ಹೆಬ್ಬಾವು ಹಿಡಿದು ಸಾಹಸ ಮೆರೆದ ಕುಪ್ಪೆಟ್ಟಿಯ ಶೋಭಾ-ನೇತ್ರಾವತಿ ಆಟೋ ರಿಕ್ಷಾ ಚಾಲಕ- ಮಾಲಕ ಸಂಘದಿಂದ ಸನ್ಮಾನ

0

ಉಪ್ಪಿನಂಗಡಿ: ಬೃಹದ್ದಾಕಾರದ ಹೆಬ್ಬಾವೊಂದನ್ನು ಸೆರೆ ಹಿಡಿದು ಸಾಹಸ ಮೆರೆದ ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಕುಪ್ಪೆಟ್ಟಿಯ ಕಲ್ಪಣೆ ನಿವಾಸಿ ಶೋಭಾ ಅವರನ್ನು ಉಪ್ಪಿನಂಗಡಿಯ ನೇತ್ರಾವತಿ ಆಟೋ ರಿಕ್ಷಾ- ಚಾಲಕ ಮಾಲಕ ಸಂಘದವರು ನ.5ರಂದು ಸನ್ಮಾನಿಸಿ ಗೌರವಿಸಿದರು.


ನ.3ರಂದು ಕುಪ್ಪೆಟ್ಟಿ ಸಮೀಪದ ನೆಕ್ಕಿಲು ಜಾರಿಗೆದಡಿ ಎಂಬಲ್ಲಿ ಬೆಕ್ಕೊಂದನ್ನು ಹೆಬ್ಬಾವು ಹಿಡಿದು ನುಂಗಲು ಯತ್ನಿಸುತ್ತಿತ್ತು. ಈ ವೇಳೆ ಬಂದ ಕರೆಗೆ ಸ್ಪಂದಿಸಿದ ಶೋಭಾ ಸ್ಥಳಕ್ಕೆ ತೆರಳಿ ಹೆಬ್ಬಾವಿನ ಹಿಡಿತದಿಂದ ಬೆಕ್ಕನ್ನು ರಕ್ಷಿಸಿದ್ದಲ್ಲದೆ, ಹೆಬ್ಬಾವನ್ನು ಸೆರೆ ಹಿಡಿದು ಗೋಣಿಗೆ ತುಂಬಿಸಿದ್ದರು. ಇದನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿದ್ದು, ನ.4ರಂದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಇವರ ಈ ದಿಟ್ಟತನಕ್ಕೆ ಎಲ್ಲೆಡೆಯಿಂದ ಪ್ರಶಂಸೆಯ ಮಾತುಗಳು ಕೇಳಿ ಬರತೊಡಗಿದವು. ಆದರೆ ಶೋಭಾ ಎಲ್ಲಿಯವರೆಂಬ ಬಗ್ಗೆ ಮಾತ್ರ ನಿಖರತೆ ಇರದೇ, ಅವರು ಅಲ್ಲಿಯವರು, ಇಲ್ಲಿಯವರು ಎಂದು ಸುದ್ದಿಯಾಗಿತ್ತು. ಆದರೆ ಇವರು ಕುಪ್ಪೆಟ್ಟಿಯ ಕಲ್ಪಣೆ ನಿವಾಸಿಯಾಗಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುರುವಾಯನಕೆರೆ ಕಚೇರಿ ವ್ಯಾಪ್ತಿಯ ತಣ್ಣೀರುಪಂತ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕಿ.

ಶೋಭಾ ಅವರು ಐದು ವರ್ಷಗಳಿಂದ ತಮ್ಮ ಊರಿನ ಸುತ್ತಮುತ್ತಲಿನ ಪ್ರದೇಶದಲ್ಲಿ 900ಕ್ಕೂ ಅಧಿಕ ಹಾವುಗಳನ್ನು ಹಿಡಿದು ರಕ್ಷಿಸಿದ್ದಾರೆ. ಇವರ ಈ ಸಾಹಸವನ್ನು ಮೆಚ್ಚಿ ನೇತ್ರಾವತಿ ಆಟೋ ರಿಕ್ಷಾ- ಚಾಲಕ ಮಾಲಕ ಸಂಘದವರು ಇವರನ್ನು ಸನ್ಮಾನಿಸಿ, ಗೌರವಿಸಿದ್ದಾರೆ.


ಈ ಸಂದರ್ಭ ಉಪ್ಪಿನಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ರಿಕ್ಷಾ- ಚಾಲಕ ಮಾಲಕ ಸಂಘದ ಗೌರವಾಧ್ಯಕ್ಷ ಶಬೀರ್ ಕೆಂಪಿ, ಸಲಹಾ ಸಮಿತಿಯ ಸದಸ್ಯ ಅಬ್ದುರ್ರಹ್ಮಾನ್ ಯುನಿಕ್, ಅಧ್ಯಕ್ಷ ಫಾರೂಕ್ ಜಿಂದಗಿ, ಪ್ರಧಾನ ಕಾರ್ಯದರ್ಶಿ ಅಶೋಕ್ ಬಂಡಾಡಿ, ಕೋಶಾಧಿಕಾರಿ ಕಲಂದರ್ ಶಾಫಿ ನೆಕ್ಕಿಲಾಡಿ, ಉಪಾಧ್ಯಕ್ಷ ಅಣ್ಣಿ ಮಲ್ಲಕಲ್ಲು, ಸಂಘಟನಾ ಕಾರ್ಯದರ್ಶಿ ಅಬ್ದುಲ್ ಮಜೀದ್, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here