ಪುತ್ತೂರು: ಕಳ್ಳತನವನ್ನು ತಡೆಯುವ ಬದಲು ಕಳ್ಳರಿಗೂ ಬಂಪರ್ ಆಫರ್ ನೀಡುವ ಮೂಲಕ ಕಳ್ಳತನಕ್ಕೆ ಪ್ರಚೋದನೆ ನೀಡುವ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಸ್ತೆ ಮಧ್ಯೆಯೇ ಬೀಡಾಡಿಕೊಂಡಿರುವ ಆಡುಗಳಿಂದಾಗಿ ವಾಹನ ಸವಾರರಿಗೆ ಆಗುವ ತೊಂದರೆ ಆಗುವುದನ್ನು ತಪ್ಪಿಸಲು ಆಡಿನ ಮಾಲಕರು ಆಡುಗಳನ್ನು ರಸ್ತೆಗೆ ಬಿಡದಂತೆ ಎಚ್ಚರ ವಹಿಸಲು ಈ ರೀತಿಯ ಕಳ್ಳತನಕ್ಕೆ ಆಫರ್ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಸಾಲ್ಮರದ ಕೆರೆಮೂಲೆ ಜಂಕ್ಷನ್ ಆಸು ಪಾಸಿನಲ್ಲಿ ಅಂದಾಜು 10 ರಿಂದ 15 ಆಡುಗಳು ರಸ್ತೆಯಲ್ಲೇ ಸುತ್ತಾಡಿಕೊಂಡು ವಾಹನ ಸವಾರರಿಗೆ, ಸಾರ್ವಜನಿಕರಿಗೆ ಮತ್ತು ಸ್ಥಳೀಯ ನಿವಾಸಿಗಳಿಗೆ ತೊಂದರೆ ಕೊಡುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಕುರಿತು ಸಂಬಂಧಿಸಿವರಿಗೆ ತಿಳಿಸಿದರೂ ಯಾರೂ ಆಡುಗಳ ಉಪಟಳಕ್ಕೆ ಕಡಿವಾಣ ಹಾಕಿಲ್ಲ ಎಂದು ನೊಂದ ವ್ಯಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ಆಡು ಕಳ್ಳತನ ಮಾಡುವವರಿಗೆ ಆಫರ್ ನೀಡಿದ್ದಾರೆ.
’ಯಾವುದೇ ಮಾಲೀಕರು ಇಲ್ಲದೆ ಸಾಲ್ಮರ-ಕೆರೆಮೂಲೆ-ತಾರಿಗುಡ್ಡೆ-ಜಿಡೆಕಲ್ಲು ಆಸುಪಾಸಿನಲ್ಲಿ ಅಲೆದಾಡುತ್ತಿದ್ದು ವಾಹನ ಚಾಲಕರಿಗೆ,ಸಾರ್ವಜನಿಕರಿಗೆ ಮತ್ತು ಸ್ಥಳೀಯ ನಿವಾಸಿಗಳಿಗೆ ಬಾರೀ ತೊಂದರೆಯನ್ನು ಕೊಡುತ್ತಿದೆ.ಆದುದರಿಂದ ಆಡುಗಳನ್ನು ಯಾರದರೂ ಕದ್ದುಕೊಂಡು ಹೋಗಬೇಕಾಗಿ ಆಡು ಕಳ್ಳರಲ್ಲಿ ಈ ಮೂಲಕ ವಿನಂತಿ ಮತ್ತು ಈ ಆಡನ್ನು ಕದಿಯಲು ಊರಿನವರ ಸಂಪೂರ್ಣ ಸಹಕಾರ ಇರುತ್ತದೆ ಮತ್ತು ಈ ಬಗ್ಗೆ ದೂರು ಕೊಡಲು ಇದಕ್ಕೆ ಯಾವುದೇ ಮಾಲಕರು ಇರುವುದಿಲ್ಲ’ ಎಂದೂ ಸಾಮಾಜಿಕ ಜಾಲತಾಣದಲ್ಲಿ ಬರೆಯಲಾಗಿದೆ. ಇದರ ಜೊತೆಗೆ ಆಡುಗಳು ಇರುವ ಸ್ಥಳ ಮತ್ತು ಗುರುತುಗಳನ್ನೂ ತಿಳಿಸುವ ಮೂಲಕ ಆಡು ಕಳ್ಳರಿಗೆ ಆಫರ್ ನೀಡಿರುವುದು ವೈರಲ್ ಆಗುತ್ತಿದೆ.