ಶಿವಪ್ಪ ಗೌಡರವರ ಆದರ್ಶ ಜೀವನ ಸಮಾಜಕ್ಕೆ ಮಾದರಿ- ತಾರಾನಾಥ ಸವಣೂರು
ಪುತ್ತೂರು: ಪುಣ್ಚಪ್ಪಾಡಿ ಗ್ರಾಮದ ಕುಮಾರಮಂಗಲ ಪೂಜಾರಿಮೂಲೆ ನಿವಾಸಿ ಕೆ.ಶಿವಪ್ಪ ಗೌಡ ರವರ ವೈಕುಂಠ ಸಮಾರಾಧನೆಯು ಅ. 17 ರಂದು ಮೃತರ ಸೃಗೃಹ ಪೂಜಾರಿಮೂಲೆಯಲ್ಲಿ ಜರಗಿತು. ಈ ಸಂದರ್ಭದಲ್ಲಿ ಶಿವಪ್ಪ ಗೌಡರವರಿಗೆ ಶ್ರದ್ಧಾಂಜಲಿ ಸಲ್ಲಿಸುವ ನುಡಿನಮನ ಕಾರ್‍ಯಕ್ರಮ ಜರಗಿತು.
ವೀರಮಂಗಲ ಪಿಎಂಶ್ರೀ ಶಾಲೆಯ ಮುಖ್ಯಗುರು ತಾರಾನಾಥ ಸವಣೂರುರವರು ಮಾತನಾಡಿ , ವ್ಯಕ್ತಿಗೆ ಬದುಕು ಇದ್ದಾಗ ಉಸಿರು, ಉಸಿರು ನಿಂತ ಮೇಲೆ ಆತ ಮಾಡಿದ ಒಳ್ಳೆಯ ಕೆಲಸದಿಂದ ಹೆಸರು ಬರುತ್ತದೆ. ಅದನ್ನು ಸಮಾಜ ನೆನಪನ್ನು ಮಾಡುತ್ತದೆ. ಅದೇ ರೀತಿ ಶಿವಪ್ಪ ಗೌಡರವರು 95 ವರ್ಷಗಳ ಕಾಲ ಸಾರ್ಥಕ ಬದುಕನ್ನು ಉತ್ತಮ ರೀತಿಯಲ್ಲಿ ಬಾಳಿದರು, ಅವರು ದೈವ-ದೇವರುಗಳ ಆರಾಧನೆಯನ್ನು ಅತ್ಯಂತ ನಿಷ್ಠೆ ಮತ್ತು ಶ್ರದ್ಧೆಯಿಂದ ಮಾಡಿಕೊಂಡು ಬರುತ್ತಿದ್ದರು. ಕೃಷಿ ಕಾರ್‍ಯದಲ್ಲೂ ಪರಿಶ್ರಮಿಯಾಗಿದ್ದರು, ತನ್ನ ಮನೆಯವರನ್ನು ಮತ್ತು ಕುಟುಂಬದವರನ್ನು ಅಕ್ಕರೆಯಿಂದ ನೋಡಿಕೊಂಡು, ಸಮಾಜದಲ್ಲಿ ಎಲ್ಲರೊಂದಿಗೆ ಅಚ್ಚು ಮೆಚ್ಚಿನವರಾಗಿ ಜೀವನ ನಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಸರಳತೆ, ಆದರ್ಶ ಬದುಕನ್ನು ಬಾಳಿದ ಶಿವಪ್ಪ ಗೌಡರವರ ಆದರ್ಶ ಜೀವನ ಸಮಾಜಕ್ಕೆ ಮಾದರಿಯಾಗಿದೆ ಎಂದು ನುಡಿನಮನ ಸಲ್ಲಿಸಿದರು.
ಶಿವಪ್ಪ ಗೌಡರವರ ಪತ್ನಿ ಸುಬ್ಬಕ್ಕ, ಮಕ್ಕಳಾದ ಬಾಬು ಗೌಡ, ಪುಟ್ಟಣ್ಣ ಗೌಡ, ಬೆಳಿಯಪ್ಪ ಗೌಡ, ಪ್ರೇಮಾ, ನಾರಾಯಣ ಪ್ರಸಾದ್, ಅಳಿಯ ಸಿದ್ದಣ್ಣ ಗೌಡ, ಸೊಸೆಯಂದಿರಾದ ಸೀತಾಲಕ್ಷ್ಮಿ. ಜ್ಯೋತಿ, ಪ್ರೇಮಾ, ಅಕ್ಷತಾ ಹಾಗೂ ಮೊಮ್ಮಕ್ಕಳು ಮತ್ತು ಕುಟುಂಬಸ್ಥರು ಹಾಗೂ ಊರ-ಪರವೂರ ಹಿತೈಷಿಗಳು ಸೇರಿದಂತೆ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಮುಖಂಡರುಗಳು ಭಾಗವಹಿಸಿ, ಮೃತರ ಅತ್ಮಕ್ಕೆ ಚಿರಶಾಂತಿ ಕೋರಿದರು.