ಪುತ್ತೂರು: ಪುತ್ತೂರು ಸರಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪುತ್ತೂರಿನ ಶಾಸಕರು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುತ್ತೇನೆ ಎಂಬ ಉತ್ತರಕುಮಾರನ ಪೌರುಷ ಕೇವಲ ಗಾಳಿ ಮಾತಾಗಿದೆ ಹೊರತು ಯಾವುದೇ ಪ್ರಯೋಜನವಾಗಲಿಲ್ಲ, ಬದಲಾಗಿ ಶಾಸಕರ ಮಾತು ಕೇಳುವಾಗ ನಾನು ಹೊಡೆದಂತೆ ಮಾಡುತ್ತೇನೆ ನೀವು ಕೂಗಿದಂತೆ ನಟಿಸಿ ಎಂದು ಅಧಿಕಾರಿಗಳಿಗೆ ಹೇಳಿದ್ದಾರೋ ಎಂದು ಅರ್ಥವಾಗುತ್ತಿಲ್ಲ. ಅವರು ಮೊದಲು ಸರಕಾರಿ ಕಚೇರಿಯಲ್ಲಿ ನಡೆಯುವ ಲಂಚಾವತಾರವನ್ನು ನಿಲ್ಲಿಸಲಿ ಎಂದು ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಹಾಗೂ ಮಾಜಿ ತಾಲೂಕು ಪಂಚಾಯತ್ ಸದಸ್ಯ ಹರೀಶ್ ಬಿಜತ್ರೆ ಆಗ್ರಹಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಮತ್ತು ಕೆಲವು ಸಂಪುಟ ಸಚಿವರು ಹಗರಣದಲ್ಲಿ ಸಿಲುಕಿ ನಂತರ ಕದ್ದ ಮಾಲನ್ನು ಹಿಂದಿರುಗಿಸಿ ನಾವು ಸಾಚಾಗಳು ಎನ್ನುವ ರೀತಿಯಲ್ಲಿ ಪುತ್ತೂರಿನಲ್ಲಿ ಕೂಡ ಶಾಸಕರ ಮಾತು ಕೇಳುವಾಗ ಅದೇ ರೀತಿಯ ವ್ಯವಸ್ಥೆ ಆಗುತ್ತಾ ಇದೆ ಎಂದು ಸಂಶಯ ಮೂಡುತ್ತಿದೆ. ಯಾರೇ ಲಂಚ ಕೇಳಿದರೂ ನನ್ನಲ್ಲಿ ನೇರವಾಗಿ ಹೇಳಿ ಎಂದು ಜನಸಾಮಾನ್ಯರಲ್ಲಿ ಹೇಳಿಕೊಂಡು ಕೊನೆಗೆ ಲಂಚ ತಿಂದ ಇಲಾಖಾ ಅಧಿಕಾರಿಯಲ್ಲಿ ತೆಗೆದುಕೊಂಡ ಹಣವನ್ನು ಹಿಂದಿರುಗಿಸಿ ನಿಮ್ಮ ಕೆಲಸ ಮಾಡಿ ಎಂದು ಹೇಳುತ್ತಾರೋ ಎಂಬ ಸಂಶಯ ವ್ಯಕ್ತವಾಗಿದೆ. ಶಾಸಕರ ಪ್ರಕಾರ ಲಂಚ ತೆಗೆದದ್ದು ಗೊತ್ತಾದರೆ ಹಿಂದಿರುಗಿಸಿ, ಗೊತ್ತಾಗಿಲ್ಲ ಎಂದರೆ ಜೇಬಿನಲ್ಲಿ ಇರಿಸಿ ಎಂಬುದು ಎಷ್ಟು ಸರಿ ಎಂದು ಶಾಸಕರನ್ನು ಪ್ರಶ್ನಿಸಿದ್ದಾರೆ. ಇನ್ನಾದರೂ ತಾನು 916 ಚಿನ್ನ ಎಂದು ಹೇಳುವ ಶಾಸಕರು, ಪುತ್ತೂರಿನ ಸರಕಾರಿ ಇಲಾಖೆಗಳಲ್ಲಿ ನಡೆಯುವ ಲಂಚಾವತಾರವನ್ನು ನಿಲ್ಲಿಸಿ ಜನ ಸಾಮನ್ಯರಿಗೆ ನ್ಯಾಯ ದೊರಕಿಸಿ ಕೊಡಿ ಎಂದು ಆಗ್ರಹಿಸಿದ್ದಾರೆ.