ಆರ್ಲಪದವು: ಶ್ರೀ ಕಿನ್ನಿಮಾಣಿ, ಪೂಮಾಣಿ, ಹುಲಿಭೂತ ದೈವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರ ಬಿಡುಗಡೆ

0

*ಪಾಣಾಜೆ, ಬೆಟ್ಟಂಪಾಡಿ, ನಿಡ್ಪಳ್ಳಿ ನನಗೆ ಶಕ್ತಿ ನೀಡಿದ ಗ್ರಾಮಗಳು – ಅಶೋಕ್‌ ಕುಮಾರ್‌ ರೈ
*ಹೆಗಲಿಗೆ ಹೆಗಲು ಕೊಟ್ಟವರು ಶಶಿಕುಮಾರ್‌ ರೈಯವರು – ಶ್ರೀಕೃಷ್ಣ ಬೋಳಿಲ್ಲಾಯ
*ದೇವಸ್ಥಾನ, ದೈವಸ್ಥಾನ ಸರಿಯಿದ್ದರೆ ನಮ್ಮ ಜೀವನವೂ ಸರಿಯಾಗಿರುತ್ತದೆ – ಭಾಸ್ಕರ ಆಚಾರ್‌
*ಇಲ್ಲಿ ಅದ್ಭುತ ಕೆಲಸ ಆಗಿದೆ – ಗಿಳಿಯಾಲು ಮಹಾಬಲೇಶ್ವರ ಭಟ್‌
*ಶಶಿಕುಮಾರ್‌ ರೈಯವರು ನಮ್ಮ ದೊಡ್ಡ ಆಸ್ತಿ – ನಾರಾಯಣ ಪ್ರಕಾಶ್
*800 ವರ್ಷಗಳ ಇತಿಹಾಸಕ್ಕೆ ನಮಗೆ ಹೆಮ್ಮೆಯಿದೆ – ಸೀತಾರಾಮ ಭರಣ್ಯ


65 ಲಕ್ಷ ರೂ. ಗಳ ಕೊರತೆಯಿದೆ, ಭಕ್ತಾಭಿಮಾನಿಗಳ ಸಹಕಾರ ಬೇಕಿದೆ – ಶಶಿಕುಮಾರ್ ರೈ ಬಾಲ್ಯೊಟ್ಟು
ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕ, ಎಸ್‌ಸಿಡಿಸಿಸಿ ಬ್ಯಾಂಕ್‌ ನಿರ್ದೇಶಕರೂ ಆಗಿರುವ ಶಶಿಕುಮಾರ್‌ ರೈ ಬಾಲ್ಯೊಟ್ಟುವರು ಪ್ರಾಸ್ತಾವಿಕವಾಗಿ ಮಾತನಾಡಿ ʻಕ್ಷೇತ್ರದ ಜೀರ್ಣೋದ್ಧಾರ ಕಾಮಗಾರಿಗಳಿಗೆ ನಮ್ಮ ಲೆಕ್ಕಾಚಾರಕ್ಕಿಂತ ಹೆಚ್ಚಿನ ಮೊತ್ತ ವಿನಿಯೋಗವಾಗುತ್ತಿದೆ. 8 ತಿಂಗಳ ಹಿಂದೆ ಇದ್ದ ಈ ಜಾಗ ಈಗ ಹೇಗಾಗಿದೆ ಎಂದು ಎಲ್ಲರೂ ತಿಳಿದುಕೊಳ್ಳಬೇಕಾಗಿದೆ. ಉತ್ತಮ ಗುಣಮಟ್ಟದ ಸಾಗುವಾನಿ, ಕಿರಾಲು ಬೋಗಿ ಯಂತಹ ಮರ ಮುಂಗಟ್ಟುಗಳನ್ನು ಬಳಸಿ ದೀರ್ಘ ಬಾಳ್ವಿಕೆ ಬರುವ ರೀತಿಯಲ್ಲಿ ದೈವಸ್ಥಾನ ನಿರ್ಮಿಸಲಾಗಿದೆ. ಬ್ರಹ್ಮಕಲಶೋತ್ಸವ ಆಗಬೇಕಾದರೆ 65 ಲಕ್ಷ ರೂ. ಗಳ ಕ್ರೋಢೀಕರಣವಾಗಬೇಕಿದೆ. ಶಾಸಕರ ಮೇಲೆ ಭರವಸೆ ಇಟ್ಟಿದ್ದೇವೆ. ಸರಕಾರದ ಕಡೆಯಿಂದ 65 ಲಕ್ಷ ರೂ. ಬರುವಂತೆ ಮಾಡಿದ್ದಾರೆ. ಇಲ್ಲಿಯವರೆಗೆ 2 ಸಾವಿರ ಕಾರ್ಯಕರ್ತರಿಂದ ಕರಸೇವೆ ನಡೆದಿದೆ. ಜೀರ್ಣೋದ್ಧಾರ ಕಾರ್ಯ ಇಷ್ಟೊಂದು ಸುಸೂತ್ರವಾಗಿ ನೆರವೇರಿದಂತೆ ಬ್ರಹ್ಮಕಲಶೋತ್ಸವವನ್ನೂ ವಿಜೃಂಭಣೆಯಿಂದ ಮತ್ತು ಮಾದರಿಯಂತೆ ನಡೆಸಬೇಕೆಂಬುದು ನಮ್ಮ ಅಭಿಲಾಷೆಯಾಗಿದೆ. ಭಕ್ತಾಭಿಮಾನಿಗಳಿಂದ ಸರ್ವ ರೀತಿಯ ಸಹಕಾರವನ್ನು ಸಮಿತಿಯ ಪರವಾಗಿ ಯಾಚಿಸುತ್ತೇನೆʼ ಎಂದರು.


ಪಾಣಾಜೆ: ಇಲ್ಲಿನ ಕಾರಣಿಕ ಪ್ರಸಿದ್ಧ ಶ್ರೀ ಕಿನ್ನಿಮಾಣಿ ಪೂಮಾಣಿ, ಹುಲಿಭೂತ ದೈವಸ್ಥಾನದ ಜೀರ್ಣೋದ್ಧಾರ, ನೂತನ ದೈವಸ್ಥಾನ, ದೈವ ಗುಡಿಗಳ ನಿರ್ಮಾಣ ಕಾಮಗಾರಿಗಳು ಅಂತಿಮ ಹಂತದಲ್ಲಿದ್ದು, 2025ನೇ ಜನವರಿ 19 ಮತ್ತು 20 ರಂದು ಕ್ಷೇತ್ರದ ಬ್ರಹ್ಮಕಲಶೋತ್ಸವ ನಡೆಯಲಿದೆ. ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ದ.3ರಂದು ಪಾಣಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ಕ್ಷೇತ್ರದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಶಾಸಕ ಅಶೋಕ್‌ ಕುಮಾರ್‌ ರೈಯವರು ಮಾತನಾಡಿ, ʻರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವರ ಬ್ರಹ್ಮಕಲಶ ಪಕ್ಷಾತೀತವಾಗಿ ನಡೆದು ಕರಾವಳಿಯಲ್ಲಿ ಉತ್ತಮ ನಿದರ್ಶನವಾಗಿ ಮೂಡಿಬಂದದ್ದು ನಾವೆಲ್ಲಾ ಮರೆತಿಲ್ಲ. ದೇವಸ್ಥಾನದಂತೆ ದೈವಸ್ಥಾನದಲ್ಲೂ ಎಲ್ಲರೂ ಅಣ್ಣತಮ್ಮಂದಿರಂತೆ ಪಾಲ್ಗೊಳ್ಳುತ್ತಿರುವುದು ಇಲ್ಲಿನ ವಿಶೇಷವಾಗಿದೆ. ಬ್ರಹ್ಮಕಲಶೋತ್ಸವ ದೇವರಿಗಾಗಿ ಅಲ್ಲ, ನಮಗೆ ಬೇಕಾಗಿ ಮಾಡಬೇಕು. ನಾವು ದುಡಿದ ಒಂದಂಶವನ್ನು ದೇವರಿಗೆ ಸಮರ್ಪಿಸಿದಾಗ ನಮ್ಮ ಜೀವನ ಸಾರ್ಥಕವಾಗುತ್ತದೆʼ ಎಂದರು.


ಮೂರು ಗ್ರಾಮಗಳನ್ನು ಹೆಚ್ಚು ಪ್ರೀತಿಸುತ್ತೇನೆ
ಶಾಸಕನಾಗಿ ನಿಂತು ಮಾತನಾಡಲು ನನಗೆ ಶಕ್ತಿ ಕೊಟ್ಟದ್ದು ನನ್ನ ಹುಟ್ಟು ಗ್ರಾಮದ ಜೊತೆಗೆ ಬೆಟ್ಟಂಪಾಡಿ, ನಿಡ್ಪಳ್ಳಿ, ಪಾಣಾಜೆ ಗ್ರಾಮಗಳು. ಇಲ್ಲಿನ ಜನರ ಪ್ರೀತಿ ಗಳಿಸುವಂತಾಗಲು ಕಾರಣ ಶಶಿಕುಮಾರ್ ರೈ ಬಾಲ್ಯೊಟ್ಟುರವರು. ಪಾಣಾಜೆಯ ಬಂಧುತ್ವ ನನಗಾಗಿದೆ. ಪಕ್ಷಾತೀತವಾಗಿ ಈ ಗ್ರಾಮಗಳ ಜನರಿಗೆ ಒಂದಷ್ಟು ಗೌರವ ಹೆಚ್ಚು ಕೊಡುತ್ತೇನೆ. ನನಗೆ ಇಲ್ಲಿನ ಜನರ ಋಣ ಇದೆ. ಕ್ಷೇತ್ರದ ಜೀರ್ಣೋದ್ಧಾರಕ್ಕಾಗಿ ಶಾಸಕರ ನಿಧಿ ಮತ್ತು ವೈಯುಕ್ತಿಕವಾಗಿ 95 ಲಕ್ಷ ರೂ. ರವರೆಗೆ ಕೊಡುವ‌ ಕೆಲಸ ಮಾಡಿದ್ದೇನೆ. ಅತ್ಯಂತ ಧನ್ಯತಾ ಭಾವದಿಂದ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಳ್ಳಲಿದ್ದೇ‌ನೆʼ ಎಂದು ಶಾಸಕರು ಹೇಳಿದರು.


ಆಮಂತ್ರಣ ಪತ್ರ ಪ್ರತೀ ಮನೆಗೂ ತಲುಪಬೇಕು
ʻತೀ ಮನೆಯವರಿಗೂ, ಅವರ ಬಂಧುಗಳಿಗೂ ಆಮಂತ್ರಣ ತಲುಪಬೇಕು. ಈ ದೈವಸ್ಥಾನಕ್ಕೆ ವಿಶೇಷ ಕಲೆ ಇದೆ. ಹಾಗಾಗಿ ಇಲ್ಲಿನ ಬ್ರಹ್ಮಕಲಶೋತ್ಸವಕ್ಕೆ ಊರಿಗೆ ಊರೇ ಬರುವಂತಾಗಬೇಕು. ಪರವೂರಿನ ಅತಿಥಿಗಳನ್ನು ಕರೆದು ಸತ್ಕರಿಸುವ ಕೆಲಸವಾಗಬೇಕು. ಅವರಿಂದ ಹಿತ ನುಡಿ ಕೇಳುವಂತಾಗಬೇಕುʼ ಎಂದು ರೈಯವರು ಹೇಳಿದರು.

ʻದಿಕ್ಕೆಲ್‌ ಬಂದ್‌ʼ ಬಿಡುವಂತಿಲ್ಲ
ಬ್ರಹ್ಮಕಲಶೋತ್ಸವ ಮಾಡಿ ಅನುಭವವಿರುವ ಗ್ರಾಮಸ್ಥರು ಈ ಬಾರಿಯ ಬ್ರಹ್ಮಕಲಶೋತ್ಸವದ ದಿನಗಳಲ್ಲೂ ʻದಿಕ್ಕೆಲ್‌ ಬಂದ್‌ʼ ಮಾಡಿ ಇಲ್ಲಿ ಊಟ ಉಪಾಹಾರ ಮಾಡುವಂತಾಗಬೇಕು. ಇಡ್ಲಿ ಸಾಂಬಾರ್, ಇಡ್ಲಿ ವಡೆ, ನೀರುಳ್ಳಿಬಜೆ ಹೀಗೆ ಬಗೆ ಬಗೆಯ ತಿಂಡಿ ತಿನಿಸುಗಳು ಇರಬೇಕು. ಊಟ ಉಪಚಾರದಲ್ಲಿ ಎಳ್ಳಷ್ಟೂ ಕಡಿಮೆಯಾಗಬಾರದು. ಇದೊಂದು ನಮಗೆ ದೊರೆತಿರುವ ಅವಕಾಶ.  ವಿಶೇಷ ರೀತಿಯಲ್ಲಿ ನಡೆಯಬೇಕು. ಸ್ವಚ್ಛತೆ, ಕೆಲಸ, ಅತಿಥಿಗಳ ಸತ್ಕಾರಗಳಲ್ಲಿ ನಾವು ಮಾದರಿಯಾಗಿರಬೇಕು. ದೈವಗಳ ಅಪ್ಪಣೆಯ ರೀತಿಯಲ್ಲಿಯೇ ನಡೆಯಲಿ. ಯಾವುದೇ ವಿಘ್ನವಿಲ್ಲದೇ ಯಶಸ್ವಿಯಾಗಿ ನಡೆಯುವಂತಾಗಲಿ ಎಂದು ಶುಭಾಶಿಸಿದ ಶಾಸಕರು ತನ್ನ ವೈಯುಕ್ತಿಕ ನೆಲೆಯಲ್ಲಿ ಸಂಟ್ಯಾರ್‌ನಲ್ಲಿ ಬ್ರಹ್ಮಕಲಶೋತ್ಸವಕ್ಕೆ ಸ್ವಾಗತ ಕಮಾನು ಹಾಕುವ ವ್ಯವಸ್ಥೆ ಮಾಡಲಿದ್ದೇನೆ ಎಂದರು.

ಹೆಗಲಿಗೆ ಹೆಗಲು ಕೊಟ್ಟವರು ಶಶಿಕುಮಾರ್‌ ರೈಯವರು – ಶ್ರೀಕೃಷ್ಣ ಬೋಳಿಲ್ಲಾಯ
ಸಭಾಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯರು ಮಾತನಾಡಿ, ಈ ಕ್ಷೇತ್ರದಲ್ಲಿ ಮೊಕ್ತೇಸರನಾಗಿ ಎಲ್ಲರೂ ಮಾಡಬೇಕಾದುದನ್ನೇ ಮಾಡಿದ್ದೇನೆ. ಸಂಪ್ರದಾಯ ಕೊರತೆ ಬಾರದಂತೆ ನೋಡಿಕೊಂಡಿದ್ದೇನೆ. ಜೀರ್ಣೋದ್ಧಾರಕ್ಕೆ ಮುಂದಾದಾಗ ಎಲ್ಲರೂ ಸಹಕಾರ ಕೊಡಲು ಮುಂದೆ ಬಂದರು. 15 ಲಕ್ಷ ರೂ.‌ಗಳಷ್ಟು ಕರಸೇವೆಯಲ್ಲಿ ಕಾಮಗಾರಿಗಳು ನಡೆದಿದೆ. ಸನ್ನಿಧಾನದ ಸೇವೆ ಮಾಡುವ ಯೋಗ ಭಾಗ್ಯ ನನಗೂ‌ ನಿಮಗೂ ದೇವರು ದೈವಗಳು ಕರುಣಿಸುವಂತಾಗಲಿ’ ಎಂದ ಅವರು ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವರ ಮತ್ತು ದೈವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ನನಗೆ ಹೆಗಲಿಗೆ ಹೆಗಲು ಕೊಟ್ಟವರು ಶಶಿಕುಮಾರ್ ರೈ ಬಾಲ್ಯೊಟ್ಟುರವರು ಎಂದು ಅತ್ಯಂತ ಭಾವುಕತೆಯಿಂದ ಹೇಳಿದರು.

ಇಲ್ಲಿ ಅದ್ಭುತ ಕೆಲಸ ಆಗಿದೆ – ಗಿಳಿಯಾಲು ಮಹಾಬಲೇಶ್ವರ ಭಟ್‌
ಮುಖ್ಯ ಅತಿಥಿಯಾಗಿದ್ದ ಪಾಣಾಜೆ ಸುಬೋಧ ಪ್ರೌಢಶಾಲೆಯ ಸಂಚಾಲಕ ಗಿಳಿಯಾಲು ಮಹಾಬಲೇಶ್ವರ ಭಟ್ ರವರು ಮಾತನಾಡಿ, ʻ8 ತಿಂಗಳಿನಿಂದ ಇಲ್ಲಿ ಅದ್ಭುತ ಕೆಲಸ ಆಗಿದೆ. ದೇವರ ದೈವಗಳ ಪ್ರೇರಣೆ, ಶಕ್ತಿ ಇಲ್ಲಿ ತುಂಬಿದೆ. ಇಲ್ಲಿನ ಸಾನ್ನಿಧ್ಯಕ್ಕೆ ಚ್ಯುತಿ ಬಾರದಂತೆ ಆಡಳಿತ ನಿರ್ವಹಿಸುತ್ತಿರುವುದಕ್ಕೆ ಶ್ರೀಕೃಷ್ಣ ಬೋಳಿಲ್ಲಾಯರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕರಸೇವೆಯಲ್ಲಿ ತೊಡಗಿಸಿಕೊಂಡಿರುವವರಿಗೆ, ಶಶಿಕುಮಾರ್ ರೈಯವರ ಸಾರಥ್ಯದ ಸಮಿತಿಯವರಿಗೆ ಉತ್ತಮ ಶಕ್ತಿಯನ್ನು ಶ್ರೀ ದೈವಗಳು ಕರುಣಿಸಲಿ’ ಎಂದು ಶುಭಾಶಿಸಿದರು.


ದೇವಸ್ಥಾನ, ದೈವಸ್ಥಾನ ಸರಿಯಿದ್ದರೆ ನಮ್ಮ ಜೀವನವೂ ಸರಿಯಾಗಿರುತ್ತದೆ – ಭಾಸ್ಕರ ಆಚಾರ್‌
ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳ ಸಂಚಾಲಕ ಭಾಸ್ಕರ ಆಚಾರ್ ಹಿಂದಾರುರವರು ಮಾತನಾಡಿ ‘ದೈವಸ್ಥಾನ, ಶಾಲೆ ಸಂಸ್ಥೆಗಳು ಸರಿ ಇದ್ದರೆ ಜನರ ಜೀವನವೂ ಸರಿಯಾಗಿರುತ್ತದೆ. ದ್ವೇಷ ಭಾವನೆಗಳನ್ನು ಬದಿಗಿಟ್ಟು ಒಂದಾಗಿ ದೇವರ ಕಾರ್ಯದಲ್ಲಿ ಪಾಲ್ಗೊಂಡು ಸಮಾಜದ ಅಭ್ಯುದಯಕ್ಕೆ ನಾವೆಲ್ಲಾ ಸಾಕ್ಷಿಗಳಾಗೋಣʻ ಎಂದರು.

ಶಶಿಕುಮಾರ್‌ ರೈಯವರು ನಮ್ಮ ದೊಡ್ಡ ಆಸ್ತಿ – ನಾರಾಯಣ ಪ್ರಕಾಶ್
ಪಾಣಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರೂ ಆಗಿರುವ ಕೆಎಂಎಫ್‌ ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್ ರವರು ಮಾತನಾಡಿ ʻಶಶಿಕುಮಾರ್ ರೈಯವರು ನಮ್ಮ ಪಾಣಾಜೆ ಗ್ರಾಮದ ಆಸ್ತಿ. ನಮ್ಮ ಗ್ರಾಮದಲ್ಲಿಯೇ ಆಸ್ತಿಪಾಸ್ತಿ ಹೊಂದಿದ್ದರೆ ನಮಗೆ ಇನ್ನಷ್ಟು ಅನುಕೂಲವಾಗುತ್ತಿತ್ತು. ಸಂಘಟನೆ ಮತ್ತು ಕಾರ್ಯಕ್ರಮ ಆಯೋಜಿಸುವಲ್ಲಿ ರೈಯವರ ಚಾಕಚಕ್ಯತೆ ಅದ್ಭುತವಾದುದುʼ ಎಂದು ಹೇಳಿ ʻರಾಜಕೀಯ, ಜಾತಿ ವೈಷಮ್ಯ ಮರೆತು ಗ್ರಾಮದ ಅಭಿವೃದ್ಧಿಗೆ ಮುಂದಾಗುವಲ್ಲಿ ನಾವೆಲ್ಲಾ ಚಿಂತಿಸಬೇಕಾಗಿದೆ. ಜಾತಿ ವಿಷ ಬೀಜ ಕಿತ್ತೊಗದರೆ ನಮ್ಮ ರಕ್ಷಣೆಗೆ ಅಮೆರಿಕ ಇಸ್ರೇಲ್ ಬೇಕಾಗಿಲ್ಲ. ನಮಗೆ‌ ನಾವೇ ಸಮರ್ಥ ರಕ್ಷಕರಾಗುತ್ತೇವೆ. ಧರ್ಮದ ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವ ಬೋಳಿಲ್ಲಾಯರಿಗೆ ಸಮಾಜದ ಸರ್ವರ ಗೌರವವಿದೆʼ ಎಂದ ಅವರು ಕ್ಷೇತ್ರದ ಈ ಹಿಂದಿನ ಆಡಳಿತ ಮೊಕ್ತೇಸರ ವಾಸುದೇವ ಬೋಳಿಲ್ಲಾಯರನ್ನು ಸ್ಮರಿಸಿದರು.

800 ವರ್ಷಗಳ ಇತಿಹಾಸಕ್ಕೆ ಹೆಮ್ಮೆಯಿದೆ – ಸೀತಾರಾಮ ಭರಣ್ಯ
ಚಿಕ್ಕಮಗಳೂರು ಶಾ ಚಾರಿಟೇಬಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಭರಣ್ಯ ಸೀತಾರಾಮ ರವರು ಮಾತನಾಡಿ ‘ಇಲ್ಲಿ ನೇಮ ನಡೆಯುತ್ತಿರಬೇಕಾದರೆ  ಪಕ್ಕದ ಊರಿನಲ್ಲಿ ಹುಲಿಗಳು ಕಾಣಿಸಿಕೊಳ್ಳುತ್ತಿತ್ತಂತೆ. ಗರುಡ ಬರುತ್ತಿತ್ತು. 800 ವರ್ಷಗಳ ಇತಿಹಾಸ ಇರುವ ದೈವಸ್ಥಾನದ ಬಗ್ಗೆ ನಮಗೆ ಹೆಮ್ಮೆಯಿದೆ. ಶ್ರೀಕೃಷ್ಣನ ರೂಪದಲ್ಲಿ ಇಡೀ ಸಮಾಜವನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವವರು ಶ್ರೀಕೃಷ್ಣ ಬೋಳಿಲ್ಲಾಯರು. ಧರ್ಮಯುದ್ದದಲ್ಲಿ ಕೃಷ್ಣ ಪಾಂಡವರು ಇಲ್ಲಿನ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯನಿರ್ವಹಿಸುತ್ತಿದ್ದು, ಯಶಸ್ಸನ್ನು ಕಾಣಲಿʼ ಎಂದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ರೋಶನ್ ರೈ ಬನ್ನೂರು, ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ವಿಠಲ ರೈ ಬಾಲ್ಯೊಟ್ಟುಗುತ್ತು, ಲೀಲಾವತಿ ಕೆ. ಶೆಟ್ಟಿ ಕೋಟೆ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ತಮ್ಮಣ್ಣ ನಾಯ್ಕ್‌ ಸುಡುಕುಳಿ, ಕಾರ್ಯದರ್ಶಿ ವಿಶ್ವನಾಥ ಪೈ ಕೊಂದಲ್ಕಾನ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ರೈ ಕೆದಂಬಾಡಿ ಸ್ವಾಗತಿಸಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಜಗನ್ಮೋಹನ ರೈ ಸೂರಂಬೈಲುರವರು ವಂದನಾರ್ಪಣೆಗೈದು ಜೀರ್ಣೋದ್ಧಾರ ಕಾರ್ಯದಲ್ಲಿ ಸಹಕರಿಸಿದ ಪ್ರತಿಯೊಬ್ಬರನ್ನೂ ವಂದಿಸಿದರು. ಶ್ರೀಪ್ರಸಾದ್ ಪಾಣಾಜೆ ಕಾರ್ಯಕ್ರಮ ನಿರೂಪಿಸಿದರು. ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸೇರಿದಂತೆ ಊರಿನ ಭಕ್ತಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನೆರವೇರಿತು.

LEAVE A REPLY

Please enter your comment!
Please enter your name here