ನೆಲ್ಯಾಡಿ: ಗೋಳಿತ್ತೊಟ್ಟು-ಕೊಕ್ಕಡ ರಸ್ತೆಯ ಗೋಳಿತ್ತೊಟ್ಟು ಗ್ರಾಮದ ಕೋಡಿಯಡ್ಕ ಎಂಬಲ್ಲಿ ಇಂಟರ್‌ಲಾಕ್ ಸಾಗಾಟದ ಮಿನಿ ಲಾರಿಯೊಂದು ಪಲ್ಟಿಯಾದ ಘಟನೆ ಅ.10ರಂದು ಬೆಳಿಗ್ಗೆ ನಡೆದಿದೆ. ಘಟನೆಯಲ್ಲಿ ಲಾರಿ ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ಹಳ್ಳಿಂಗೇರಿಯಿಂದ ಉಪ್ಪಿನಂಗಡಿಗೆ ಇಂಟರ್‌ಲಾಕ್ ಸಾಗಾಟ ಮಾಡುತ್ತಿದ್ದ ಮಿನಿ ಲಾರಿ ಗೋಳಿತ್ತೊಟ್ಟು-ಕೊಕ್ಕಡ ರಸ್ತೆಯ ಕೋಡಿಯಡ್ಕ ಎಂಬಲ್ಲಿ ಎದುರಿನಿಂದ ಬರುತ್ತಿದ್ದ ಕಾರೊಂದಕ್ಕೆ ಸೈಡ್ ಕೊಡುವ ವೇಳೆ ಲಾರಿ ಮೋರಿಗೆ ಡಿಕ್ಕಿಯಾಗಿ ಪಕ್ಕದ ಚರಂಡಿಗೆ ಪಲ್ಟಿಯಾಗಿದೆ. ಲಾರಿಯ ಚಾಲಕ ಮಾತ್ರ ಇದ್ದು ಅಪಾಯದಿಂದ ಪಾರಾಗಿದ್ದಾರೆ. ಗ್ರಾಮ ಪಂಚಾಯತ್‌ನಿಂದ ನಿರ್ಮಿಸಲಾದ ಮೋರಿ ಹಾನಿಗೊಂಡಿದೆ.
ಹಂಪ್ಸ್ ಅಳವಡಿಸಿ:
ಗೋಳಿತ್ತೊಟ್ಟು-ಕೊಕ್ಕಡ ರಸ್ತೆಯಲ್ಲಿ ಗೋಳಿತ್ತೊಟ್ಟಿನಿಂದ ಉಪ್ಪರಹಳ್ಳ ಸೇತುವೆ ತನಕ ರಸ್ತೆ ಕಾಂಕ್ರಿಟೀಕರಣಗೊಂಡಿದ್ದು ತಿರುವುಗಳಿಂದ ಕೂಡಿದೆ. ಸದ್ರಿ ರಸ್ತೆಯಲ್ಲಿ ವಾಹನಗಳು ಅತೀ ವೇಗವಾಗಿ ಸಂಚರಿಸುತ್ತಿರುವುದರಿಂದ ಪದೇ ಪದೇ ಅಪಘಾತಗಳು ನಡೆಯುತ್ತಲೇ ಇವೆ. ಅಲ್ಲದೇ ಅಗಲ ಕಿರಿದಾದ ಸದ್ರಿ ರಸ್ತೆಯಲ್ಲಿ ಮರಳು, ಜಲ್ಲಿ ಸಾಗಾಟದ ಟಿಪ್ಪರ್ ಸಹಿತ ಭಾರೀ ಗಾತ್ರದ ವಾಹನಗಳೂ ಸಂಚರಿಸುತ್ತಿದ್ದು ಇದರಿಂದ ದ್ವಿಚಕ್ರ ಹಾಗೂ ಲಘು ವಾಹನಗಳ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ರಿ ರಸ್ತೆಯ ಅಂಬುಡೇಲು ಹಾಗೂ ಕೋಡಿಯಡ್ಕದಲ್ಲಿ ಹಂಪ್ಸ್ ಅಳವಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.