ಕೇಂದ್ರ ಪ್ರವಾಸೋದ್ಯಮ ಇಲಾಖೆಗೆ 55 ಕೋಟಿ ಪ್ರಸ್ತಾವನೆ: ಶಾಸಕ ಅಶೋಕ್ ರೈ
ಪುತ್ತೂರು: ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವನ್ನು ಅಭಿವೃದ್ದಿ ಮಾಡಿಯೇ ಸಿದ್ದ ಎಂಬ ಪಣತೊಟ್ಟಿರುವ ಪುತ್ತೂರು ಶಾಸಕ ಅಶೋಕ್ ರೈ ಅವರು ಐತಿಹಾಸಿಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ದಿ ಮಾಡುವ ಬಗ್ಗೆ ಕೇಂದ್ರ ಪ್ರವಾಸೋದ್ಯಮ ಇಲಾಖೆಗೆ ಕರ್ನಾಟಕ ರಾಜ್ಯ ಸರಕಾರದ ಮೂಲಕ ಪ್ರಸ್ತಾವನೆಯನ್ನು ಕಳುಹಿಸಿದ್ದಾರೆ.
ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನವನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಈಗಾಗಲೇ ನೀಲಿ ನಕಾಶೆಯನ್ನು ರೂಪಿಸಲಾಗಿದೆ. ದೇವಸ್ಥಾನದ ಸುತ್ತಮುತ್ತಲಿರುವ ಅನಾಧಿ ಕಾಲದ ಕಟ್ಟಡಗಳನ್ನು ತೆರವು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಕ್ರಿಯೆಗಳು ಚಾಲ್ತಿಯಲ್ಲಿದೆ. ದೇವಸ್ಥಾನವನ್ನು ಅಭಿವೃದ್ದಿಪಡಿಸುವ ಮೂಲಕ ಇಲ್ಲಿನ ಭಕ್ತಾದಿಗಳ ಬಹುಕಾಲದ ಬೇಡಿಕೆಯನ್ನು ಈಡೇರಿಸುವ ಹುಮ್ಮಸ್ಸಿನಿಂದ ಶಾಸಕರಾದ ಪ್ರಾರಂಭದಿಂದಲೇ ಇದರ ಕೆಲಸ ಕಾರ್ಯಗಳು ಇಲಾಖಾ ಮಟ್ಟದಲ್ಲಿ ನಡೆಯುತ್ತಲೇ ಇದೆ.
55 ಕೋಟಿ ರೂ. ಪ್ರಸ್ತಾವನೆ
ಕೇಂದ್ರ ಪ್ರವಾಸೋದ್ಯಮ ಇಲಾಖೆಯ ’ಪ್ರಷಾದ್’ ಯೋಜನೆಯಡಿ ದೇವಸ್ಥಾನವನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಶಾಸಕರು ಕೇಂದ್ರ ಪ್ರವಾಸೋದ್ಯಮ ಇಲಾಖೆಯ ರಾಜ್ಯ ಇಲಾಖೆಗೆ ಅ.25ರಂದು ಪ್ರಸ್ತಾವನೆಯನ್ನು ಕಳುಹಿಸಿದ್ದರು. ಇದೇ ಪ್ರಸ್ತಾವನೆಯನ್ನು ರಾಜ್ಯ ಸರಕಾರದ ಮೂಲಕ ಕೇಂದ್ರ ಪ್ರವಾಸೋದ್ಯಮ ಇಲಾಖೆಗೆ ಕಳುಹಿಸಲಾಗಿದೆ. ರಾಜ್ಯ ಸರಕಾರ ಕೂಡಾ ಈ ಯೋಜನೆಯಡಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನವನ್ನು ಪ್ರಷಾದ್ ಯೋಜನೆಯಡಿ ಸೇರಿಸಿ ದೇವಳವನ್ನು ಅಭಿವೃದ್ದಿ ಮಾಡುವಲ್ಲಿ 55 ಕೋಟಿ ಅನುದಾನವನ್ನು ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಡಿ.6ರಂದು ಈ ಪ್ರಸ್ತಾವನೆಯನ್ನು ಕೇಂದ್ರ ಪ್ರವಾಸೋದ್ಯಮ ಇಲಾಖೆಗೆ ಕಳುಹಿಸಲಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ದೇವಸ್ಥಾನಕ್ಕೆ ಹೊಸ ಮೆರುಗು
ಕೇಂದ್ರತ ಪ್ರವಾಸೋದ್ಯಮ ಇಲಾಖೆಯ ಪ್ರಷಾದ ಯಹೋಜನೆಯಡಿ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವನ್ನು ಆಯ್ಕೆ ಮಾಡಿದ್ದಲ್ಲಿ ದೇವಸ್ಥಾನ ಹೊಸ ಮೆರುಗನ್ನು ಪಡೆಯಲಿದೆ. ದೇವಸ್ಥಾನದಲ್ಲಿ ಮಹಾದ್ವಾರ, ವೇಸ್ಟ್ ಮ್ಯಾನೇಜ್‌ಮೆಂಟ್, ದೇವಳದ ಕಚೇರಿ, ಮೂಲಭೂತ ಸೌಕರ್ಯ, ಗೋಶಾಲೆ, ಮಂಟಪ, ವಿಐಪಿ ವ್ಯವಸ್ಥೆ, ಪ್ರಸಾದ ಕೌಂಟರ್, ಆವರಣಗೋಡೆ, ಆಡಿಟೋರಿಯಂ ಕಲಾಗ್ರಾಮ, ಯಾತ್ರಿ ನಿವಾಸ್, ಹೊಸ ವಿನ್ಯಾಸದ ಬೆಳಕಿನ ವ್ಯವಸ್ಥೆ, ಮತ್ತು ಲ್ಯಾಂಡ್ ಸ್ಕೇಪ್ ಇಲ್ಲಿ ನಿರ್ಮಾಣವಾಗಲಿದೆ.
ಫಾಲೋಅಪ್ ಮಾಡಿ : ಸಂಸದರಿಗೆ ಮನವಿ ಮಾಡಿದ ಅಶೋಕ್ ರೈ
ಕೇಂದ್ರ ಸರಕಾರದ ಪ್ರವಾಸೋದ್ಯಮ ಇಲಾಖೆಯ ಪ್ರಷಾದ್ ಯೋಜನೆಯಡಿ ದೇವಳದ ಅಭಿವೃದ್ದಿಗೆ ಕರ್ನಾಟಕ ರಾಜ್ಯ ಸರಕಾರದ ಮೂಲಕ 55 ಕೋಟಿ ರೂ.ಪ್ರಸ್ತಾವನೆಯನ್ನು ಈಗಾಗಲೇ ಕಳುಹಿಸಲಾಗಿದೆ. ಸಂಸದರಾದ ನೀವು ಇದನ್ನು ಫಾಲೋಅಪ್ ಮಾಡುವಲ್ಲಿ ಸಹಕಾರ ನೀಡಬೇಕು. ನಮ್ಮೂರಿನ ದೇವಸ್ಥಾನ ಅಭಿವೃಧ್ದಿಯಾಗಬೇಕು ಇದಕ್ಕೆ ಸಹಕಾರ ನೀಡುವಂತೆ ಮತ್ತು ಕೇಂದ್ರ ಪ್ರವಾಸೋದ್ಯಮ ಇಲಾಖೆ ಮತ್ತು ಸಚಿವರಿಗೆ ಒತ್ತಡ ತರುವ ಕೆಲಸವನ್ನು ಮಾಡಬೇಕು ಎಂದು ಸಂಸದರಾದ ಬ್ರಿಜೇಶ್ ಚೌಟ ಅವರಿಗೆ ಶಾಸಕ ಅಶೋಕ್ ರೈ ಮನವಿ ಮಾಡಿದ್ದಾರೆ.
ಧರ್ಮಸ್ಥಳ, ಸುಬ್ರಹ್ಮಣ್ಯ ಮಾದರಿಯಲ್ಲಿ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಅಭಿವೃದ್ದಿಯಾಗಬೇಕು. ಅಲ್ಲಿಗೆ ಬರುವ ಭಕ್ತಾಧಿಗಳು ಪುತ್ತೂರಿಗೂ ಭೇಟಿ ನೀಡಬೇಕು. ಇದಕ್ಕಾಗಿ ನಮ್ಮ ದೇವಸ್ಥಾನದಲ್ಲಿ ಯಾವ ಕೊರತೆಯೂ ಇರಬಾರದು. ಇಲ್ಲಿ ಏನೆಲ್ಲಾ ಕೆಲಸಗಳು ಆಗಬೇಕೋ ಅದೆಲ್ಲವೂ ಆಗಬೇಕು. ವಿಶಾಲವಾದ ಜಾಗದಲ್ಲಿ ಕಂಗೊಳಿಸುತ್ತಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ದಿಯಾಗಬೇಕು ಎಂಬ ಕನಸು ನನ್ನದು. ಇದಕ್ಕಾಗಿ ಕೇಂದ್ರ ಸರಕಾರದ ಪ್ರವಾಸೋದ್ಯಮ ಇಲಾಖೆಯಿಂದ 55 ಕೋಟಿ ಅನುದಾನಕ್ಕೆ ರಾಜ್ಯ ಸರಕಾರದ ಮೂಲಕ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಎಲ್ಲರ ಸಹಕಾರದಿಂದ ಆ ಅನುದಾನ ನಮಗೆ ದೊರೆಯಬೇಕು. ಅನುದಾನ ಬಂದರೆ ದೇವಸ್ಥಾನ ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ದಿಯಾಗಲಿದೆ. ಇಲ್ಲಿ ಅಗತ್ಯವಾಗಿ ಬೇಕಾದ ಎಲ್ಲಾ ಅಭಿವೃದ್ದಿ ಕಾಮಗಾರಿಗಳು ಪೂರ್ಣಗೊಳ್ಳಲಿದೆ. ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನ ಒಂದು ಪ್ರಸಿದ್ದ ಐತಿಹಾಸಿಕ ಧಾರ್ಮಿಕ ಕೇಂದ್ರವಾಗಿ ಮತ್ತಷ್ಟು ಮೆರುಗನ್ನು ಪಡೆಯಲಿದೆ.
ಅಶೋಕ್ ರೈ, ಶಾಸಕರು, ಪುತ್ತೂರು