*48 ದಿನಗಳ ನಿರಂತರ ರಂಗಪೂಜೆ ನಡೆಯುವ ಏಕೈಕ ದೇವಸ್ಥಾನ
*ಭಕ್ತಾದಿಗಳಿಗೆ ಸೇವೆ ಸಲ್ಲಿಸಲು ಅವಕಾಶ
ಪುತ್ತೂರು: ತುಳುನಾಡಿನ ಪುರಾತನ ಕಾರಣಿಕ ಕ್ಷೇತ್ರಗಳಲ್ಲಿ ಒಂದಾಗಿರುವ, ಆರ್ಯಾಪು ಗ್ರಾಮದ ಕಾರ್ಪಾಡಿಯ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ವಿಶೇಷವಾಗಿ ಶ್ರೀದೇವರಿಗೆ ಪ್ರತಿವರ್ಷವೂ ಒಂದು ಮಂಡಲ (48 ದಿನಗಳ ಕಾಲ) ವಿಶೇಷ ರಂಗಪೂಜಾ ಸೇವೆಯು ನೆರವೇರುತ್ತಿದೆ.
ಶ್ರೀಕ್ಷೇತ್ರವು 48 ದಿನಗಳ ಕಾಲ ನಿರಂತರವಾಗಿ ದೇವರಿಗೆ ರಂಗಪೂಜೆ ನಡೆಯುತ್ತಿರುವ ತಾಲೂಕಿನ ಎಕೈಕ ದೇವಸ್ಥಾನ ಎನ್ನಲಾಗುತ್ತಿದೆ. ಇಲ್ಲಿ ಪ್ರತಿ ವರ್ಷವೂ ಕಿರುಷಷ್ಠಿಗೆ ದೇವರ ವರ್ಷಾವಧಿ ಜಾತ್ರೋತ್ಸವವು ಪೂರ್ವಶಿಷ್ಠ ಸಂಪ್ರದಾಯದಂತೆ ನಡೆಯುತ್ತಿದೆ. ಜಾತ್ರೋತ್ಸವದ ಪೂರ್ವದಲ್ಲಿ 48 ದಿನಗಳ ಕಾಲ ಅಂದರೆ ಒಂದು ಮಂಡಲ ಅವಧಿಯಲ್ಲಿ ನಿರಂತರವಾಗಿ ಶ್ರೀದೇವರಿಗೆ ರಂಗಪೂಜೆ ನಡೆಸಲಾಗುತ್ತಿದೆ. 48ನೇ ದಿನ ದೊಡ್ಡ ರಂಗಪೂಜೆಯು ನಡೆಯುತ್ತಿರುವುದು ಇಲ್ಲಿನ ಮತ್ತೊಂದು ವಿಶೇತೆಯಾಗಿದೆ.
ಕ್ಷೇತ್ರದ ಸಾನಿಧ್ಯ ವೃದ್ಧಿ ಹಾಗೂ ಭಕ್ತಾದಿಗಳ ಶ್ರೇಯಸ್ಸಿಗಾಗಿ ಒಂದು ಮಂಡಲ ನಡೆಯುವ ರಂಗಪೂಜೆಯು ನ.18ರಿಂದ ಪ್ರಾರಂಭಗೊಂಡಿದ್ದು ಪ್ರತಿದಿನ ಸಂಜೆ 7.30ಕ್ಕೆ ಪೂಜೆ ನಡೆಯುತ್ತಿದೆ. ರಂಗ ಪೂಜೆಯ ಬಳಿಕ ಪ್ರತಿದಿನವೂ ಅನ್ನದಾನ ಸೇವೆಯು ನಡೆಯುತ್ತಿದೆ. ಪ್ರತಿದಿನ ನಡೆಯುವ ರಂಗ ಪೂಜಾ ಸೇವಾ ಕಾರ್ಯದಲ್ಲಿ ಊರ, ಪರವೂರ ಭಕ್ತಾದಿಗಳು ಸೇವೆ ಸಲ್ಲಿಸಿ ಕೃತಾರ್ಥರಾಗುತ್ತಿದ್ದಾರೆ. ದಿನವೊಂದಕ್ಕೆ 14 ಮಂದಿಗೆ ಪೂಜೆ ಸಲ್ಲಿಸಲು ಅವಕಾಶವಿದೆ. ಸೇವೆ ಸಲ್ಲಿಸುವ ಭಕ್ತಾದಿಗಳು ಮುಂಚಿತವಾಗಿ ದೇವಸ್ಥಾನದ ಕಚೇರಿಯನ್ನು ಸಂಪರ್ಕಿಸಬೇಕು.
ರಂಗಪೂಜೆ ಸೇವೆ ಸಲ್ಲಿಸುವ ಭಕ್ತಾಧಿಗಳು ದೇವಸ್ಥಾನ ಅಥವಾ ದೂರವಾಣಿ 9606515600 ನಂಬರನ್ನು ಸಂಪರ್ಕಸುವಂತೆ ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ಕಾರ್ಪಾಡಿ ಕ್ಷೇತ್ರವು ಸುಮಾರು 3000 ವರ್ಷಗಳ ಇತಿಹಾಸವಿರುವ ದೇವಾಲಯವಾಗಿದೆ. ಈ ಕ್ಷೇತ್ರವು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಷ್ಟೆ ಪ್ರಾಧಾನ್ಯತೆಯನ್ನು ಹೊಂದಿದೆ. ಸುಬ್ರಹ್ಮಣ್ಯ ದೇವರಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಲ್ಲಿಸುವ ಸೇವೆಯಷ್ಟೇ ಕಾರ್ಪಾಡಿ ಕ್ಷೇತ್ರದಲ್ಲಿಯೂ ಸಲ್ಲಿಸುವ ಸೇವೆಗಳು ಪ್ರಾಧಾನ್ಯತೆಯನ್ನು ಹೊಂದಿದ್ದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಲ್ಲಿಸಬೇಕಾದ ಸೇವೆಗಳನ್ನು ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಲ್ಲಿಸಿದರೂ ದೇವರು ಸಂತುಷ್ಟಗೊಳ್ಳುತ್ತಾರೆ ಎಂದು ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿದೆ. ಕಾರ್ಪಾಡಿಯ ಸುಬ್ರಹ್ಮಣ್ಯ ಆಲಯವು ಸುಮಾರು 2.50ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡು ಕಳೆದ ಎಪ್ರೀಲ್‌ನಲ್ಲಿ ಅದ್ಧೂರಿಯಾಗಿ ಬ್ರಹ್ಮಕಲಶೋತ್ಸವವೂ ನೆರವೇರಿರುತ್ತದೆ.