ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯವೊದಗಿಸಲು ಬದ್ಧ: ಬೊಟ್ಯಾಡಿ
ಉಪ್ಪಿನಂಗಡಿ: ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಗೆದ್ದ ಬಳಿಕ ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳ ಭಾವನೆಗಳನ್ನು ಅರಿತುಕೊಂಡು ಅವರ ಕಷ್ಟ ಪರಿಹರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಇದರೊಂದಿಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಲು ಬದ್ಧನಿದ್ದೇನೆ ಎಂದು ದಕ್ಷಿಣ ಕನ್ನಡ- ಉಡುಪಿ ಜಿಲ್ಲಾ ಸ್ಥಳೀಯ ಪ್ರಾಧಿಕಾರ ಕ್ಷೇತ್ರದ ವಿಧಾನ ಪರಿಷತ್ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಭಂಡಾರಿ ಬೊಟ್ಯಾಡಿ ತಿಳಿಸಿದರು.
ಉಪ ಚುನಾವಣೆಯ ಸಂದರ್ಭ ಉಪ್ಪಿನಂಗಡಿ ಗ್ರಾ.ಪಂ.ಗೆ ಆಗಮಿಸಿ ಅಲ್ಲಿದ್ದ ಬಿಜೆಪಿ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ಅವರು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ನಾನು ಈಗಾಗಲೇ ಗೆದ್ದಾಗಿದೆ. ಆದರೆ ಗೆಲುವಿನ ಅಂತರ ಜಾಸ್ತಿಯಾಗಬೇಕೆನ್ನುದು ನಮ್ಮ ಪ್ರಯತ್ನ. ರಾಜ್ಯದಲ್ಲಿ ಕಾಂಗ್ರೆಸ್‌ನ ಭ್ರಷ್ಟ ಆಡಳಿತವಿದ್ದು, ಸ್ಥಳೀಯ ಪ್ರಾಧಿಕಾರಕ್ಕೆ ಜನರಿಂದ ಆಯ್ಕೆಯಾಗಿರುವ ಪ್ರತಿನಿಧಿಗಳು ಹೆಚ್ಚಿನ ಅಂತರದಿಂದ ನನ್ನನ್ನು ಗೆಲ್ಲಿಸುವ ಮೂಲಕ ಭ್ರಷ್ಟ ಕಾಂಗ್ರೆಸ್ ಅನ್ನು ಜನತೆ ತಿರಸ್ಕರಿಸಿದ್ದಾರೆ ಎಂಬ ಸ್ಪಷ್ಟ ಸಂದೇಶವನ್ನು ನೀಡಬೇಕಿದೆ. ಕೋಟ ಶ್ರೀನಿವಾಸ ಪೂಜಾರಿಯವರ ಹಾಗೂ ಪಕ್ಷದ ಹಿರಿಯರ ಮಾರ್ಗದರ್ಶನದಂತೆ ನನಗೆ ಕೊಟ್ಟಿರುವ ಜವಾಬ್ದಾರಿಯನ್ನು ಚೆನ್ನಾಗಿ ನಿಬಾಯಿಸುತ್ತೇನೆ. ಬಿಜೆಪಿ ಪಕ್ಷವೆನ್ನುವುದು ನನಗೆ ತಾಯಿಯಿದ್ದ ಹಾಗೆ. ನನ್ನ ಈ ಗೆಲುವಿಗೆ ಪಕ್ಷದ ಎಲ್ಲಾ ಹಿರಿ-ಕಿರಿಯರ ಶ್ರಮ ಇರಲಿದ್ದು, ಅವರು ನನ್ನ ಮೇಲೆ ಇಟ್ಟ ನಂಬಿಕೆಗೆ ಎಳ್ಳಷ್ಟೂ ಚ್ಯುತಿ ಬಾರದಂತೆ ಕೆಲಸ ನಿರ್ವಹಿಸಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಕೊಡಿಸಲು ಪ್ರಯತ್ನಿಸುತ್ತೇನೆ ಎಂದರು.
ಈ ಸಂದರ್ಭ ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಉಪಾಧ್ಯಕ್ಷರಾದ ಸುನೀಲ್ ಕುಮಾರ್ ದಡ್ಡು, ವಿದ್ಯಾಧರ ಜೈನ್, ಉಪ್ಪಿನಂಗಡಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಅತ್ರೆಮಜಲು, ಗ್ರಾ.ಪಂ. ಸದಸ್ಯರಾದ ಉಷಾ ಮುಳಿಯ, ವನಿತಾ ಆರ್ತಿಲ, ಧನಂಜಯ ನಟ್ಟಿಬೈಲು, ರಮೇಶ್ ನಾಯ್ಕ, ಪ್ರಮುಖರಾದ ಎನ್. ಉಮೇಶ್ ಶೆಣೈ, ಚಂದಪ್ಪ ಮೂಲ್ಯ, ತಿಮ್ಮಪ್ಪ ಗೌಡ ಇಳಂತಿಲ, ಹರಿರಾಮಚಂದ್ರ, ಸದಾನಂದ ನೆಕ್ಕಿಲಾಡಿ, ಆದೇಶ್ ಶೆಟ್ಟಿ, ಪ್ರಸಾದ್ ಬಂಡಾರಿ, ಸುಜೀತ್ ಬೊಳ್ಳಾವು, ಅನಿಲ್ ಬಂಡಾಡಿ, ರಾಘವೇಂದ್ರ ನಾಯಕ್ ನಟ್ಟಿಬೈಲು, ಹರಿಪ್ರಸಾದ್ ಶೆಟ್ಟಿ, ಶರತ್ ಕೋಟೆ, ರಾಧಾಕೃಷ್ಣ ಭಟ್ ಬೊಳ್ಳಾವು ಮತ್ತಿತರರು ಉಪಸ್ಥಿತರಿದ್ದರು.