ಕೆಮ್ಮಾರ: ಹೊಂಡ ತಪ್ಪಿಸಲು ಹೋಗಿ ’ಹೋಂಡಾ’ ಪಲ್ಟಿ-ಸವಾರರಾದ ಸಹೋದರರಿಗೆ ಗಂಭೀರ ಗಾಯ

0

ಉಪ್ಪಿನಂಗಡಿ: ರಸ್ತೆಯಲ್ಲಿನ ಹೊಂಡ ತಪ್ಪಿಸಲು ಹೋಗಿ ಹೋಂಡಾ ಡಿಯೋ ಸ್ಕೂಟರ್ ಪಲ್ಟಿಯಾಗಿ ಸವಾರರಾದ ಸಹೋದರರಿಬ್ಬರು ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಅ.18ರಂದು ಸಂಜೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೆಮ್ಮಾರದಲ್ಲಿ ನಡೆದಿದೆ.


ಕೊಯಿಲ ಗ್ರಾಮದ ಬೊಳುಂಬುಡ ನಿವಾಸಿಗಳು, ಸಹೋದರರೂ ಆದ ಅಬ್ದುಲ್ ಸಲಾಂ ಮತ್ತು ಸಿದ್ದೀಕ್ ಗಾಯಗೊಂಡವರಾಗಿದ್ದಾರೆ. ಇವರಿಬ್ಬರು ತಮ್ಮ ಹೋಂಡಾ ಡಿಯೋ ಸ್ಕೂಟರ್‌ನಲ್ಲಿ ಉಪ್ಪಿನಂಗಡಿ ಕಡೆಗೆ ಹೋಗುತ್ತಿದ್ದ ವೇಳೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೆಮ್ಮಾರದಲ್ಲಿ ಈ ಅಪಘಾತ ನಡೆದಿದೆ. ಗಾಯಾಳುಗಳಿಬ್ಬರು ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಾಯಕಾರಿ ಜಾಗ:
ಸ್ಕೂಟರ್ ಪಲ್ಟಿಯಾಗಿರುವ ಕೆಮ್ಮಾರದ ಈ ಜಾಗದಲ್ಲಿ ಪದೇ ಪದೇ ವಾಹನ ಅಪಘಾತ ನಡೆಯುತ್ತಿದೆ. ಇಲ್ಲಿನ ಬಸ್‌ನಿಲ್ದಾಣದ ಮುಂಭಾಗದ ರಸ್ತೆ ಪೂರ್ತಿ ಹೊಂಡಗಳಿವೆ. ಮಳೆಗಾಲದಲ್ಲಿ ಹೊಂಡದಲ್ಲಿ ನೀರು ನಿಂತಿರುವುದರಿಂದ ರಸ್ತೆ ಯಾವುದು, ಗುಂಡಿ ಯಾವುದು ಎಂದು ಗೊತ್ತಾಗುವುದಿಲ್ಲ. ವೇಗವಾಗಿ ಬರುವ ಬೈಕ್ ಸವಾರರು ರಸ್ತೆ ಮಧ್ಯೆ ಇರುವ ಹೊಂಡ ತಪ್ಪಿಸುವ ಭರದಲ್ಲಿ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗುವುದು ಮಾಮೂಲಿಯಾಗಿದೆ. ಘನ ವಾಹನಗಳ ಸಂಚಾರದ ವೇಳೆ ರಸ್ತೆಯಲ್ಲಿ ನಿಂತ ನೀರು ಬಸ್‌ನಿಲ್ದಾಣದಲ್ಲಿ ನಿಂತಿರುವ ಪ್ರಯಾಣಿಕರ ಮೇಲೆಯೇ ಚಿಮ್ಮುತ್ತಿದೆ. ಇತ್ತೀಚೆಗೆ ವೇಗವಾಗಿ ಬಂದ ಕಾರೊಂದು ಹೆದ್ದಾರಿಯಲ್ಲಿನ ಗುಂಡಿ ತಪ್ಪಿಸಲು ಕಾರು ಚಾಲಕ ಹಠಾತ್ ಬ್ರೇಕ್ ಹಾಕಿದ್ದರಿಂದ ಕಾರು ಪಲ್ಟಿಯಾಗಿರುವ ಘಟನೆಯೂ ನಡೆದಿದ್ದು ಇದರ ಸಿಸಿಟಿವಿ ದೃಶ್ಯ ವೈರಲ್ ಆಗಿತ್ತು.

ರಸ್ತೆಯಲ್ಲೆಡೆ ಗುಂಡಿ:
ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಉಪ್ಪಿನಂಗಡಿ ಗ್ರಾಮದ ದಡ್ಡು ಎಂಬಲ್ಲಿನ ಸುಬ್ರಹ್ಮಣ್ಯ ಕ್ರಾಸ್‌ನಿಂದ ಕೊಯಿಲದ ತನಕ ರಸ್ತೆ ಸಂಪೂರ್ಣ ಕೆಟ್ಟುಹೋಗಿದ್ದು ಗುಂಡಿಗಳಿಂದ ತುಂಬಿ ಹೋಗಿದೆ. ಈ ರಸ್ತೆಯಲ್ಲಿ ವಾಹನ ಸಂಚಾರ ಮಾಡುವುದೇ ದೊಡ್ಡ ಸವಾಲು ಆಗಿದೆ. ಅದರಲ್ಲೂ ಬೈಕ್ ಸವಾರರು ಗುಂಡಿ ತಪ್ಪಿಸಲು ಸರ್ಕಸ್ ಮಾಡಿಕೊಂಡು ಹೋಗಬೇಕಾಗಿದೆ. ಕೊಯಿಲದ ತನಕ ರಸ್ತೆ ಡಾಮರು ಎದ್ದುಹೋಗಿದ್ದು ಅಲ್ಲಲ್ಲಿ ಹೊಂಡ, ಗುಂಡಿ ನಿರ್ಮಾಣಗೊಂಡಿದೆ. ಇದು ಅಪಘಾತಕ್ಕೆ ಕಾರಣವಾಗುತ್ತಿದೆ. ಈ ರಸ್ತೆಯ ಮರು ಡಾಮರೀಕರಣಕ್ಕೆ ಕೆಮ್ಮಾರ ನಾಗರಿಕ ಹಿತರಕ್ಷಣಾ ವೇದಿಕೆಯು ಹಲವು ಸಲ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿ ಒತ್ತಾಯಿಸಿತ್ತು. ಇನ್ನಾದರೂ ರಸ್ತೆಯಲ್ಲಿನ ಹೊಂಡ ಮುಚ್ಚಲು ಲೋಕೋಪಯೋಗಿ ಇಲಾಖೆ ಕ್ರಮ ಕೈಗೊಳ್ಳಬಹುದೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here