ಅನುದಾನ ರಹಿತ ಶಾಲೆಗಳ ಸಂಘದಿಂದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ-ರಾಮಕುಂಜ ಆ.ಮಾ.ಶಾಲಾ ಶಿಕ್ಷಕಿ ಸರಿತಾ ಆಯ್ಕೆ

0

ರಾಮಕುಂಜ: ಮಾನ್ಯತೆ ಪಡೆದ ಅನುದಾನ ರಹಿತ ಶಾಲೆಗಳ ಸಂಘ, ಕರ್ನಾಟಕ (ರುಪ್ಸ) ಇವರು ಕೊಡಮಾಡುವ 2024ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಕಡಬ ತಾಲೂಕಿನ ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶಿಕ್ಷಕಿ ಸರಿತಾ ಜನಾರ್ದನ ಆಲಂಕಾರು ಆಯ್ಕೆಯಾಗಿದ್ದಾರೆ. ಅ.21ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧುಬಂಗಾರಪ್ಪರವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.


ಸರಿತಾ ಜನಾರ್ದನ ಅವರು ಎಂ.ಎಸ್‌ಸಿ., ಡಿ.ಎಡ್, ಬಿ.ಎಡ್ ಪದವೀಧರೆಯಾಗಿದ್ದು ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಗಣಿತ ಮತ್ತು ತುಳು ಶಿಕ್ಷಕಿಯಾಗಿ ಕಳೆದ 17 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸರಿತಾ ಅವರು ಬೋಧಿಸುತ್ತಿರುವ ಗಣಿತ ಹಾಗೂ ತುಳು ವಿಷಯದಲ್ಲಿ ಕಳೆದ 17 ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಸಂಸ್ಥೆ ಶೇ.100 ತೇರ್ಗಡೆ ಫಲಿತಾಂಶ ಪಡೆಯುತ್ತಿದೆ.

ಆಟಿ ಅಮಾವಾಸ್ಯೆ, ಪುದ್ವಾರ್, ದೀಪಾವಳಿ ಸೇರಿದಂತೆ ತುಳುನಾಡಿನ ಪ್ರಮುಖ ಆಚರಣೆಗಳನ್ನು ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ಪ್ರತಿ ವರ್ಷವೂ ಶಿಕ್ಷಕಿ ಸರಿತಾ ಅವರ ಉಸ್ತುವಾರಿಯಲ್ಲಿಯೇ ಸಡಗರದಿಂದ ಆಚರಿಸಲಾಗುತ್ತಿದೆ. ತುಳುವಿನ ಬಗ್ಗೆ ಅಪಾರ ಜ್ಞಾನ ಹೊಂದಿರುವ ಇವರು ವಿವಿಧ ಕಡೆಗಳಲ್ಲಿ ನಡೆಯುವ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ಭಾಗವಹಿಸುತ್ತಿದ್ದಾರೆ. ಕರ್ನಾಟಕ ಸರಕಾರದ ತುಳು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಸದಸ್ಯೆಯೂ ಆಗಿದ್ದಾರೆ. ಇವರು ಕಡಬ ಮತ್ತು ಆಲಂಕಾರಿನಲ್ಲಿರುವ ಜ್ಞಾನಸುಧಾ ವಿದ್ಯಾಬೋಧನಾ ಸಂಸ್ಥೆಯ ಸಂಚಾಲಕ, ಆಲಂಕಾರು ನಿವಾಸಿ ಬಿ.ಎಲ್ ಜನಾರ್ದನರವರ ಪತ್ನಿ.

LEAVE A REPLY

Please enter your comment!
Please enter your name here