ಪುತ್ತೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಇದರ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಡಿ.3ರಂದು ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ವಕೀಲರು, ಜೇಸಿಐಯ ರಾಷ್ಟ್ರೀಯ ಸಂಯೋಜಕಿಯಾಗಿರುವ ಸ್ವಾತಿ ಜಗನ್ನಾಥ ರೈ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜ್ಞಾನ ವಿಕಾಸದಿಂದಾಗಿ ಮಹಿಳೆಯರ ಜೀವನ ಶೈಲಿಯಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಯೋಜನೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮುಖಾಂತರ ಮಹಿಳೆಯರಲ್ಲಿ ನಂಬಿಕೆ, ಧೈರ್ಯ, ಆತ್ಮಸ್ಥೈರ್ಯ ವೃದ್ಧಿಯಾಗಿದೆ. ಮಹಿಳಾ ಸಬಲೀಕರಣವಾಗಿದೆ. ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದಾರೆ. ಬ್ಯಾಂಕಿಂಗ್ ಕ್ಷೇತ್ರದ ಎಲ್ಲಾ ಜ್ಞಾನಗಳನ್ನು ಹೊಂದಿದ್ದಾರೆ. ಯೋಜನೆಯಿಂದಾಗಿ ಆರ್ಥಿಕವಾಗಿ ಮಾತ್ರವಲ್ಲದೆ ಸಾಮಾಜಿಕ ಸಂಬಂಧಗಳು, ಮಾನವೀಯ ಮೌಲ್ಯಗಳು ವೃದ್ಧಿಯಾಗಿದೆ. ಮನೆಯಲ್ಲಿದ್ದ ಅದೆಷ್ಟೋ ಪ್ರತಿಭೆಗಳಿಗೆ ವೇದಿಕೆಯನ್ನೂ ಒದಗಿಸುವ ಮೂಲಕ ಜ್ಞಾನ ವಿಕಾಸ ಕೇಂದ್ರಗಳಿಂದ ಮಹಿಳೆಯರಲ್ಲಿ ಜ್ಞಾನದ ವಿಕಸನವಾಗಿದೆ ಎಂದು ಹೇಳಿದರು.
ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯು ಅಭಿವೃದ್ಧಿಯ ಜೊತೆಗೆ ಸ್ವಾವಲಂಬಿ ಬದುಕಿಗೆ ಸಹಕಾರಿಯಾಗಿದೆ. ಆರ್ಥಿಕ ಸಬಲೀಕರಣವಾಗಿದೆ. ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕೆ ಸಹಕಾರ ನೀಡುತ್ತಿದೆ. ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ. ಅನುದಾನಗಳ ಸಧ್ವಿನಿಯೋಗವಾಗುತ್ತಿದ್ದು ಪ್ರತಿ ಮನೆಯೂ ಬೆಳಗುತ್ತಿದೆ. ಬದಲಾದ ಸಮಾಜದಲ್ಲಿ ಮಕ್ಕಳಿಗೆ ನೀಡುವ ಸಂಸ್ಕಾರಗಳ ಬಗ್ಗೆ ಯೋಚಿಸಬೇಕು. ಮಕ್ಕಳನ್ನು ಗ್ರಾಮಾಭಿವೃದ್ಧಿ ಯೋಜನೆ, ಜ್ಞಾನ ವಿಕಾಸದ ಕಾರ್ಯಕ್ರಮಗಳಲ್ಲಿ ಸೇರಿಸಿಕೊಳ್ಳಬೇಕು ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದ.ಕ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಮಾತನಾಡಿ, ಕಟ್ಟ ಕಡೆಯ ವ್ಯಕ್ತಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಗ್ರಾಮಾಭಿವೃದ್ಧಿ ಯೋಜನೆಯು ಪ್ರಮುಖ ಪಾತ್ರವಹಿಸಿದೆ. ಸರ್ವಧರ್ಮದವರು ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಯೋಜನೆಯಿಂದಾಗಿ ಸದೃಢ ಸಮಾಜ ನಿರ್ಮಾಣವಾಗಿದೆ. ಸಮಾಜದ ಪರಿವರ್ತನೆಯಾಗಿದೆ. ಹಲವು ಕುಟುಂಬಗಳಿಗೆ ಹೊಸ ಬದುಕು ನೀಡಿದೆ. ಆರ್ಥಿಕವಾಗಿ ದುರ್ಬಲ ವರ್ಗದವರ ಸ್ವಾವಲಂಬನೆಯು ಬದುಕಿಗೆ ಸಹಕಾರಿಯಾಗಿದೆ ಎಂದರು.
ಮಹಿಳಾ ಪೊಲೀಸ್ ಠಾಣಾ ಉಪನಿರೀಕ್ಷಕಿ ಸವಿತಾ ಎಂ.ವಿ ಮಾತನಾಡಿ, ಜ್ಞಾನ ವಿಕಾಸದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಕಾನೂನಿನ ಅರಿವು, ಸಾಮಾಜಿಕ ಜ್ಞಾನಗಳು ವೃದ್ಧಿಯಾಗಲು ಸಹಕಾರಿಯಾಗಲಿದ್ದು ಬದುಕಿನ ಜಂಜಾಟದಲ್ಲಿದ್ದು ನೊಂದ ಮಹಿಳೆಯರ ಬಾಳಲ್ಲಿ ಜ್ಞಾನ ವಿಕಾಸವು ಹೊಸ ಬದುಕು ನೀಡಿದೆ. ಅನ್ಯಾಯದ ವಿರುದ್ಧ ಹೋರಾಡಲು ನೆರವು ದೊರೆತಿದೆ. ಮಹಿಳಾ ಸಬಲೀಕರಣದಲ್ಲಿ ಜ್ಞಾನ ವಿಕಾಸವು ಪ್ರಮುಖ ಪಾತ್ರವಹಿಸಿದೆ ಎಂದ ಅವರು ಮಕ್ಕಳು ಮತ್ತು ಮಹಿಳಾ ದೌರ್ಜನ್ಯ ಕಾಯಿದೆಗಳ ಬಗ್ಗೆ ತಿಳಿದುಕೊಳ್ಳುವುದು, ಆನ್ಲೈನ್ ವಂಚನೆಗಳ ಬಗ್ಗೆ ಮಹಿಳೆಯರು ಜಾಗರೂಕರಾಗಿರುವುವಂತೆ ತಿಳಿಸಿದರು.
ಜ್ಞಾನ ವಿಕಾಸದ ಸದಸ್ಯರಾದ ಜಲಜಾಕ್ಷಿ ಬೆಳ್ಳಿಪ್ಪಾಡಿ ಹಾಗೂ ಜಯಮ್ಮ ಬೆಳ್ಳಿಪ್ಪಾಡಿಯವರು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ತಾಲೂಕು ಪ್ರಗತಿ ಬಂಧು, ಸ್ವ-ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಉದಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಯು.ಲೋಕೇಶ್ ಹೆಗ್ಡೆ, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಬಲ್ನಾಡು ಒಕ್ಕೂಟದ ಅಧ್ಯಕ್ಷ ಸತೀಶ್ ಗೌಡ ಒಳಗುಡ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಿಳಾ ವಿಚಾರಗೋಷ್ಠಿ:
ಕಾರ್ಯಕ್ರಮದಲ್ಲಿ ಕುಟುಂಬದ ಪರಿವರ್ತನೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಪಾತ್ರ ಎಂಬ ವಿಚಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಹ ಪ್ರಾಧ್ಯಾಪಕಿ ಹರಿಣಿ ಪುತ್ತೂರಾಯ ಅವರು ವಿಚಾರಗೋಷ್ಠಿ ನಡೆಸಿಕೊಟ್ಟರು.
ಮಾಸಾಶನ ಮಂಜೂರಾತಿ ಪತ್ರ ವಿತರಣೆ:
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸದಸ್ಯರಿಗೆ ನೀಡುವ ಮಾಸಾಶನದ ಮಂಜೂರಾತಿ ಪತ್ರವನ್ನು ಗಿರಿಜಾ ಬಜತ್ತೂರು ಹಾಗೂ ನೆಬಿಸಾ ಬಜತ್ತೂರು ಅವರಿಗೆ ವಿತರಿಸಿಲಾಯಿತು.
ಗೀತಪ್ರೀಯ ಪ್ರಾರ್ಥಿಸಿದರು. ತಾಲೂಕು ಯೋಜನಾಧಿಕಾರಿ ಶಶಿಧರ ಎಂ. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕುಂಬ್ರ ವಲಯಾಧ್ಯಕ್ಷ ಮಾಧವ ಎಸ್.ರೈ ಕುಂಬ್ರ, ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿ ಸುಮಿತ್ರಾ, ಲಕ್ಷ್ಮೀ, ಬನ್ನೂರು ವಲಯಾಧ್ಯಕ್ಷ ಮನೋಹರ್ ಡಿ.ವಿ., ತಾಲೂಕು ಒಕ್ಕೂಟದ ಮಾಜಿ ಅಧ್ಯಕ್ಷ ರಾಮಣ್ಣ ಗೌಡ ಗುಂಡೋಳೆ, ಕುಂಜೂರುಪಂಜ ಒಕ್ಕೂಟದ ಅಧ್ಯಕ್ಷ ಮಹಾಲಿಂಗ ನಾಯ್ಕ ಮಚ್ಚಿಮಲೆ, ಜಯಶ್ರೀ ಅತಿಥಿಗಳಿಗೆ ಹೂ ಗುಚ್ಚ ನೀಡಿ ಸ್ವಾಗತಿಸಿದರು. ಜ್ಞಾನ ವಿಕಾಸದ ಸಮನ್ವಯಾಧಿಕಾರಿ ಕಾವ್ಯ ವರದಿ ವಾಚಿಸಿದರು.
ಕೃಷಿ ಮೇಲ್ವಿಚಾರಕ ಶಿವರಂಜನ್ ಕಾರ್ಯಕ್ರಮ ನಿರೂಪಿಸಿ, ಬಲ್ನಾಡು ವಲಯದ ಮೇಲ್ವಿಚಾರಕ ಪ್ರಶಾಂತ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಭೋಜನ ನಡೆದು ನಂತರ ಜ್ಞಾನವಿಕಾಸ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.