ಬಿಜೆಪಿ ಕಾರ್ಯಕರ್ತರ ಪಾರ್ಟಿ ಎಂಬುದು ಮತ್ತೆ ಸಾಬೀತಾಗಿದೆ; ಸತೀಶ್ ಕುಂಪಲ
ಪುತ್ತೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸ್ಥಳೀಯ ಪ್ರಾಧಿಕಾರ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ ವಿಧಾನಪರಿಷತ್ ಸದಸ್ಯರಾಗಿ ಚುನಾಯಿತರಾದ ಕಿಶೋರ್ ಕುಮಾರ್ ಪುತ್ತೂರು ಅವರಿಗೆ ಪುತ್ತೂರು ಬಿಜೆಪಿ ಮಂಡಲದ ವತಿಯಿಂದ ಅಭಿನಂದನಾ ಸಮಾರಂಭ ಅ.26ರಂದು ಇಲ್ಲಿನ ಜೈನ ಭವನದಲ್ಲಿ ನಡೆಯಿತು. ಇದಕ್ಕೂ ಮೊದಲು ದರ್ಬೆಯಿಂದ ವೈಭವದ ವಿಜಯಯಾತ್ರೆ ನಡೆಸಲಾಯಿತು. ವಿಜಯಯಾತ್ರೆ ಬಳಿಕ ಕಿಶೋರ್ ಕುಮಾರ್ ಅವರು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರ ದರ್ಶನ ಪಡೆದು ಬಿಜೆಪಿ ಕಚೇರಿಗೆ ತೆರಳಿ ಅಲ್ಲಿ ಹಿರಿಯರ ಆಶೀರ್ವಾದ ಪಡೆದುಕೊಂಡು ಅಭಿನಂದನಾ ಸಮಾರಂಭಕ್ಕೆ ಆಗಮಿಸಿದರು.
ಬಿಜೆಪಿ ಕಾರ್ಯಕರ್ತರ ಪಾರ್ಟಿ ಎಂಬುದು ಮತ್ತೆ ಸಾಬೀತಾಗಿದೆ:
ಅಭಿನಂದನಾ ಸಮಾರಂಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಲ್ಲಿದ್ದ ಭಾವನೆಗಳಿಗೆ ಅರ್ಥ ಬರುವಂತೆ ವಿಧಾನಪರಿಷತ್ ಚುನಾವಣೆಯಲ್ಲಿ ಕಿಶೋರ್ ಕುಮಾರ್ ಆಯ್ಕೆ ನಡೆದಿದೆ. ಕಿಶೋರ್ ಅವರ ಆಯ್ಕೆಯಿಂದ ಅತ್ಯಂತ ಹೆಚ್ಚು ಸಂಭ್ರಮ ಪಡುವವರು ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷದ ಕಾರ್ಯಕರ್ತರು. ವಿಧಾನಪರಿಷತ್ ಚುನಾವಣೆಯಲ್ಲಿ ಜಾತಿ ನೋಡದೆಯೇ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಪಕ್ಷ ಅವಕಾಶ ಮಾಡಿಕೊಟ್ಟಿದೆ. ಬಿಜೆಪಿಯ ಎಲ್ಲಾ ಜನಪ್ರತಿನಿಽಗಳು ಕಿಶೋರ್ ಕುಮಾರ್ ಅವರನ್ನು ಗೆಲ್ಲಿಸುವ ಮೂಲಕ ಸಾಮಾನ್ಯ ಕಾರ್ಯಕರ್ತನೂ ಶಾಸಕನಾಗಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ಗೆಲುವಿನೊಂದಿಗೆ ಬಿಜೆಪಿ ಕಾರ್ಯಕರ್ತರ ಪಾರ್ಟಿ ಎಂಬುದನ್ನು ಜಿಲ್ಲೆ, ರಾಜ್ಯಕ್ಕೆ ತೋರಿಸಿ ಕೊಡುವ ಕೆಲಸ ಮಾಡಿದ್ದೇವೆ ಎಂದರು. ಕೋಟ ಶ್ರೀನಿವಾಸ ಪೂಜಾರಿ ಅವರು ಪಂಚಾಯತ್ ರಾಜ್ ವ್ಯವಸ್ಥೆಗೆ ನಿಜವಾದ ಅರ್ಥ ಬರುವ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಅವರ ಸ್ಥಾನವನ್ನು ಕಿಶೋರ್ ಕುಮಾರ್ ಮುಂದೆ ಗಟ್ಟಿಯಾಗಿ ನಿಂತು ಮುಂದುವರಿಸಲಿದ್ದಾರೆ. ಚುನಾವಣೆಯಲ್ಲಿ ಜಾತಿ, ಹಣದ ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದೆ ಎಂದು ಎಲ್ಲರೂ ಮಾತನಾಡುತ್ತಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ಕಳೆದ ಬಾರಿಗಿಂತ ಹೆಚ್ಚು ಮತಗಳಿಸುವ ಮೂಲಕ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಬಿಜೆಪಿಯ ನೆಲೆ ಗಟ್ಟಿಯಾಗಿದೆ ಎಂದು ತೋರಿಸಿಕೊಡುವ ಕೆಲಸವಾಗಿದೆ. ಹಿಂದುತ್ವದ ವಿಚಾರಕ್ಕೆ ಒತ್ತು ನೀಡುವ ಕಿಶೋರ್ ಕುಮಾರ್ ಅವರು ಮುಂದೆ ಹಿಂದುತ್ವಕ್ಕೆ ಮತ್ತಷ್ಟು ಶಕ್ತಿಕೊಡುವ ಕೆಲಸ ಮಾಡಲಿದ್ದಾರೆ ಎಂದು ಸತೀಶ್ ಕುಂಪಲ ಹೇಳಿದರು.
ನಮ್ಮ ವಿಚಾರ, ಕೆಲಸಕ್ಕೆ ಗೆಲುವು ಸಿಕ್ಕಿದೆ:
ವಿಧಾನಪರಿಷತ್ ಸದಸ್ಯ, ಜಿಲ್ಲಾ ಚುನಾವಣಾ ಉಸ್ತುವಾರಿ ಪ್ರತಾಪ್ಸಿಂಹ ನಾಯಕ್ ಅವರು ಮಾತನಾಡಿ, ಮಹಾಲಿಂಗೇಶ್ವರ ದೇವರ ಆಶೀರ್ವಾದ ಮತ್ತು ಜನರ ಆಶೀರ್ವಾದಿಂದ ಈಗ ನಾವೆಲ್ಲ ಸಂಭ್ರಮ ಪಡುವಂತಾಗಿದೆ. ಕಿಶೋರ್ ಕುಮಾರ್ ಅವರ ಗೆಲುವು ಮತ್ತು ನಮ್ಮ ಗೆಲುವು ಬೇರೆಯಲ್ಲ ಎಂಬ ಭಾವನೆಯ ಜೊತೆಗೆ ನಮ್ಮ ವಿಚಾರ ಮತ್ತು ನಾವು ಮಾಡಿದ ಕೆಲಸಕ್ಕೆ ಗೆಲುವು ಸಿಕ್ಕಿದೆ ಎಂದರು. ಕಿಶೋರ್ ಕುಮಾರ್ ಅವರು ಹುಟ್ಟಿ ಬೆಳದ ಊರಿನಲ್ಲಿ ಅಭಿನಂದನೆ ಸ್ವೀಕರಿಸುತ್ತಿರುವುದು ವಿಶೇಷವಾದ ಆನಂದವಾಗಿದೆ. ಚುನಾವಣೆಯಲ್ಲಿ ಸೋಲು-ಗೆಲುವು ಸಮಾನವಾಗಿ ಸ್ವೀಕರಿಸುವ ಪಕ್ಷ ಬಿಜೆಪಿ. ಸರಕಾರ ಬರುತ್ತದೆ ಹೋಗುತ್ತದೆ. ಆದರೆ ದೇಶ ಉಳಿಯಬೇಕೆಂಬ ಅಟಲ್ ಬಿಹಾರಿ ವಾಜಪೇಯಿ ಅವರ ಮಂತ್ರ ನಮಗೆ ಆದರ್ಶ. ಹಾಗಾಗಿ ಕಾಶ್ಮೀರದಲ್ಲಿ ಯಾರೂ ಗೆದ್ದಿರಬಹುದು. ಆದರೆ ಅಲ್ಲಿ ಪ್ರಜಾಪ್ರಭುತ್ವ ಗೆದ್ದಿದೆ ಎಂದು ಬಿಜೆಪಿ ಅತ್ಯಂತ ಹೆಮ್ಮೆಯಿಂದ ಹೇಳುತ್ತದೆ ಎಂದರು.
ಹಿಂದುತ್ವಕ್ಕಾಗಿ ಪೂರ್ಣ ಕೆಲಸ:
ವಿಧಾನಪರಿಷತ್ ನೂತನ ಶಾಸಕರಾಗಿ ಚುನಾಯಿತರಾದ ಕಿಶೋರ್ ಕುಮಾರ್ ಪುತ್ತೂರು ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಪಕ್ಷದ ಕಾರ್ಯಕರ್ತರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಪರಿವಾರ ಸಂಘಟನೆಗೆ ಹತ್ತಾರು ವರ್ಷ ನಿರಂತರವಾಗಿ ಸಮಯ ಕೊಟ್ಟಿರುವುದರಿಂದ ಈಗ ಬಿಜೆಪಿ ಸದೃಢವಾಗಿ ಬೆಳೆದಿದೆ. ಸಾಮಾನ್ಯ ಕಾರ್ಯಕರ್ತನಾಗಿದ್ದ ನನ್ನನ್ನು ಎತ್ತರದ ಸ್ಥಾನಕ್ಕೆ ಏರಲು ಪಕ್ಷದ ಎಲ್ಲರೂ ಕಾರಣೀಭೂತರು ಎಂದ ಅವರು, ಇದು ನನಗೆ ಸಂದ ಅಭಿನಂದನೆಯೆಲ್ಲ. ಕಾರ್ಯಕರ್ತರಿಗೆ ಸಲ್ಲಬೇಕು ಎಂದರು. ವಿಧಾನಪರಿಷತ್ನ ಸದಸ್ಯನಾಗಿ ಸ್ಥಳೀಯ ಪಂಚಾಯತ್ ಮತ್ತು ನಗರ ಪಂಚಾಯತ್ಗೆ ಹೆಚ್ಚಿನ ಶಕ್ತಿಯನ್ನು ತುಂಬುವ ಕೆಲಸ ಮಾಡುತ್ತೇನೆ. ಹಿಂದುತ್ವಕ್ಕಾಗಿ ಪೂರ್ಣ ಕೆಲಸ ಮಾಡಲಿದ್ದೇನೆ ಎಂದ ಅವರು, ದರ್ಬೆಯಿಂದ ಆರಂಭಗೊಂಡ ಮೆರವಣಿಗೆಯಲ್ಲಿ ನೂರಾರು ಹೂವಿನ ಹಾರ ಹಾಕಿದ್ದೀರಿ. ಈ ಹೂವಿನ ಹಾರದ ಪ್ರತಿಯೊಂದು ಎಸಳು ಸಹ ವ್ಯರ್ಥವಾಗದಂತೆ ಕೆಲಸ ಮಾಡುತ್ತೇನೆ. ಸ್ವಾರ್ಥ ಬಿಟ್ಟು ಹಿಂದುತ್ವವನ್ನು ಗಟ್ಟಿ ಮಾಡುವ ಹಾಗೂ ಹಿರಿಯರ ಶ್ರಮಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ. ದೇವಸ್ಥಾನದಲ್ಲಿ ಶ್ರೀ ದೇವರ ಪ್ರಸಾದ ರೂಪದಲ್ಲಿ ಹಾಕಿದ ಬಿಳಿ ಶಾಲಿನಲ್ಲಿ ಒಂದೂ ಕಲೆಯಾಗದಂತೆ ಬಿಜೆಪಿಗೆ ಒಂದೇ ಒಂದು ಕಪ್ಪು ಚುಕ್ಕಿ ಬಾರದ ರೀತಿಯಲ್ಲಿ ಜನರ ಸೇವೆಯನ್ನು ಜನಾರ್ದನ ಸೇವೆಯಂತೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಮತ್ತೊಮ್ಮೆ ಬಿಜೆಪಿ ಭದ್ರಕೋಟೆಯನ್ನು ಉಳಿಸಬೇಕು:
ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರುಮಾರು ಅವರು ಮಾತನಾಡಿ, ಪುತ್ತೂರಿನಲ್ಲಿ ಬಿಜೆಪಿಯ ಗತಕಾಲದ ಪರಂಪರೆಯನ್ನು ಮತ್ತೆ ತೋರಿಸುವ ಕೆಲಸ ಕಿಶೋರ್ ಕುಮಾರ್ ಅವರ ಮೂಲಕ ಆಗಿದೆ. ಹಿಂದುತ್ವಕ್ಕೆ ಧಕ್ಕೆ ಬಂದ ಅನೇಕ ಸಂದರ್ಭದಲ್ಲಿ ಕಿಶೋರಣ್ಣ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಗ್ರಾಮ ಪಂಚಾಯತ್, ನಗರ ಪಂಚಾಯತ್, ಪಟ್ಟಣ ಪಂಚಾಯತ್ನಲ್ಲಿ ಗೆದ್ದಂತಹ ಚುನಾಯಿತ ಪ್ರತಿನಿಧಿಗಳ ಜವಾಬ್ದಾರಿ ಯಾವ ರೀತಿ ಇದೆ ಎಂಬುದು ಕಿಶೋರ್ ಕುಮಾರ್ ಅವರನ್ನು ಗೆಲ್ಲಿಸುವ ಮೂಲಕ ತೋರಿಸಿ ಕೊಡುವ ಕೆಲಸ ಆಗಿದೆ. ಜೊತೆಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿಯ ಭದ್ರಕೋಟೆ ಎಂಬುದು ಸಾಬೀತಾಗಿದೆ ಎಂದರು. ಮುಂದೆ ಪಂಚಾಯತ್, ನಗರಸಭೆ, ಸಹಕಾರಿ ಕ್ಷೇತ್ರದ ಚುನಾವಣೆ ಬರಲಿದೆ. ಕಾರ್ಯಕರ್ತರು ಪುತ್ತೂರನ್ನು ಮತ್ತೆ ಬಿಜೆಪಿಯ ಭದ್ರಕೋಟೆಯನ್ನಾಗಿ ಮಾಡಬೇಕಾಗಿದೆ ಎಂದರು.
ಮಾಜಿ ಶಾಸಕರಾದ ಮಲ್ಲಿಕಾಪ್ರಸಾದ್, ಸಂಜೀವ ಮಠಂದೂರು, ಬಿಜೆಪಿ ದ.ಕ. ಜಿಲ್ಲಾ ಕಾರ್ಯದರ್ಶಿ ವಿದ್ಯಾ ಗೌರಿ, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ವಿಧಾನಪರಿಷತ್ ಪುತ್ತೂರು ಚುನಾವಣಾ ಸಮಿತಿ ಸಂಚಾಲಕ ನಿತೀಶ್ಕುಮಾರ್ ಶಾಂತಿವನ, ಸಹಸಂಚಾಲಕ ಸಂತೋಷ್ ರೈ ಕೈಕಾರ, ನಗರಸಭೆ ಅಧ್ಯಕ್ಷೆ ಲೀಲಾವತಿ ಕೃಷ್ಣನಗರ, ರಾಜ್ಯ ಹಿಂದುಳಿದ ಮೋರ್ಚಾ ಕಾರ್ಯದರ್ಶಿ ಆರ್.ಸಿ.ನಾರಾಯಣ, ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಹರೀಶ್ ಬಿಜತ್ರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೌರಿ ಬನ್ನೂರು ಪ್ರಾರ್ಥಿಸಿದರು. ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರು ಸ್ವಾಗತಿಸಿದರು. ಉಪಾಧ್ಯಕ್ಷ ಸುನಿಲ್ ದಡ್ಡು ಕಾರ್ಯಕ್ರಮ ನಿರೂಪಿಸಿದರು. ಡಾ.ಎಂ.ಕೆ ಪ್ರಸಾದ್, ಹಿರಿಯರಾದ ಎಸ್ ಅಪ್ಪಯ್ಯ ಮಣಿಯಾಣಿ, ಚನಿಲ ತಿಮ್ಮಪ್ಪ ಶೆಟ್ಟಿ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ಬಿಜೆಪಿ ಗ್ರಾಮಾಂತರ ಮಂಡಲದ ನಿಕಟಪೂರ್ವ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ನಿಕಟಪೂರ್ವ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಬೂಡಿಯಾರು ರಾಧಾಕೃಷ್ಣ ರೈ, ಚಂದ್ರಶೇಖರ್ ರಾವ್ ಬಪ್ಪಳಿಗೆ, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ವಿರೂಪಾಕ್ಷ ಭಟ್, ಗ್ರಾಮಾಂತರ ಮಂಡಲದ ಯುವ ಮೋರ್ಚಾ ಅಧ್ಯಕ್ಷ ಶಿಶಿರ್ ಪೆರ್ವೋಡಿ, ನಗರ ಮಂಡಲದ ಯುವ ಮೋರ್ಚಾ ಅಧ್ಯಕ್ಷ ನಿತೀಶ್ ಕಲ್ಲೇಗ, ನಗರಸಭೆ ಮಾಜಿ ಅಧ್ಯಕ್ಷ ಕೆ.ಜೀವಂಧರ್ ಜೈನ್, ಪುಡಾ ಮಾಜಿ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಸುರೇಶ್ಚಂದ್ರ ರೈ, ಮೋಹನ್ ರೈ ನರಿಮೊಗರು, ಕಡಮಜಲು ವಿಪುಲ ರೈ, ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು, ಸುಂದರ ಪೂಜಾರಿ ಬಡಾವು, ಹಿಂದೂ ಜಾಗರಣ ವೇದಿಕೆಯ ದಿನೇಶ್ ಪಂಜಿಗ, ಅಜಿತ್ ರೈ ಹೊಸಮನೆ, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಕೋಡಿಬೈಲು, ಪ್ರಶಾಂತ್ ಎನ್, ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್, ಯತೀಂದ್ರ ಕೊಚ್ಚಿ, ದಿವ್ಯಾ ಪುರುಷೋತ್ತಮ, ವಿದ್ಯಾಧರ ಜೈನ್, ಕುಮಾರ ನರಸಿಂಹ ಭಟ್, ಕಾರ್ಯದರ್ಶಿಗಳಾದ ಶ್ರೀಕೃಷ್ಣ, ರತನ್ ರೈ ಕುಂಬ್ರ, ಪ್ರೀತಂ ಪೂಂಜ, ಪುನೀತ್ ಮಾಡತ್ತಾರು, ಸೌಮ್ಯ ಬಾಲಸುಬ್ರಹ್ಮಣ್ಯ, ಕೋಶಾಽಕಾರಿ ನಹುಷ ಪಿ.ವಿ, ಅಶೋಕ್ ಮೂಡಂಬೈಲು, ನಗರ ಮಂಡಲದ ಉಪಾಧ್ಯಕ್ಷರಾದ ಸತೀಶ್ ನಾಯಕ್, ವಸಂತ ಲಕ್ಷ್ಮೀ, ಶ್ಯಾಮ್, ಹರೀಶ್ ಆಚಾರ್ಯ, ಕಾರ್ಯದರ್ಶಿಗಳಾದ ಸುರೇಶ್ಚಂದ್ರ ರೈ, ಅನ್ನಪೂರ್ಣ ರಾವ್, ಶಶಿಧರ್ ನಾಯಕ್, ಪದ್ಮನಾಭ ನಾಯ್ಕ್, ದಯಾನಂದ ಆಚಾರ್ಯ, ರೂಪೇಶ್ ಕುಮಾರ್, ಖಜಾಂಜಿ ಶ್ರೀಧರ್ ಗೌಡ ಕಣಜಾಲು, ಕಚೇರಿ ಕಾರ್ಯದರ್ಶಿ ಗೋವರ್ಧನ್, ಜಯಂತಿ ನಾಯಕ್, ಬಿಜೆಪಿ ಹಿಂದುಳಿದ ಮೋರ್ಚಾದ ಅಧ್ಯಕ್ಷ ರಾಜೇಶ್, ಮಹಿಳಾ ಮೋರ್ಚಾದ ಅಧ್ಯಕ್ಷೆ ಯಶೋಧಾ ಗೌಡ, ಎಸ್.ಟಿ.ಮೋರ್ಚಾದ ಅಧ್ಯಕ್ಷ ಬಾಲಕೃಷ್ಣ, ಮಹೇಶ್ ಕೇರಿ, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಸ್ವರ್ಣಲತಾ ಹೆಗ್ಡೆ, ಹಿಂದುಳಿದ ಮೋರ್ಚಾ ಅಧ್ಯಕ್ಷ ದಿನೇಶ್ ಪೂಜಾರಿ, ಎಸ್.ಸಿ ಮೋರ್ಚಾದ ಅಧ್ಯಕ್ಷ ನಾರಾಯಣ ಕೇಪುಳು, ಎಸ್.ಟಿ.ಮೋರ್ಚಾ ಅಧ್ಯಕ್ಷ ನಾರಾಯಣ, ನಾಗೇಂದ್ರ ಬಾಳಿಗ, ಗಣೇಶ್, ಪುರಸಭೆ ಮಾಜಿ ಉಪಾಧ್ಯಕ್ಷ ವಿನಯ ಭಂಡಾರಿ, ಸುರೇಶ್ ಅತ್ರಮಜಲು, ಪುರುಷೋತ್ತಮ ಮುಂಗ್ಲಿಮನೆ, ವಿಜಯ ಕೋರಂಗ, ಲೋಕೇಶ್ ಹೆಗ್ಡೆ, ನಾಗೇಶ್ ಟಿ.ಎಸ್., ವಿನಯ ಕಲ್ಲೇಗ, ನವೀನ್ ರೈ ಕೈಕಾರ, ಮುಕುಂದ ಬಜತ್ತೂರು, ಪ್ರೇಮನಾಥ ಶೆಟ್ಟಿ ಪನಡ್ಕ, ಅಶೋಕ್ ಮೂಡಂಬೈಲು ಸಹಿತ ಹಲವಾರು ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಹೆಚ್ ನಾಗೇಶ್ ಪ್ರಭು, ಅನಿಲ್ ತೆಂಕಿಲ, ಉಪಾಧ್ಯಕ್ಷ ಯುವರಾಜ್ ಕೆ. ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ಸದಸ್ಯರು, ನಗರಸಭೆ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು ಕಿಶೋರ್ ಕುಮಾರ್ ಅವರಿಗೆ ಮಾಲಾರ್ಪಣೆ ಮಾಡಿ ಅಭಿನಂದನೆ ಸಲ್ಲಿಸಿದರು.
24 ಅಡಿಯ ಬೃಹದಾಕಾರದ ಮಾಲೆ
ಕಿಶೋರ್ ಕುಮಾರ್ ಅವರ ವಿಜಯಯಾತ್ರೆ ದರ್ಬೆ ವೃತ್ತ ತಲುಪುತ್ತಿದ್ದಂತೆ ಅವರ ಕಾಲೇಜು ಬ್ಯಾಚ್ಮೇಟ್ ರಾಮ್ದಾಸ್ ವಿಟ್ಲ ಮತ್ತು ಸಂತೋಷ್ ಕೈಕಾರ ಅವರ ನೇತೃತ್ವದಲ್ಲಿ ಸಿದ್ದಗೊಂಡ 24 ಅಡಿಯ ಬೃಹದಾಕಾರದ ಹೂವಿನ ಮಾಲೆಯನ್ನು ಕಾರ್ಯಕರ್ತರೊಂದಿಗೆ ವಿಟ್ಲದ ವಿಘ್ನೇಶ್ವರ ಕ್ರೈನ್ ಬಳಸಿ ಅರ್ಪಣೆ ಮಾಡಲಾಯಿತು. ಈ ಸಂದರ್ಭ ಬಿಜೆಪಿ ಕಾರ್ಯಕರ್ತರು ಕಿಶೋರ್ ಅವರ ಅಭಿಮಾನಿಗಳು ಜೊತೆಯಲ್ಲಿ ನಿಂತು ಬೃಹತ್ ಮಾಲೆಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು.
ಕಬಕದಲ್ಲಿ ಸ್ವಾಗತ, ದರ್ಬೆಯಿಂದ ವಿಜಯಯಾತ್ರೆ, ದೇವಳದಲ್ಲಿ ಪ್ರಾರ್ಥನೆ:
ಮಂಗಳೂರಿನಿಂದ ಆಗಮಿಸಿದ ಕಿಶೋರ್ ಕುಮಾರ್ ಪುತ್ತೂರು ಅವರನ್ನು ಬೆಳಿಗ್ಗೆ ಕಬಕ ಜಂಕ್ಷನ್ನಲ್ಲಿ ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿದರು. ಅಲ್ಲಿಂದ ವಾಹನ ಜಾಥಾದ ಮೂಲಕ ಕರೆತರಲಾಯಿತು. ದಾರಿಮಧ್ಯೆ ನೆಹರುನಗರ ವಿವೇಕಾನಂದ ಕಾಲೇಜು ಕ್ಯಾಂಪಸ್ ಬಳಿ ಹಾರಾರ್ಪಣೆ ಸ್ವೀಕರಿಸಿದ ಕಿಶೋರ್ ಕುಮಾರ್ ಅವರು ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ದೈವ ದೇವರಿಗೆ ಹೂವಿನ ಹಾರ ಸಮರ್ಪಿಸಿದರು. ಬಳಿಕ ಬೈಪಾಸ್ ತೆಂಕಿಲ ವಿವೇಕಾನಂದ ಶಾಲೆಯ ಬಳಿ ಆಡಳಿತ ಮಂಡಳಿಯವರಿಂದ ಮತ್ತು ಶಿಕ್ಷಕರಿಂದ ಹಾರಾರ್ಪಣೆ ಸ್ವೀಕರಿಸಿದರು. ನಂತರ ದರ್ಬೆ ಬೈಪಾಸ್ ಬಳಿಯಿಂದ ತೆರೆದ ವಾಹನದಲ್ಲಿ ವಿಜಯಯಾತ್ರೆ ಆರಂಭಗೊಂಡಿತ್ತು. ದಾರಿಯುದ್ಧಕ್ಕೂ ಸಾವಿರಾರು ಮಂದಿ ಕಾರ್ಯಕರ್ತರು, ಉದ್ಯಮಿಗಳು ಕಿಶೋರ್ ಕುಮಾರ್ ಅವರಿಗೆ ಹಾರಾರ್ಪಣೆ, ಪುಷ್ಪಾರ್ಚನೆ ಮಾಡಿ ಅಭಿನಂದಿಸಿದರು.
ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ದೇವರ ದರ್ಶನ ಪಡೆದು ಅಲ್ಲಿಂದ ಕಾಲ್ನಡಿಗೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿದರು. ದಾರಿ ಮಧ್ಯೆ ವಿಹಿಂಪ ಕರ್ನಾಟಕ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಯು. ಪೂವಪ್ಪ ಅವರ ಆಶೀರ್ವಾದ ಪಡೆದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸತ್ಯ, ಧರ್ಮ ನಡೆಯಲ್ಲಿ ಪ್ರಾರ್ಥನೆ ಮಾಡಿದರು. ಶ್ರೀ ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ದೇವಳದ ಶಲ್ಯ ತೊಡಿಸಿ ಗೌರವಿಸಿದರು. ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಪ್ರಾರ್ಥಿಸಿದರು. ಬಿಜೆಪಿ ಕಚೇರಿಯಲ್ಲಿ ಶ್ರೀ ದೇವರ ಫೋಟೋದ ಮುಂದೆ ಪ್ರಾರ್ಥನೆ ಬಳಿಕ, ಹಿರಿಯರ ಆಶೀರ್ವಾದ ಪಡೆದು ಜೈನ ಭವನದಲ್ಲಿ ಅಭಿನಂದನಾ ಸಭೆಯಲ್ಲಿ ಪಾಲ್ಗೊಂಡರು.
ಹಿಂದಿನ ಕಾಂಗ್ರೆಸ್ ಈಗಿಲ್ಲ
ಮಹಾತ್ಮಗಾಂಧಿ, ವಿನೋದಾಭಾವೆಯವರು ಭೂ ದಾನ ಚಳುವಳಿಯನ್ನು ಸ್ವತಃ ತಾವೇ ಮಾಡಿ ಆದರ್ಶವನ್ನು ತೋರಿಸಿದ್ದರು. ಈಗಿರುವ ಕಾಂಗ್ರೆಸ್ ಭೂ ಕಬಳಿಕೆಯ ಕಾಂಗ್ರೆಸ್ ಆಗಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಜೊತೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ನೇತಾರರೂ ಭೂ ಕಬಳಿಕೆ ಮಾಡಿದ್ದಾರೆ. ಮುಂದಿನ ಪ್ರಧಾನಮಂತ್ರಿ ಎಂದು ಕನಸು ಕಾಣುತ್ತಿರುವ ತಾಯಿ-ಮಗನೂ ಭೂ ಕಬಳಿಕೆಯಲ್ಲಿ ತೊಡಗಿದ್ದಾರೆ. ಮಧ್ಯಪ್ರದೇಶ, ರಾಜಾಸ್ಥಾನದ ಮುಖ್ಯಮಂತ್ರಿ ಭೂಕಬಳಿಕೆಯಲ್ಲಿದ್ದಾರೆ. ಜಾತಿಯ ಹೆಸರಿನಲ್ಲಿ ಬೇಧ, ಭ್ರಷ್ಟಾಚಾರವೇ ಮೂಲಮಂತ್ರವಾಗಿರುವ ಕಾಂಗ್ರೆಸ್ ಒಂದು ಕಡೆಯಾದರೆ ಇನ್ನೊಂದು ಕಡೆ ಭಾರತೀಯತೆಯನ್ನು ಹಿಂದುತ್ವದ ಹೆಸರಿನಲ್ಲಿ ಒಂದು ಮಾಡುವ, ರಾಷ್ಟ್ರ ಸಮರ್ಪಿತ ಭಾವನೆಯಲ್ಲಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಜನರು ನಂಬಿದ್ದಾರೆ.
-ಪ್ರತಾಪ್ ಸಿಂಹ ನಾಯಕ್ ವಿಧಾನಪರಿಷತ್ ಸದಸ್ಯರು
ಮತದಾರರನ್ನು ಪಕ್ಷದ ಕಾರ್ಯಕರ್ತರನ್ನಾಗಿಸಿ
6 ವರ್ಷಕ್ಕೊಮ್ಮೆ ಬರುವ ಸದಸ್ಯತ್ವ ಅಭಿಯಾನದಲ್ಲಿ ನಮ್ಮೆಲ್ಲಾ ಮತದಾರರನ್ನು ಪಕ್ಷದ ಕಾರ್ಯಕರ್ತರನ್ನಾಗಿ ಮಾಡಬೇಕು. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಸದಸ್ವತ್ವ ಅಭಿಯಾನದಲ್ಲಿ ಸುಮಾರು 33 ಸಾವಿರ ಕಾರ್ಯಕರ್ತರ ಸೇರ್ಪಡೆಯಾಗಿದೆ. ಇನ್ನೂ 25 ಸಾವಿರ ಸದಸ್ಯತ್ವವನ್ನು ಮಾಡಲಿದ್ದೇವೆ. ನಾವು ಮಾತಿಗಿಂತ ಸಂಘಟನೆಗೆ ಹೆಚ್ಚು ಒತ್ತು ಕೊಡಬೇಕು. ಕಾರ್ಯಕರ್ತರು ತಮ್ಮ ಗ್ರಾಮದಲ್ಲಿ ಮತದಾರರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ಕೆಲಸ ಮಾಡಬೇಕು. ಅತ್ಯಂತ ಉತ್ಸಾಹದಿಂದ ಈ ಕೆಲಸ ಮಾಡಬೇಕು.
-ದಯಾನಂದ ಶೆಟ್ಟಿ ಉಜಿರುಮಾರು ಅಧ್ಯಕ್ಷರು, ಬಿಜೆಪಿ ಗ್ರಾಮಾಂತರ ಮಂಡಲ