ಅಡೂರು :ಇತಿಹಾಸ ಪ್ರಸಿದ್ಧ ಅಡೂರು ಮಹಾತೋಬಾರ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾವಿಷ್ಣು ವಿನಾಯಕ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಆಶ್ರಯದಲ್ಲಿ ಮೂಲಸ್ಥಾನ ಕೌಡಿಂಕಾನ ಯಾತ್ರೆಯ ಪೂರ್ವ ತಯಾರಿ ಪ್ರಯುಕ್ತ ಮಹಾಸಭೆ ಮತ್ತು ಬಲಿವಾಡುಕೂಟವು ಅ.13ರಂದು ನಡೆಯಲಿದೆ.
ಕುಂಬಳೆ ಸೀಮೆಯ ಪ್ರಥಮ ವಂದನೀಯ ಅಡೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಮೂಲಸ್ಥಾನ ಕೌಡಿಂಕಾನ ಯಾತ್ರೆಯು 2025ರ ಜನವರಿ 14ರ ಮಕರ ಸಂಕ್ರಮಣದಂದು ನಡೆಯಲಿದೆ. ಶ್ರೀಕ್ಷೇತ್ರದಲ್ಲಿ ಎರಡನೇ ಹಂತದ ಜೀರ್ಣೋದ್ಧಾರ ಕಾರ್ಯಗಳು ಪ್ರಗತಿಯಲ್ಲಿದ್ದು, ಮುಂದಿನ ವರ್ಷದ ಜ.6ರಂದು ನವೀಕೃತ ಶ್ರೀ ರಕ್ತೇಶ್ವರೀ ಗುಡಿಯಲ್ಲಿ ಪುನರ್‌ಪ್ರತಿಷ್ಠಾಪನಾ ಕಾರ್ಯವು ಜರಗಲಿದ್ದು, ಅನಂತರ ಕೌಡಿಂಕಾನ ಯಾತ್ರೆಯು ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಅ.13ರಂದು ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಪೂರ್ಣ ಅನುಗ್ರಹದೊಂದಿಗೆ ಸೀಮೆಯ ಭಕ್ತ ಜನರ ಒಗ್ಗೂಡುವಿಕೆಯೊಂದಿಗೆ ಮೂಲಸ್ಥಾನ ಕೌಡಿಂಕಾನ ಯಾತ್ರೆಯ ಪೂರ್ವತಯಾರಿ ಪ್ರಯುಕ್ತ ಶ್ರೀಕ್ಷೇತ್ರದಲ್ಲಿ ಬೆಳಿಗ್ಗೆ ಮಹಾಸಭೆ ಮತ್ತು ಬಲಿವಾಡು ಕೂಟ ನಡೆಯಲಿದೆ.ಅಂದು ಬೆಳಿಗ್ಗೆ 10 ಗಂಟೆಗೆ ಶ್ರೀಗಳಿಗೆ ಪೂರ್ಣ ಕುಂಭ ಸ್ವಾಗತ ಸಮಾರಂಭ ನಡೆಯಲಿದ್ದು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಸಂತ ಪೈ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನ ನೀಡಲಿದ್ದಾರೆ. ವೇ.ಮೂ.ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಅವರೂ ಉಪಸ್ಥಿತರಿದ್ದು ಆಶೀರ್ವಚನ ನೀಡುವರು. ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳು ಮಾರ್ಗದರ್ಶನ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹೇರಂಭಾ ಇಂಡಸ್ಟ್ರೀಸ್ ಮುಂಬೈ ಇದರ ಅಧ್ಯಕ್ಷರಾದ ಸದಾಶಿವ ಶೆಟ್ಟಿ ಕುಳೂರು, ಕನ್ಯಾನ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಮುಂಬೈ ಉದ್ಯಮಿ ಕೃಷ್ಣ ಪ್ರಸಾದ್ ರೈ ಕುತ್ತಿಕ್ಕಾರು , ಕಾಸರಗೋಡಿನ ಖ್ಯಾತ ಶ್ರೀ ಕೃಷ್ಣಾ ಹಾರ್ಡ್‌ವೇರ‍್ಸ್‌ನ ಸುರೇಶ್ ಕಾಸರಗೋಡು ಅವರು ಅತಿಥಿಗಳಾಗಿ ಭಾಗವಹಿಸುವರು.
ಶ್ರೀ ಕ್ಷೇತ್ರ ಅಡೂರಿನ ಕಾರ್ಯನಿರ್ವಹಣಾಕಾರಿ ರಾಜೇಶ್ ಟಿ. ಉಪಸ್ಥಿತರಿರುವರು. ಈ ಮಹತ್ವದ ಸಭೆಯಲ್ಲಿ ದಾನಿಗಳು, ಗಣ್ಯರು, ಪ್ರಾದೇಶಿಕ ಸಮಿತಿಗಳ ಎಲ್ಲ ಮನೆಗಳ ಭಕ್ತಾದಿಗಳು ಪಾಲ್ಗೊಳ್ಳುವರು.ಮಧ್ಯಾಹ್ನ 12.15ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.ಈ ಐತಿಹಾಸಿಕ ಕ್ಷೇತ್ರದ ಜೀರ್ಣೋದ್ಧಾರದ ಪುಣ್ಯ ಕಾರ್ಯದಲ್ಲಿ ಎಲ್ಲ ಭಕ್ತಾದಿಗಳು ಪಾಲ್ಗೊಳ್ಳಬೇಕೆಂದು ಸಮಿತಿ ವಿನಂತಿಸಿದೆ.