ಕುಂಬ್ರ: ಪಾದೆಡ್ಕದಲ್ಲಿ ತಾಯಿ, ಮಗ ವಾಸಿಸುತ್ತಿದ್ದ ಗುಡಿಸಲಿಗೆ ಬೆಂಕಿ

0

ಪುತ್ತೂರು: ಗುಡಿಸಲಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಅಪಾರ ನಷ್ಟ ಸಂಭವಿಸಿದ ಘಟನೆ ಕುಂಬ್ರ ಸಮೀಪದ ಸಾರೆಪುಣಿ ಪಾದೆಡ್ಕ ಎಂಬಲ್ಲಿ ಅ.18ರಂದು ನಡೆದಿದೆ.


ಪಾದೆಡ್ಕ ನಿವಾಸಿ ಪದ್ಮಾವತಿ ಎಂಬವರ ಗುಡಿಸಲು ಮನೆಗೆ ಬೆಂಕಿ ಹೊತ್ತಿಕೊಂಡಿದ್ದು ಮನೆಯೊಳಗೆ ಬ್ಯಾಗ್‌ವೊಂದರಲ್ಲಿ ಇಟ್ಟಿದ್ದ ರೂ.15000 ನಗದು, ದಾಖಲೆ ಹಾಗೂ ಇನ್ನಿತರ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಗುಡಿಸಲಿಗೆ ಗೋಡೆ ಇಲ್ಲದೇ ಇರುವುದರಿಂದ ಗುಡಿಸಲಿನ ಸುತ್ತ ನೆಟ್ ಅಳವಡಿಸಲಾಗಿದ್ದು ಎರಡು ಬದಿಯ ನೆಟ್ ಸಂಪೂರ್ಣ ಸುಟ್ಟು ಹೋಗಿದೆ. ಪದ್ಮಾವತಿ ಅವರ ಪತಿ ನಿಧನ ಹೊಂದಿದ್ದು ಈ ಮನೆಯಲ್ಲಿ ಪದ್ಮಾವತಿ ಮತ್ತು ಅವರ 8 ವರ್ಷದ ಪುತ್ರ ವಾಸವಾಗಿದ್ದಾರೆ.


ಪದ್ಮಾವತಿಯವರು ಎಂದಿನಂತೆ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಅವರಿಗೆ ಸ್ಥಳೀಯರು ಕರೆ ಮಾಡಿ ಮನೆಗೆ ಬೆಂಕಿ ಬಿದ್ದಿರುವ ಬಗ್ಗೆ ತಿಳಿಸಿದ್ದು ಕೂಡಲೇ ಪದ್ಮಾವತಿ ಮನೆಗೆ ಬಂದಿದ್ದರು. ಈ ವೇಳೆ ಮನೆಯ ಒಂದು ಭಾಗದಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಕಂಡು ಬಂದಿದೆ. ಮನೆಯೊಳಗಿದ್ದ ದಿನಸಿ ಸಾಮಾನುಗಳೂ ಬೆಂಕಿಗಾಹುತಿಯಾಗಿದೆ.

ಕಣ್ಣೀರು ಹಾಕುತ್ತಾ ಕುಳಿತ ಮಹಿಳೆ:
ಬೆಂಕಿ ಹೊತ್ತಿಕೊಂಡ ಮನೆಯ ಯಜಮಾನಿ ಪದ್ಮಾವತಿ ಮನೆಯಲ್ಲಿ ಅಳುತ್ತಾ ಕುಳಿತಿದ್ದ ದೃಶ್ಯ ಕಂಡು ಬಂತು. 15 ಸಾವಿರ ನಗದು, ಆಧಾರ್ ಕಾರ್ಡ್ ಮತ್ತಿತರ ದಾಖಲೆಗಳು ಸುಟ್ಟು ಭಸ್ಮವಾಗಿದ್ದು ಮನೆಗೆ ಗೋಡೆ ಇಲ್ಲದ್ದರಿಂದ ನೆಟ್ ಕಟ್ಟಿ ನಾನು ಮತ್ತು ನನ್ನ ಮಗು ವಾಸಿಸುತ್ತಿದ್ದೆವು, ನಾವು ಇನ್ನೇನು ಮಾಡಬೇಕು, ನನ್ನಲ್ಲಿ ಒಂದೂ ರೂಪಾಯಿ ಹಣ ಕೂಡಾ ಇಲ್ಲ ಎನ್ನುತ್ತಾ ಕಣ್ಣೀರು ಹಾಕುತ್ತಿದ್ದರು.

ಬೆಂಕಿ ನಂದಿಸಲು ನೆರವಾದ ಸಾಮಾಜಿಕ ಕಾರ್ಯಕರ್ತ:
ಗುಡಿಸಲು ಮನೆಗೆ ಬೆಂಕಿ ಹೊತ್ತಿಕೊಂಡ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ಥಳೀಯ ಸಾಮಾಜಿಕ ಕಾರ್ಯಕರ್ತ, ಎಸ್ಕೆಎಸ್ಸೆಸ್ಸೆಫ್ ಮುಖಂಡ ಅಶ್ರಫ್ ಸಾರೆಪುಣಿ ಅವರು ಕೂಡಲೇ ಕಾರ್ಯ ಪ್ರವೃತ್ತರಾಗಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಗೆ ಸ್ಥಳೀಯರಾದ ಹುಕ್ರ ಎಂಬವರು ಸಹಕಾರ ನೀಡಿದರು.

ಘಟನೆಯ ಸುತ್ತ ಅನುಮಾನ..?
ಮನೆಗೆ ಬೆಂಕಿ ಹೊತ್ತಿಕೊಂಡಿರುವ ವಿಚಾರದಲ್ಲಿ ಸಂಶಯ ಹುಟ್ಟಿಕೊಂಡಿದ್ದು ಮನೆಗೆ ವಿದ್ಯುತ್ ಇಲ್ಲದ ಕಾರಣ ಶಾರ್ಟ್ ಸರ್ಕ್ಯೂಟ್ ಆಗಲು ಸಾಧ್ಯವಿಲ್ಲ, ಮನೆಯ ಒಲೆ ಒಂದು ಮೂಲೆಯಲ್ಲಿದ್ದು ಅಲ್ಲಿ ಯಾವುದೇ ಬೆಂಕಿ ಅವಘಡ ಆಗಿಲ್ಲ, ಮಾತ್ರವಲ್ಲದೇ ಒಲೆಯಲ್ಲಿ ಬೆಂಕಿಯೂ ಇರಲಿಲ್ಲ, ಒಲೆ ಇಲ್ಲದ ಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಯಾರಾದರೂ ಉದ್ದೇಶಪೂರ್ವಕವಾಗಿ ಬೆಂಕಿ ಹಾಕಿರಬಹುದೇ ಎನ್ನುವ ಸಂಶಯ ಸ್ಥಳೀಯವಾಗಿ ಕೇಳಿ ಬಂದಿದೆ.

ಗ್ರಾಮ ಸಹಾಯಕ ಭೇಟಿ:
ಘಟನಾ ಸ್ಥಳಕ್ಕೆ ಕೆದಂಬಾಡಿ ಗ್ರಾಮ ಸಹಾಯಕ ಶ್ರೀಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here