಸರಿಯಲ್ಲ, ಬದಲಾಗಿ ನಾವು ಗಾಂಧೀಜಿ ಮತ್ತು ಇತರ ನಾಯಕರು ಮಾಡಿದ ಒಳ್ಳೆಯ ಕಾರ್ಯಗಳನ್ನು ನೆನಪಿಟ್ಟು ಮುಂದೆ ಸಾಗಬೇಕು ಎಂದರು.
ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ, ವಿದ್ಯಾರಶ್ಮಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ ಮತ್ತು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ ಉಪಸ್ಥಿತರಿದ್ದರು.
ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಶ್ರೀರಕ್ಷಾ ಅವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಶಾಲಾ ಪ್ರಾರ್ಥನಾ ತಂಡದಿಂದ ಪ್ರಾರ್ಥನೆ ಆದ ಬಳಿಕ 9ನೆ ತರಗತಿಯ ಆಶಿಕ್ ಇಬ್ರಾಹಿಂ ಅವರು ಸಂವಿಧಾನದ ಪೀಠಿಕೆಯನ್ನು ವಾಚಿಸಿದರು. ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನಿಯಾದ 10ನೆ ತರಗತಿಯ ವಿಘ್ನೇಶ್ ಶೆಟ್ಟಿ ಅವರನ್ನು ಇದೇ ಸಂದರ್ಭದಲ್ಲಿ ಸಂಚಾಲಕರು ಅಭಿನಂದಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ರಂಜಿತಾ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿನಿಯರಿಂದ ನಡೆದ ಭಜನಾ ಕಾರ್ಯಕ್ರಮದ ಬಳಿಕ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಯಶಸ್ವಿ ರೈ ಅವರು ವಂದನಾರ್ಪಣೆಗೈದರು.