ಪುತ್ತೂರು: ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ತಲೆ ಬುರುಡೆ ಹಾಗೂ ಎಲುಬುಗಳು ಒಳಮೊಗ್ರು ಗ್ರಾಮದ ಉರ್ವದಲ್ಲಿ ನ.3ರಂದು ಪತ್ತೆಯಾಗಿದೆ. ಉರ್ವ ನಿವಾಸಿ ಸಂಜೀವ ಎಂಬವರ ಪತ್ನಿ ನಳಿನಿ ಎಂಬಾಕೆ ತನ್ನ ಮನೆಯ ಎದುರಿನ ಕಾಡೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಇದು ಮನೆಯವರಿಗೆ ಒಂದು ತಿಂಗಳ ಬಳಿಕ ಗೊತ್ತಾಗಿದ್ದು ಈ ವೇಳೆ ಮಹಿಳೆಯ ತಲೆ ಬುರುಡೆ ಹಾಗೂ ಕೈ, ಕಾಲುಗಳ ಎಲುಬು ಪತ್ತೆಯಾಗಿದೆ. ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿದ್ದು ತಲೆ ಬುರುಡೆ ಹಾಗೂ ಎಲುಬುಗಳನ್ನು ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ.
ಘಟನೆಯ ವಿವರ
ಉರ್ವ ನಿವಾಸಿ ಸಂಜೀವ ಎಂಬವರು ಕನ್ಯಾನದಿಂದ ನಳಿನಿ ಎಂಬವರನ್ನು ಒಂದೂವರೆ ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಂಡಿದ್ದರು. ನಳಿನಿಯವರು ಆಗಾಗ ತನ್ನ ತಾಯಿ ಮನೆಗೆ ಹೋಗುತ್ತಿದ್ದರು ಎಂದು ಹೇಳಲಾಗಿದ್ದು, ಕಳೆದ ಒಂದು ತಿಂಗಳ ಹಿಂದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಸಂಜೀವರವರು ಅ.8ರಂದು ಸಂಪ್ಯ ಪೊಲೀಸ್ ಠಾಣೆಗೆ ತೆರಳಿ ತನ್ನ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ತಿಳಿಸಿದ್ದರು. ಪತ್ನಿಯ ಫೋಟೋ ತರುವಂತೆ ಠಾಣೆಯಲ್ಲಿ ತಿಳಿಸಿದ್ದರು. ಆದರೆ ಆ ಬಳಿಕ ಸಂಜೀವರವರು ಠಾಣೆಗೆ ತೆರಳಿ ದೂರು ನೀಡಿರಲಿಲ್ಲ ಎಂದು ಹೇಳಲಾಗಿದೆ.
ಗುಡ್ಡದಲ್ಲಿ ತಲೆ ಬುರುಡೆ, ಎಲುಬು ಪತ್ತೆ
ನಳಿನಿಯವರು ತನ್ನ ತವರು ಮನೆಗೂ ಹೋಗದೇ ನಾಪತ್ತೆಯಾಗಿರುವ ವಿಷಯ ತಿಳಿದು ತವರು ಮನೆಯವರು ಉರ್ವದ ಸಂಜೀವರವರ ಮನೆಯ ಸುತ್ತಮುತ್ತ ನ.2ರಂದು ಸಂಜೆ ಬಂದು ಹುಡುಕಾಡಿದ್ದಾರೆ. ಈ ವೇಳೆ ಮನೆಯ ಎದುರಿನ ಗುಡ್ಡದ ತುದಿಯಲ್ಲಿ ಮರವೊಂದಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ ಹಗ್ಗ ಇದ್ದು ಹಗ್ಗದಲ್ಲಿ ತಲೆ ಕೂದಲು ಪತ್ತೆಯಾಗಿದೆ. ಹಗ್ಗದ ಕೆಳಗೆ ತಲೆ ಬುರುಡೆ ಹಾಗೂ ಕೈ ಮತ್ತು ಕಾಲಿನ ಎಲುಬುಗಳು ಪತ್ತೆಯಾಗಿದೆ.
ಸ್ಥಳಕ್ಕೆ ತಹಶೀಲ್ದಾರ್ ಪುರಂದರ ಹೆಗ್ಡೆ, ಕೇಸ್ ವರ್ಕರ್ ಸುನೀಲ್, ಆರ್.ಐ ಗೋಪಾಲ್ ಕೆ.ಟಿ, ಸಂಪ್ಯ ಪಿಎಸ್‌ಐ ತನಿಖಾ ವಿಭಾಗದ ಸುಷ್ಮಾ ಭಂಡಾರಿ ಹಾಗೂ ಸಿಬ್ಬಂದಿಗಳು, ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಗ್ರಾಮ ಸಹಾಯಕ ದೀಪಕ್, ಗ್ರಾ.ಪಂ ಸದಸ್ಯ ವಿನೋದ್ ಶೆಟ್ಟಿ ಮುಡಾಲ, ಅಶೋಕ್ ಪೂಜಾರಿ ಬೊಳ್ಳಾಡಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.