ರಾಮಕುಂಜ: ಕೊೖಲ ಗ್ರಾಮ ಪಂಚಾಯಿತಿ ಅಧೀನದಲ್ಲಿರುವ ವಾಣಿಜ್ಯ ಕಟ್ಟಡಕ್ಕೆ ವಿದ್ಯುತ್ ಸಂಪರ್ಕದ ಮೀಟರ್ ಪೆಟ್ಟಿಗೆಯಲ್ಲಿ ನ.12ರಂದು ರಾತ್ರಿ ವೇಳೆ ವಿದ್ಯುತ್ ಶಾರ್ಟ್‌ಸರ್ಕ್ಯೂಟ್ ಉಂಟಾಗಿ ವಿದ್ಯುತ್ ಮೀಟರ್ ಪೆಟ್ಟಿಗೆ ಉರಿಯಲಾರಂಭಿಸಿದ್ದು, ಸ್ಥಳೀಯರ ಸಮಯೋಚಿತ ಸಹಾಯದಿಂದ ಭಾರೀ ಬೆಂಕಿ ಅವಘಡವೊಂದು ತಪ್ಪಿದಂತಾಗಿದೆ.
ವಾಣಿಜ್ಯ ಮಳಿಗೆಯಲ್ಲಿ ಪೈಂಟ್ ಒಳಗೊಂಡಂತೆ 4 ಅಂಗಡಿಗಳಿದ್ದು, ಇವುಗಳಿಗೆ ವಿದ್ಯುತ್ ಸಂಪರ್ಕದ ಮೀಟರ್ ಹೊರಗಡೆ ಗೋಡೆಯಲ್ಲಿ ಅಳವಡಿಸಲಾಗಿದ್ದು ಇದರಲ್ಲಿ ಬೆಂಕಿ ಉರಿಯಲಾರಂಭಿಸಿ ಕಟ್ಟಡದ ಸುತ್ತ ಹೊಗೆಯಾಡತೊಡಗಿತ್ತು. ರಾತ್ರಿ 3 ಗಂಟೆಯ ಹೊತ್ತಿಗೆ ರಸ್ತೆಯಲ್ಲಿ ಹೋಗುತ್ತಿದ್ದ ವಾಹನ ಸವಾರರು ಇದನ್ನು ಗಮನಿಸಿ ಅಂಗಡಿ ಪಕ್ಕದವರಿಗೆ ಮತ್ತು ಅಂಗಡಿ ಮಾಲಕರಿಗೆ ಮಾಹಿತಿ ನೀಡಿದ್ದರು. ಅಷ್ಟರಲ್ಲಿ ಅಂಗಡಿ ಕಟ್ಟಡದ ಹತ್ತಿರದ ನಿವಾಸಿ ಪುರುಷೋತ್ತಮ, ಅಂಗಡಿ ಮಾಲಕ ಹಂಝ ಮತ್ತು ಅವರ ಸಹೋದರರು ಸ್ಥಳಕ್ಕೆ ಆಗಮಿಸಿ ಉರಿಯುತ್ತಿದ್ದ ಮೀಟರ್ ಪೆಟ್ಟಿಗೆಯನ್ನು ನಂದಿಸಿದರು. ಮೆಸ್ಕಾಂ ಇಲಾಖೆಗೂ ಮಾಹಿತಿ ನೀಡಲಾಗಿದ್ದು, ಅವರೂ ಆಗಮಿಸಿ ವಿದ್ಯುತ್ ಕಂಬದಿಂದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದರು. ಮೀಟರ್‌ನಿಂದ ವೈರ್ ಮೂಲಕ ಅಂಗಡಿಯ ಒಳಗಡೆಗೆ ಬೆಂಕಿ ಆವರಿಸಲು ಆರಂಭಿಸಿ ಹೊಗೆಯಾಡತೊಡಗಿತ್ತು. ಸ್ಥಳೀಯ ನಿವಾಸಿ ಪುರುಷೋತ್ತಮರವರು ಪೈಪ್ ಮೂಲಕ ನೀರಿನ ವ್ಯವಸ್ಥೆ ಮಾಡಿದ್ದು, ನೀರು ಹಾಕಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಪ್ಪಿದ ಅವಘಡ:
ಬೆಂಕಿ ಹೊತ್ತಿಕೊಂಡಿರುವ ಕಟ್ಟಡದ ಒಂದು ಭಾಗದ 2 ಕೊಠಡಿಯಲ್ಲಿ ಪೈಂಟ್, ಕೃಷಿಕರಿಗೆ ಸಂಬಂಧಿಸಿದ ಪ್ಲಾಸ್ಟಿಕ್ ವಸ್ತುಗಳು, ಇನ್ನೆರಡು ಕೊಠಡಿಯಲ್ಲಿ ಜಿನಸು ಅಂಗಡಿಗಳು ಇದ್ದು, ಬಹು ಬೇಗನೇ ಬೆಂಕಿ ಹರಡುವ ಸಾಧ್ಯತೆ ಇದ್ದು, ಆದರೆ ಸ್ಥಳೀಯರ ಸಮಯೋಚಿತ ಸಹಾಯದಿಂದ ಭಾರೀ ಅವಘಡವೊಂದು ತಪ್ಪಿದಂತಾಗಿದೆ ಎಂದು ಪೈಂಟ್ ಅಂಗಡಿಯ ಅರಫಾ ಅವರು ಪ್ರತಿಕ್ರಿಯಿಸಿದ್ದಾರೆ.