12 ಲಕ್ಷ ರೂ.ಅನುದಾನ: ಸ್ಪೀಕರ್ ಯು.ಟಿ.ಖಾದರ್ ಭರವಸೆ
ನೆಲ್ಯಾಡಿ: ಶತಮಾನೋತ್ಸವ ಸಂಭ್ರಮದಲ್ಲಿರುವ ಗೋಳಿತ್ತೊಟ್ಟು ಗ್ರಾಮದ ಗೋಳಿತ್ತಟ್ಟು ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯಲ್ಲಿ ಶತಮಾನೋತ್ಸವದ ಸವಿನೆನಪಿಗಾಗಿ ಶಾಲಾ ಶತಮಾನೋತ್ಸವ ಸಮಿತಿ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸಹಯೋಗದೊಂದಿಗೆ ನಿರ್ಮಾಣವಾಗಲಿರುವ ನೂತನ ಶಾಲಾ ಕೊಠಡಿಗಳ ಶಿಲಾನ್ಯಾಸಕ ಕಾರ್ಯಕ್ರಮ ಡಿ.7ರಂದು ಬೆಳಿಗ್ಗೆ ನಡೆಯಿತು. ತಿರ್ಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಾಧವ ಭಟ್ ಸರಳಾಯ ಅವರು ಪೂಜಾ ವಿಧಿವಿಧಾನ ನೆರವೇರಿಸಿದರು.
ರಾಜ್ಯ ವಿಧಾನಸಭೆ ಸಭಾಪತಿ ಯು.ಟಿ.ಖಾದರ್ ಫರೀದ್ ಅವರು ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಶತಮಾನೋತ್ಸವದ ಸವಿನೆನಪಿಗಾಗಿ ನಿರ್ಮಾಣವಾಗಲಿರುವ ಶಾಲಾ ಕಟ್ಟಡಕ್ಕೆ ಸರಕಾರದಿಂದ 12 ಲಕ್ಷ ರೂ.ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು. ಬಹಳಷ್ಟು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿದ ಮಾತ್ರಕ್ಕೆ ತಮ್ಮ ಜವಾಬ್ದಾರಿ ಮುಗಿಯಿತು ಎಂದು ಭಾವಿಸುತ್ತಾರೆ. ಅದು ಸಲ್ಲದು, ತಮ್ಮ ಮಕ್ಕಳ ಭವಿಷ್ಯದ ದೃಷ್ಠಿಯಿಂದ ಪೋಷಕರು ಅದರಲ್ಲೂ ತಾಯಂದಿರು ತಮ್ಮ ಮಕ್ಕಳಿಗಾಗಿ ಸಮಯ ಕೊಡಬೇಕು ಈ ರೀತಿಯಾದಾಗ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಮೂಡುತ್ತದೆ, ಮುಂದೊಂದು ದಿನ ಆತ ದೊಡ್ಡ ಸ್ಥಾನಕ್ಕೆ ಏರಿದರೆ ಪೋಷಕರಿಗೆ ಬೇರೆ ಯಾವುದೇ ಆಸ್ತಿ ಬೇಕಾಗಿಲ್ಲ, ಮಕ್ಕಳೇ ಆಸ್ತಿಯಾಗಿ ತಮ್ಮ ಬಡತನವನ್ನು ದೂರ ಮಾಡಬಲ್ಲರು ಮತ್ತು ಊರು ಅಭಿವೃದ್ಧಿ ಹೊಂದುವುದರಲ್ಲಿಯೂ ಯಾವುದೇ ಸಂಶಯ ಇಲ್ಲ ಎಂದರು.
ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ವಿಷ್ಣು ಪ್ರಸಾದ್ ಮಾತನಾಡಿ, ಸರ್ಕಾರ ಶಿಕ್ಷಣ ಇಲಾಖೆಯ ಅಭಿವೃದ್ಧಿಗೆ ಬಹಳಷ್ಟು ಯೋಜನೆಗಳನ್ನು ರೂಪಿಸಿದ್ದು, ಬಡವರ ಮಕ್ಕಳ ಕಲಿಕೆಗೆ ಬಹಳಷ್ಟು ಸಹಕಾರಿ ಆಗಿದೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಶಿಕ್ಷಣದಲ್ಲಿ ಪ್ರಗತಿ ಸಾಧಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷೆ ಸವಿತಾ ವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ವೆಂಕಪ್ಪ ಗೌಡ ಡೆಬ್ಬೇಲಿ, ಉಪಾಧ್ಯಕ್ಷ ನಾಸಿರ್ ಕೆ.ಎಸ್. ಸಮರಗುಂಡಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಗೋಪಾಲ ಗೌಡ, ಶಾಲಾ ಪೂರ್ವ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಅಬ್ದುಲ್ ಹಾರೀಫ್ ಹೊಸಮನೆ, ಶತಮಾನೋತ್ಸವ ಸಮಿತಿಯ ಕೋಶಾಧಿಕಾರಿ ಜನಾರ್ದನ ಗೌಡ ಪಠೇರಿ, ಗೋಳಿತ್ತೊಟ್ಟು ಗ್ರಾ.ಪಂ.ಉಪಾಧ್ಯಕ್ಷ ಬಾಬು ಪೂಜಾರಿ ಕಿನ್ಯಡ್ಕ, ಸದಸ್ಯರಾದ ಗುಲಾಬಿ ಕಿನ್ಯಡ್ಕ, ಜೀವಿತಾ ಪೆರಣ, ಅಕ್ಷರ ದಾಸೋಹ ನಿರ್ದೇಶಕ ವಿಷ್ಣು ಪ್ರಸಾದ್, ಕೋಲ್ಪೆ ಬಿ.ಜೆ.ಎಂ. ಸಂಘಟಕಾ ಕಾರ್ಯದರ್ಶಿ ಕೆ.ಕೆ.ಇಸ್ಮಾಯಿಲ್, ಅಶೋಕ ಎಂಟರ್‌ಪ್ರೈಸಸ್ ಮಾಲಕ ಇಕ್ಬಾಲ್ ಕೆ., ಮೂಡಬಿದಿರೆ ಆಳ್ವಾಸ್ ಕಾಲೇಜು ಉಪನ್ಯಾಸಕ ಅಜಿತ್ ಕುಮಾರ್ ಪಾಲೇರಿ, ಶಾಲಾ ಶತಮಾನೋತ್ಸವ ಸಮಿತಿ ಸದಸ್ಯರಾದ ವಾಯುಪ್ರಭಾ ಹೆಗ್ಡೆ ಶಾಂತಿಮಾರು, ತುಕ್ರಪ್ಪ ಗೌಡ ಮರಂದೆ, ವಿಶ್ವನಾಥ ಗೌಡ ಪೆರಣ, ಶಾಂತಿನಗರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪ್ರತಾಪ್ ಚಂದ್ರ ರೈ ಕುದ್ಮಾರುಗುತ್ತು, ಗೋಳಿತ್ತೊಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೊರಗಪ್ಪ ಗೌಡ ಕಲ್ಲಡ್ಕ, ಶಾಲಾ ಶತಮಾನೋತ್ಸವ ಪ್ರಚಾರ ಸಮಿತಿ ಸಂಚಾಲಕ ಎ.ಎಸ್.ಶೇಖರ ಗೌಡ ಅನಿಲಭಾಗ್, ಜಿ.ಪಂ.ಮಾಜಿ ಸದಸ್ಯ ಕೆ.ಕೆ.ಶಾಹುಲ್ ಹಮೀದ್, ರಝಾಕ್ ಸಮರಗುಂಡಿ, ಸಿವಿಲ್ ಇಂಜಿನಿಯರ್ ಶಿವಣ್ಣ ಪಿ.ಹೆಗ್ಡೆ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಜಯಂತಿ. ಬಿ.ಎಂ.ಸ್ವಾಗತಿಸಿದರು. ಶಾಲಾ ಸಹ ಶಿಕ್ಷಕಿ ತೇಜಸ್ವಿ ಅಂಬೆಕಲ್ಲು ವಂದಿಸಿದರು. ಶಾಲಾ ಪದವೀಧರ ಸಹಶಿಕ್ಷಕ ಅಬ್ದುಲ್ ಲತೀಫ್ ಸಿ., ಕಾರ್ಯಕ್ರಮ ನಿರೂಪಿಸಿದರು. ಶಾಲಾ ಸಹಶಿಕ್ಷಕಿ ಸಂಧ್ಯಾ ಬಿ., ಪದವೀಧರ ಸಹ ಶಿಕ್ಷಕಿ ಮನ್ವಿತಾ ಬಿ., ಗೌರವ ಶಿಕ್ಷಕಿ ಯಶಸ್ವಿನಿ ಕೆ.ಜಿ., ಆಂಗ್ಲ ಮಾಧ್ಯಮ ಶಿಕ್ಷಕಿ ಸುಜಯಾ ವಿವಿಧ ಕಾರ್ಯಕ್ರಮದಲ್ಲಿ ಸಹಕರಿಸಿದರು. ಶತಮಾನೋತ್ಸವ ಸಮಿತಿ, ಶಾಲಾ ಪೂರ್ವ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಬಾಲ್ಯದ ನೆನಪು ಮೆಲುಕು ಹಾಕಿದ ಖಾದರ್:
ಗೋಳಿತ್ತೊಟ್ಟು ಸಮೀಪದ ಕೋಲ್ಪೆ ನನ್ನ ತಾಯಿ ಊರು, ಚಿಕ್ಕವನಿದ್ದಾಗ ತಾಯಿಯ ಜೊತೆ ಇಲ್ಲಿಗೆ ಬಂದು ಇಲ್ಲಿನ ಮೈದಾನದಲ್ಲಿ ಆಟವಾಡುತ್ತಿದ್ದೆ ಎಂದು ಬಾಲ್ಯದ ನೆನಪನ್ನು ಸ್ಪೀಕರ್ ಯು.ಟಿ.ಖಾದರ್ ಅವರು ಮೆಲುಕು ಹಾಕಿದರು.
1 ಲಕ್ಷ ರೂ.ದೇಣಿಗೆ ಹಸ್ತಾಂತರ:
ಶಾಲಾ ಪೂರ್ವ ವಿದ್ಯಾರ್ಥಿ, ದಾನಿಯೂ ಆದ ಗೋಳಿತ್ತೊಟ್ಟು ದುರ್ಗಾಬೀಡಿ ಮಾಲಕ ಕೇಶವ ಪೂಜಾರಿ ಕಿನ್ಯಡ್ಕ ಅವರು ಶಾಲಾ ಶತಮಾನೋತ್ಸವ ಸಮಿತಿಗೆ ದೇಣಿಗೆಯಾಗಿ ರೂ.1 ಲಕ್ಷದ ಚೆಕ್ ಹಸ್ತಾಂತರಿಸಿದರು.