ಪುತ್ತೂರು: ಶಿಕ್ಷಕ ವೃತ್ತಿಯಲ್ಲಿ ಸುದೀರ್ಘ 34 ವರ್ಷಗಳ ಕಾಲ ಸೇವೆ ಸಲ್ಲಿಸಿದ ದರ್ಬೆ ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಐವಿ ಗ್ರೆಟ್ಟ ಪಾಯಿಸ್ ರವರು ನ.30ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
ಆಲ್ಬರ್ಟ್ ಪಾಯಿಸ್ ಹಾಗೂ ಹೆಲೆನ್ ಪಾಯಿಸ್ ದಂಪತಿ ಪುರ್ತಿಯಾಗಿ ಜನಿಸಿದ ಐವಿ ಗ್ರೆಟ್ಟ ಪಾಯಿಸ್ ರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಾಯಿದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢಶಿಕ್ಷಣವನ್ನು ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ, ಕಾಲೇಜು ಶಿಕ್ಷಣವನ್ನು ಸಂತ ಫಿಲೋಮಿನಾ ಕಾಲೇಜಿನಲ್ಲಿ, ಸಿ.ಪಿ.ಎಡ್ ಶಿಕ್ಷಣವನ್ನು ಹಾಸನದಲ್ಲಿ, ಬಿ.ಪಿ.ಎಡ್ ಶಿಕ್ಷಣವನ್ನು ಬೆಳಗಾಂನ ರಾಮದುರ್ಗಾದಲ್ಲಿ ಪೂರೈಸಿದ್ದರು. ಬಳಿಕ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆ(12 ವರ್ಷ)ಯಲ್ಲಿ ಹಾಗೂ ಸಂತ ಫಿಲೋಮಿನಾ ಪ್ರೌಢಶಾಲೆ(22 ವರ್ಷ)ಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ ಜೊತೆಗೆ 12 ವರ್ಷ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ ಅನುಭವ ಹೊಂದಿರುತ್ತಾರೆ. ಇವರು ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷರಾಗಿ, ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರಾಗಿ, ಮಾಯಿದೆ ದೇವುಸ್ ಚರ್ಚ್ ನ ಶಾಲೋಮ್ ಸ್ತ್ರೀ ಸಂಘಟನೆಯ ಮಾಜಿ ಉಪಾಧ್ಯಕ್ಷರಾಗಿ, ವಲಯ ಸ್ತ್ರೀ ಸಂಘಟನೆಯ ಜೊತೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಐವಿ ಗ್ರೆಟ್ಟ ಪಾಯಿಸ್ ರವರು ಪತಿ ರೊನಾಲ್ಡ್ ಡಿ’ಸೋಜ, ಈರ್ವರು ಪುತ್ರರಾದ ಆಶಿಕ್ ರಾಜ್ ಡಿ’ಸೋಜ, ಅನಿಕೇತನ್ ರೋಯ್ ಡಿ’ಸೋಜರವರೊಂದಿಗೆ ಸಾಮೆತ್ತಡ್ಕದಲ್ಲಿ ವಾಸ್ತವ್ಯ ಹೊಂದಿದ್ದಾರೆ.