ಪುತ್ತೂರು:ವಿದ್ಯೆ, ಉದ್ಯೋಗ, ಸಂಪರ್ಕ ಧ್ಯೇಯವಾಕ್ಯದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ವ್ಯಾಪ್ತಿಗೊಳಪಟ್ಟ ಸಮಾಜ ಬಾಂಧವರಿಗಾಗಿ ಕೊಂಬೆಟ್ಟು ಜ್ಯೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಡಿ.8 ರಂದು ಅವಿಭಜಿತ ಪುತ್ತೂರು ತಾಲೂಕು ಮಟ್ಟದ ‘ಕೋಟಿ-ಚೆನ್ನಯ ಕ್ರೀಡಾಕೂಟ-2024’ದ ಉದ್ಘಾಟನೆ ಕಾರ್ಯಕ್ರಮ ನೆರವೇರಿತು.
ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್ ಎನ್.ಎಸ್.ಡಿರವರು ತೆಂಗಿನಕಾಯಿ ಒಡೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಆಶೀರ್ವಾದದಿಂದ ಹಲವಾರು ವರ್ಷಗಳ ಬಳಿಕ ಯುವವಾಹಿನಿ ಪುತ್ತೂರು ಘಟಕವು ದೊಡ್ಡ ಮಟ್ಟದಲ್ಲಿ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸುತ್ತಿದೆ. ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ. ಸೋಲು ಗೆಲುವು ಮುಖ್ಯವಲ್ಲ. ಬಿಲ್ಲವ ಸಮಾಜ ಬಾಂಧವರು ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿ ಎಂದರು.
ಪುತ್ತೂರು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಕಾಂತ್ ಬಿರಾವುರವರು ತ್ರೋಬಾಲ್ ಕ್ರೀಡಾಂಗಣವನ್ನು ಉದ್ಘಾಟಿಸಿ ಮಾತನಾಡಿ, ಪುತ್ತೂರಿನ ಯುವವಾಹಿನಿ ಘಟಕವು ಸಮಾಜದ ಅಭಿವೃದ್ಧಿಗೋಸ್ಕರ ಉತ್ತಮ ಕಾರ್ಯ ಮಾಡುತ್ತಿದೆ. ಯುವಸಮುದಾಯವನ್ನು ಒಗ್ಗೂಡಿಸಲು ಕ್ರೀಡೆಯಿಂದ ಮಾತ್ರ ಸಹಕಾರಿ. ಈ ನಿಟ್ಟಿನಲ್ಲಿ ಯುವಕರಿಗೆ ಕ್ರಿಕೆಟ್, ಮಹಿಳೆಯರಿಗೆ ತ್ರೋಬಾಲ್ ಕ್ರೀಡೆಯನ್ನು ಆಯೋಜಿಸುತ್ತಿದೆ ಎಂದರು.
ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಜಯಂತ ಬದಿನಾರುರವರು ಮಾತನಾಡಿ, ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಧ್ಯೇಯವಾಕ್ಯದಡಿಯಲ್ಲಿ ಪುತ್ತೂರಿನ ಯುವವಾಹಿನಿ ಘಟಕವು ಕಾರ್ಯ ನಿರ್ವಹಿಸುತ್ತಿದೆ. ಬಿಲ್ಲವ ಸಮಾಜ ಬಾಂಧವರು ಬಿಲ್ಲವ ಸಂಘ, ಯುವವಾಹಿನಿ ಸಂಘದಲ್ಲಿ ಪಾಲು ಪಡೆದು ಸಾಮಾಜಿಕ ಚಿಂತನೆಯೊಂದಿಗೆ ಕೆಲಸ ಮಾಡಬೇಕು ಎಂದರು.
ಗೌರವ:
ಈ ಸಂದರ್ಭದಲ್ಲಿ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಚಿದಾನಂದ ಸುವರ್ಣ, ಕೋಶಾಧಿಕಾರಿ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ಉದ್ಯಮಿ ಸ್ನೇಹ ಟೆಕ್ಸ್ಟೈಲ್ಸ್ನ ಸತೀಶ್ ಪೂಜಾರಿರವರನ್ನು ಯುವವಾಹಿನಿ ಅಧ್ಯಕ್ಷ ಜಯರಾಮ ಬಿ.ಎನ್ರವರು ಶಾಲು ಹೊದಿಸಿ ಗೌರವಿಸಿದರು.
52 ಗ್ರಾಮ ಸಮಿತಿ ಭಾಗಿ:
ಬಿಲ್ಲವ ಸಂಘ ಪುತ್ತೂರು ಇದರ ಪುತ್ತೂರು ತಾಲೂಕು ವ್ಯಾಪ್ತಿಯ ೫೨ ಗ್ರಾಮ ಸಮಿತಿಗಳಾದ ಪುತ್ತೂರು ನಗರ ಸಮಿತಿ, ಬಲ್ನಾಡು, ಬುಳೇರಿಕಟ್ಟೆ, ಕೊಡಿಪ್ಪಾಡಿ, ಕೆಮ್ಮಿಂಜೆ, ಪಡ್ನೂರು, ಚಿಕ್ಕಮುಡ್ನೂರು, ಬೆಳ್ಳಿಪ್ಪಾಡಿ, ಕೋಡಿಂಬಾಡಿ, ಕಬಕ, ಉಪ್ಪಿನಂಗಡಿ, ಹಿರೇಬಂಡಾಡಿ, ಬಜತ್ತೂರು, ಗೋಳಿತೊಟ್ಟು ಆಲಂತಾಯ, ಶಿರಾಡಿ, ಕೊಣಾಜೆ, ಸಿರಿಬಾಗಿಲು, ಇಚ್ಲಂಪಾಡಿ, ನೆಲ್ಯಾಡಿ, ಕೊಣಾಲು, ಕೌಕ್ರಾಡಿ, ಆರ್ಯಾಪು, ಕುರಿಯ, ಕುಂಜೂರುಪಂಜ, ಬೆಟ್ಟಂಪಾಡಿ, ಇರ್ದೆ, ಪಾಣಾಜೆ, ನಿಡ್ಪಳ್ಳಿ, ಒಳಮೊಗ್ರು, ಕೆಯ್ಯೂರು, ಕೆದಂಬಾಡಿ, ಕೊಳ್ತಿಗೆ, ಅರಿಯಡ್ಕ, ಪಾಲ್ತಾಡಿ, ಸುಳ್ಯಪದವು, ಪಡುವನ್ನೂರು, ನೆಟ್ಟಣಿಗೆ ಮುಡ್ನೂರು, ಬಡಗನ್ನೂರು, ಕಾವು, ನರಿಮೊಗರು, ಆನಡ್ಕ, ಶಾಂತಿಗೋಡು, ಸರ್ವೆ, ಮುಂಡೂರು, ಕಾಣಿಯೂರು, ಚಾರ್ವಾಕ, ಗೋಳ್ಪಾಡಿ, ಕುದ್ಮಾರು, ಬೆಳಂದೂರು, ಕಾಮಣ, ಸವಣೂರು, ಪುಣ್ಚಪ್ಪಾಡಿ, ಆಲಂಕಾರು, ಹಳೇನೇರಂಕಿ, ರಾಮಕುಂಜ, ಕೊಲ, ಪೆರಾಬೆ, ಕುಂತೂರು, ಬಲ್ಯ, ಕಡಬ, ಕುಟ್ರುಪ್ಪಾಡಿ, ಕೋಡಿಂಬಾಳ, ನೂಜಿಬಾಳ್ತಿಲ, ರೆಂಜಲಾಡಿ, ಐತೂರು, ಬಂಟ್ರ, 102 ನೆಕ್ಕಿಲಾಡಿ, ಕೊಂಬಾರು, ಬಿಳಿನೆಲೆ ಗ್ರಾಮ ಸಮಿತಿ ಕ್ರೀಡಾಕೂಟದಲ್ಲಿ ಭಾಗವಹಿಸಿತ್ತು.
ವೇದಿಕೆಯಲ್ಲಿ ಯುವವಾಹಿನಿ ಪುತ್ತೂರು ಘಟಕದ ಕ್ರೀಡಾ ನಿರ್ದೇಶಕ ಲೋಹಿತ್ ಕೆ.ಕಲ್ಕಾರ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಸಮಿತ್ ಪಿ. ಸ್ವಾಗತಿಸಿದರು. ಯುವವಾಹಿನಿ ಪುತ್ತೂರು ಘಟಕದ ಮಾಜಿ ಅಧ್ಯಕ್ಷ ಅವಿನಾಶ್ ಹಾರಾಡಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
ಸ್ಪರ್ಧೆಗಳು..
ಪುರುಷರಿಗೆ-ಓವರ್ ಆರ್ಮ್ ಕ್ರಿಕೆಟ್ ಹಾಗೂ ಹಗ್ಗ-ಜಗ್ಗಾಟ
ಮಹಿಳೆಯರಿಗೆ-ತ್ರೋಬಾಲ್ ಹಾಗೂ ಹಗ್ಗ-ಜಗ್ಗಾಟ
ಕನಸು ನನಸು…
ಹಲವಾರು ವರ್ಷಗಳಿಂದ ಸಮಾಜ ಬಾಂಧವರಿಗೋಸ್ಕರ ಕ್ರೀಡಾಕೂಟವನ್ನು ಆಯೋಜನೆ ಮಾಡುವ ಕನಸು ಇದೀಗ ನನಸಾಗಿದೆ. ನಮ್ಮ ಸಮಾಜ ಬಾಂಧವರಲ್ಲಿ ಅನೇಕ ಪ್ರತಿಭೆಗಳಿವೆ. ಈ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯವಾಗಿದೆ.
-ಜಯರಾಮ ಬಿ.ಎಮ್, ಅಧ್ಯಕ್ಷರು, ಯುವವಾಹಿನಿ ಪುತ್ತೂರು ಘಟಕ