ಕಾಣಿಯೂರು: ಪ್ರಗತಿ ವಿದ್ಯಾ ಸಂಸ್ಥೆ ಕಾಣಿಯೂರಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಶಾಲಾ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿಯವರು ಪ್ರಾರಂಭದಲ್ಲಿ ರಾಷ್ಟ್ರಧ್ವಜವನ್ನು ಅವರೋಹಣ ಮಾಡಿ ಬಳಿಕ ನಾಡಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡಿಗರಾದ ನಾವು ಕನ್ನಡವನ್ನು ಸಮೃದ್ಧವಾಗಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಮಾತ್ರಭಾಷೆಯಲ್ಲಿಯೇ ವ್ಯವಹರಿಸಬೇಕು.
ಕನ್ನಡದ ಉಳಿವು ನಮ್ಮ ಕೈಯಲ್ಲಿದೆ ಎಂದರಲ್ಲದೆ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಶಾಲಾ ಆಡಳಿತ ಅಧಿಕಾರಿ ವಸಂತ ರೈ ಕಾರ್ಕಳ ಮಾತನಾಡಿ, ನಾವೆಲ್ಲಿದ್ದರೂ ಕನ್ನಡತನವನ್ನು, ಈ ಮಣ್ಣಿನ ಸಂಸ್ಕೃತಿಯನ್ನು ಮರೆಯದೆ ಕನ್ನಡಾಂಬೆಯ ಋಣವನ್ನು ತೀರಿಸಬೇಕು ಎಂದರು. ಮುಖ್ಯಗುರು ನಾರಾಯಣ ಭಟ್ ಸಂದರ್ಭೋಚಿತವಾಗಿ ಮಾತನಾಡಿದರು. ಕನ್ನಡ ಮಾಧ್ಯಮದ ಮುಖ್ಯಸ್ಠೆ ವಿನಯ ವಿ ಶೆಟ್ಟಿ ತಾಯಿ ಭುವನೇಶ್ವರಿಯ ಹಿರಿಮೆಯ ಬಗ್ಗೆ ಮಾತನಾಡಿದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದವರು ರಾಷ್ಟ್ರಗೀತೆ, ನಾಡಗೀತೆ ಮತ್ತು ಕನ್ನಡಾಭಿಮಾನದ ಗೀತೆಗಳನ್ನು ಸಾಮೂಹಿಕವಾಗಿ ಹಾಡಿದರು.
ಕನ್ನಡ ಶಿಕ್ಷಕಿಯರಾದ ಅನಿತಾ ಎಸ್ ರೈ ಮತ್ತು ಸುಷ್ಮಾ ಎಚ್ ರೈ ಕಾರ್ಯಕ್ರಮವನ್ನು ಸಂಘಟಿಸಿದರು.