ಉಪ್ಪಿನಂಗಡಿ: ಪುಟಾಣಿಯೋರ್ವಳಿಗೆ ನೆರೆಮನೆಯಾತ ಲೈಂಗಿಕ ಕಿರುಕುಳ ನಿಡಿದ ಪ್ರಕರಣವನ್ನು ತ್ವರಿತ ವಿಚಾರಣೆಗೆ ಒಳಪಡಿಸಿದ ನ್ಯಾಯಾಲಯವು ವಿಚಾರಣೆ ವೇಳೆ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿಗೆ 3 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ನಾಲ್ಕು ವರ್ಷ 5 ತಿಂಗಳು ಪ್ರಾಯದ ಹೆಣ್ಣು ಮಗುವಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ನಿವಾಸಿಯಾಗಿರುವ ಸಂಜೀವ ನಾಯ್ಕ (57) ಶಿಕ್ಷೆಗೆ ಒಳಪಟ್ಟ ಅಪರಾಧಿಯಾಗಿದ್ದು, ಈತ 2024ರ ಜನವರಿ.23ರಂದು ತನ್ನ ನೆರೆಮನೆ ನಿವಾಸಿಯೊಬ್ಬರ ನಾಲ್ಕೂವರೆ ವರ್ಷದ ಮಗುವಿನ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಆರೋಪಿಸಿ ಮಗುವಿನ ತಾಯಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ನೀಡಿದ ದೂರಿನನ್ವಯ ಈತನನ್ನು ಬಂಧಿಸಲಾಗಿತ್ತು.
ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಉಪ್ಪಿನಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾದ ರವಿ ಬಿ.ಎಸ್. ರವರು ತನಿಖೆಯನ್ನು ಪೂರ್ಣಗೊಳಿಸಿ ಆರೋಪಿಯ ವಿರುದ್ಧ ದೋಷರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-2 ಪೊಕ್ಸೋ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗಿದ್ದು, ಈ ಪ್ರಕರಣದಲ್ಲಿ ಒಟ್ಟು 9 ಮಂದಿ ಸಾಕ್ಷಿದಾರರನ್ನು ವಿಚಾರಿಸಲಾಗಿ 21 ದಾಖಲೆಗಳನ್ನು ಗುರುತಿಸಿದ ಬಳಿಕ ಆರೋಪಿಯ ಮೇಲಿನ ಆಪಾದನೆಯು ದೃಢಪಟ್ಟ ಹಿನ್ನೆಲೆಯಲ್ಲಿ ಅಪರಾಧಿಗೆ 3 ವರ್ಷ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ದಂಡದ ಮೊತ್ತವನ್ನು ನೊಂದ ಬಾಲಕಿಗೆ ಪಾವತಿಸಲು ಆದೇಶಿಸಲಾಗಿದ್ದು, ಅಲ್ಲದೆ, ದಂಡ ಪ್ರಕ್ರಿಯೆ ಸಂಹಿತೆಯ ಕಲಂ 357(ಎ)ಪ್ರಕಾರ ಮತ್ತು ಸಂತ್ರಸ್ತರ ಪರಿಹಾರ ಯೋಜನೆ ಅಡಿಯಲ್ಲಿ ನೊಂದ ಬಾಲಕಿಗೆ ಹೆಚ್ಚುವರಿಯಾಗಿ 25,000 ರೂ. ಪರಿಹಾರ ಧನವನ್ನಾಗಿ ಕಾನೂನು ಸೇವಾ ಪ್ರಾಧಿಕಾರ ನೀಡುವಂತೆ ತೀರ್ಪಿನಲ್ಲಿ ನಿರ್ದೇಶನ ನೀಡಲಾಗಿದೆ.
ಈ ಪ್ರಕರಣದಲ್ಲಿ ಸರಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ. ಬದರಿನಾಥ ನಾಯರಿರವರು ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಿ ವಾದ ಮಂಡಿಸಿದ್ದರು.