ಕಾಂತಾವರ ಕನ್ನಡ ಸಂಘ ʻಮಹೋಪಾಧ್ಯಾಯ ಪ್ರಶಸ್ತಿʼ- ಸಾಹಿತ್ಯ ವಲಯದ ಸಂಪನ್ಮೂಲ ವ್ಯಕ್ತಿ ಡಾ. ವರದರಾಜ ಚಂದ್ರಗಿರಿ ಆಯ್ಕೆ

0

ಪುತ್ತೂರು: ಕಾಂತಾವರ ಕನ್ನಡ ಸಂಘ 2024ನೇ ಸಾಲಿನ ದತ್ತಿನಿಧಿ ಪ್ರಶಸ್ತಿಗಳನ್ನು ಘೋಷಿಸಿದ್ದು, ಈ ಪೈಕಿ ಹಿರಿಯ ಭಾಷಾತಜ್ಞ ಡಾ. ಯು.ಪಿ. ಉಪಾಧ್ಯಾಯ ಹೆಸರಿನ ʻಮಹೋಪಾಧ್ಯಾಯ ಪ್ರಶಸ್ತಿʼಗೆ ಕರಾವಳಿ ಭಾಗದ ಕನ್ನಡ ಸಾಹಿತ್ಯ ವಲಯದ ಪ್ರಮುಖ ಸಂಪನ್ಮೂಲ ವ್ಯಕ್ತಿ, ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ ಆಯ್ಕೆಗೊಂಡಿದ್ದಾರೆ. ಕಾಂತಾವರ ಕನ್ನಡ ಸಂಘದ ಅಧ್ಯಕ್ಷ ಡಾ. ನಾ. ಮೊಗಸಾಲೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. ಪ್ರಶಸ್ತಿಯು 10 ಸಾವಿರ ರೂ. ಗೌರವ ಸಂಭಾವನೆ, ತಾಮ್ರಪತ್ರ ಮತ್ತು ಸನ್ಮಾನಗಳನ್ನು ಒಳಗೊಂಡಿದೆ. ನ.1 ರಂದು ಧರ್ಮದರ್ಶಿ ಹರಿಕೃಷ್ಣ ಪುನರೂರುರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ʻಕಾಂತಾವರ ಉತ್ಸವʼದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.


ಡಾ. ವರದರಾಜ ಚಂದ್ರಗಿರಿ ಪರಿಚಯ:
ಹಳಗನ್ನಡ ಸಾಹಿತ್ಯದಿಂದ ತೊಡಗಿ ಈಚಿನ ಸಾಹಿತ್ಯದ ಒಲವು-ನಿಲುವುಗಳ ವರೆಗೆ ವಿಸ್ತಾರವಾದ ಓದು, ಅಧ್ಯಯನದ ಹಿನ್ನೆಲೆಯಿರುವ ಡಾ. ವರದರಾಜ ಚಂದ್ರಗಿರಿ ಅವರು ಕರಾವಳಿ ಭಾಗದ ಕನ್ನಡ ಸಾಹಿತ್ಯ ವಲಯದ ಓರ್ವ ಪ್ರಮುಖ ಸಂಪನ್ಮೂಲ ವ್ಯಕ್ತಿ. ತಮ್ಮ ಅಧ್ಯಯನಪೂರ್ಣ ಮಾತು, ಬರಹಗಳಿಂದ ಸಾಹಿತ್ಯ ವಲಯದಲ್ಲಿ ಜನಪ್ರಿಯರಾದವರು. ಅರಿವು-ಬೆರಗು, ನುಡಿನೋಟ, ವಿಶಿಷ್ಟಶೈಲಿಯ ಕತೆಗಾರ ವ್ಯಾಸ, ದುರ್ಗಾಪುರದ ವ್ಯಾಸಪಥ ಮುಂತಾದ ವಿಮರ್ಶಾಕೃತಿಗಳನ್ನಲ್ಲದೆ ಹಿರಿಯ ಕವಿ ಪೆರಡಾಲ ಕೃಷ್ಣಯ್ಯನವರ ಸಮಗ್ರ ಸಾಹಿತ್ಯ, ನವ್ಯ ಕತೆಗಾರ ಎಂ.ವ್ಯಾಸ ಅವರ ಸಾಹಿತ್ಯ ಇತ್ಯಾದಿಗಳನ್ನು ಸಂಗ್ರಹಿಸಿ ಪ್ರಕಟಿಸಿದವರು. ಡಾ. ತಾಳ್ತಜೆ ವಸಂತಕುಮಾರ ಅವರ ಅಭಿನಂದನ ಗ್ರಂಥ, ದೇವಮಣಿ ಶಂಕರ ಭಟ್ಟ ಅವರ ಸಂಸ್ಮರಣ ಸಂಪುಟ ಇತ್ಯಾದಿಗಳ ಪ್ರಮುಖ ಸಂಪಾದಕರಾಗಿ ದುಡಿದವರು. ಹಲವಾರು ಸಾಹಿತ್ಯ, ಶೈಕ್ಷಣಿಕ ಸಮಿತಿಗಳಲ್ಲಿ ಸಕ್ರಿಯರಾದವರು.

ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರೂ ಆಗಿದ್ದಾರೆ. ಮಂಗಳೂರಿನ ತಿಯೋಲಜಿಕಲ್ ಕಾಲೇಜಿನಲ್ಲಿರುವ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಂಶೋಧನ ಕೇಂದ್ರದಲ್ಲಿ ಮಾರ್ಗದರ್ಶಕರೂ ಆಗಿರುವ ಇವರ ಮಾರ್ಗದರ್ಶನದಲ್ಲಿ ಇಬ್ಬರು ವಿದ್ಯಾರ್ಥಿಗಳು ಪಿಹೆಚ್.ಡಿ ಮತ್ತು ಇಬ್ಬರು ಎಂ.ಫಿಲ್ ಪದವಿಗಳನ್ನು ಪಡೆದಿದ್ದಾರೆ. ಉತ್ತಮ ಸಾಹಿತ್ಯ ಸಂಘಟಕರೂ ಹೌದು. ಹಲವಾರು ರಾಜ್ಯ ಮತ್ತು ರಾಷ್ಟಮಟ್ಟದ ವಿಚಾರ ಸಂಕಿರಣಗಳನ್ನು ಸಂಘಟಿಸಿದವರು. ಪುತ್ತೂರು ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷರೂ ಆಗಿದ್ದಾರೆ.

LEAVE A REPLY

Please enter your comment!
Please enter your name here