ನಿಡ್ಪಳ್ಳಿ: ಶ್ರೀ ಶಾಂತದುರ್ಗಾ ದೇವಸ್ಥಾನ ಶ್ರೀ ಕ್ಷೇತ್ರ ನಿಡ್ಪಳ್ಳಿ ಇಲ್ಲಿ ನವರಾತ್ರಿ ಉತ್ಸವ ಅ.3 ರಿಂದ 12 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಬಹಳ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಅ.3 ರಂದು ಶ್ರೀ ಮಹಾಗಣಪತಿ ಹವನ ನಂತರ ಶ್ರೀ ದೇವರಿಗೆ ಪಂಚವಿಂಶತಿ ಕಲಶ ನಡೆಯಿತು. ಪ್ರಗತಿಪರ ಕೃಷಿಕ ರಾಮಕೃಷ್ಣ ಭಟ್ ದೇವಮಣಿ ದೀಪ ಬೆಳಗಿಸಿ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದರು. ನಂತರ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಮಂದಾರಗಿರಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಮಹಾಪೂಜೆ, ಶ್ರೀ ದೇವರಿಗೆ ಸಾಮೂಹಿಕ ವಿಶೇಷ ರಂಗ ಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.
ಅ.8 ರಂದು ಸಾಮೂಹಿಕ ಚಂಡಿಕಾ ಹೋಮ ಪ್ರಾರಂಭವಾಗಿ ಮಧ್ಯಾಹ್ನ ಗಂಟೆ 12 ಕ್ಕೆ ಚಂಡಿಕಾ ಹೋಮದ ಪೂರ್ಣಾಹುತಿ ನಂತರ ಮಹಾಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.
ಅ.11 ರಂದು ವಿಶೇಷ ಆಯುಧ ಪೂಜೆ ನಡೆಯಿತು.ಸಂಜೆ ಸಾಮೂಹಿಕ ದುರ್ಗಾಪೂಜೆ ನಂತರ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು. ಅ.12 ರಂದು ಬೆಳಿಗ್ಗೆ ಕದಿರು ತುಂಬಿಸುವ ಕಾರ್ಯಕ್ರಮ, ಅಕ್ಷರಾಭ್ಯಾಸ ನಡೆಯಿತು. ಮಧ್ಯಾಹ್ನ ವಿಜಯದಶಮಿ ಪ್ರಯುಕ್ತ ಶ್ರೀ ದೇವಿಗೆ ವಿಶೇಷ ಅಲಂಕಾರ ಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.ನವರಾತ್ರಿಯ ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ನಡೆದು ಸುಮಾರು 5000 ಮಂದಿ ಭಕ್ತಾದಿಗಳು ಅನ್ನ ಪ್ರಸಾದ ಸ್ವೀಕರಿಸಿದರು.
ಪ್ರತಿ ದಿನ ಭಜನಾ ಕಾರ್ಯಕ್ರಮ:
ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ವಿಶೇಷವಾಗಿ ಸುಮಾರು 18 ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನಾ ಕಾರ್ಯಕ್ರಮ ನಡೆಯಿತು. ಪ್ರತಿದಿನ ಸಂಜೆ ದೇವರಿಗೆ ವಿಶೇಷ ಅಲಂಕಾರ ಪೂಜೆ ನಡೆಯಿತು. ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಊರ ಪರವೂರ ಸಾವಿರಾರು ಭಕ್ತಾದಿಗಳು ಪಾಲ್ಗೊಂಡರು.